Advertisement

ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸೂಚನೆ

09:27 PM Jun 02, 2019 | Team Udayavani |

ಹಾಸನ: ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ನೆನಗುದಿಗೆ ಬಿದ್ದಿರುವ ಹಾಗೂ ಮಂಜೂರಾಗಿರುವ ಹೊಸ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕೆಂದು ಲೋಕೋಪಯೋಗಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ತಾಲೂಕು ಆಡಳಿತಗಳು ವಹಿಸಿಕೊಳ್ಳಬೇಕು. ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ನಿರಂತರ ನಿಗಾವಸಬೇಕು ಎಂದು ನಿರ್ದೇಶನ ನೀಡಿದರು.

ಉದ್ಯೋಗ ಖಾತರಿ ಸದ್ಬಳಕೆಯಾಗಲಿ: ಯಾವುದೇ ಗ್ರಾಮದಲ್ಲೂ ಬರದಿಂದ ಜನರು ಗುಳೆ ಹೋಗುವಂತಾಗಬಾರದು. ಉದ್ಯೋಗ ಖಾತರಿ ಯೋಜನೆ ಸಮರ್ಪಕ ಸದ್ಬಳಕೆಯಾಗಬೇಕು. ಆ ಮೂಲಕ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಯೋಜನೆಗಳನ್ನು ಸಂಯೋಜಿಸಿ ಕೃಷಿ ಉತ್ಪಾದಕತೆ ಹೆಚ್ಚಿಸುವ ಚಟುವಟಿಕೆ ನಡೆಸಿ ಎಂದು ಸಲಹೆ ನೀಡಿದ ಸಚಿವರು, ಅರಸೀಕೆರೆ ತಾಲೂಕಿನಲ್ಲಿ ಈಗಾಗಲೇ ಬಹುಗ್ರಾಮ ಕುಡಿಯುವ ನೀರಿಗೆ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ತೀವ್ರ ಸಮಸ್ಯಾತ್ಮಕ ಗ್ರಾಮಗಳಿಗೆ ಮೊದಲು ನೀರು ಪೂರೈಸಲು ಆದ್ಯತೆ ನೀಡಿ ಎಂದು ಹೇಳಿದರು.

ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವ ವಿದ್ಯುತ್‌ ಪ್ರಸರಣ ನಿಗಮದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು. ಪ್ರತಿ ಗ್ರಾಮಕ್ಕೆ ಹಾಗೂ ಸಾರ್ವಜನಿಕರ ಅನುಕೂಲದ ಯೋಜನೆಗಳಿಗೆ ವಿದ್ಯುತ್‌ ಸಂಪರ್ಕ ಬೇಗ ಒದಗಿಸಬೇಕು. ಕುಡಿಯುವ ನೀರಿನ ಯೋಜನೆಗಳನ್ನು ಯಾವುದೇ ವಿಳಂಬಲ್ಲದೇ ಸಂಪರ್ಕ ಕಲ್ಪಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ಆದ್ಯತೆ: ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ದಿ ತಮ್ಮ ಆದ್ಯತೆಯಾಗಿದ್ದು ಶೈಕ್ಷಣಿಕ ಯೋಜನೆಗಳಿಗೂ ಅಷ್ಟೇ ಮನ್ನಣೆ ನೀಡಲಾಗುತ್ತಿದೆ. ಶಾಲಾ- ಕಾಲೇಜು ಕಟ್ಟಡಗಳು, ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆ, ವಸತಿ ನಿಲಯ, ಕಾಮಗಾರಿಗಳು ತ್ವರಿತವಾಗಿ ಮುಗಿಯಬೇಕು ವಿದ್ಯಾರ್ಥಿಗಳಿಗೆ ಹೆಚ್ಚಿನ ಗುಣಮಟ್ಟದ ಕಲಿಕಾ ಸೌಲಭ್ಯ ಜಿಲ್ಲೆಯಲ್ಲಿ ದೊರೆಯಬೇಕು ಎಂದು ಸಚಿವರು ಹೇಳಿದರು.

Advertisement

ವಿವಿಧ ಇಲಾಖಾ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದರೆ ಅಂತಹ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸುವ ನಿಟ್ಟಿನಲ್ಲಿ ಅಗತ್ಯರುವ ಸ್ಥಳಗಳನ್ನು ಗುರುತಿಸಿದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ಜಿಲ್ಲಾಧಿಕಾರಿಯವರು ಹಾಗೂ ಲೋಕೋಪಯೋಗಿ ಇಲಾಖಾ ಕಾರ್ಯಪಾಲಕ ಅಭಿಯಂತರರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸೂಚನೆ ನೀಡಿದರು.

ಚಿಪ್ಪಿನಕಟ್ಟೆಯಲ್ಲಿ ಮಾದರಿ ಶಾಲೆ: ಬಹುತೇಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರೇ ವಾಸಿಸುತ್ತಿರುವ ಚಿಪ್ಪಿನಕಟ್ಟೆ ಸೇರಿದಂತೆ 4 ಕಡೆಗಳಲ್ಲಿ ಒಂದರಿಂದ ದ್ವಿತೀಯ ಪಿಯುಸಿ ವರೆಗೆ ಸರ್ಕಾರಿ ಇಂಗ್ಲಿಷ್‌ ಶಾಲೆ ಪ್ರಾರಂಭಿಸಲು ಯೋಜಿಸಲಾಗಿದೆ. ಇದಕ್ಕೆ ಅಗತ್ಯ ಕ್ರಿಯಾ ಯೋಜನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿಗಳ ಪ್ರಗತಿಯ ಬಗ್ಗೆ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲೆಯಲ್ಲಿ ಯಾವುದೇ ಅರ್ಹ ವಯೋವೃದ್ದರು ದಿವ್ಯಾಂಗರು, ವಿಧವೆಯರು ಮಾಸಿಕ ಪಿಂಚಣಿ ಯೋಜನೆಯಿಂದ ಹೊರಗುಳಿಯಬಾರದು. ಸಂಬಂಧಪಟ್ಟ ತಹಶೀಲ್ದಾರರು ಗ್ರಾಮ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಎಲ್ಲಾ ತಾಲ್ಲೂಕುಗಳಲ್ಲಿಯೂ ಅಕ್ರಮ, ಸಕ್ರಮ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಸಚಿವ ರೇವಣ್ಣ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್‌.ವಿಜಯ್‌ಪ್ರಕಾಶ್‌ ಅವರು ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರುಗಳ ಮೇವಿನ ಲಭ್ಯತೆ, ಉದ್ದೇಶಿತ ಹೊಸ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾಡಳಿತಕ್ಕೆ ವರದಿ ನೀಡಿ: ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಂಜಿನಿಯರುಗಳು ಪ್ರತಿವಾರ ಗ್ರಾಮವಾರು ಪರಿಸ್ಥಿತಿ ಅವಲೋಕಿಸಿ ಸಮಸ್ಯೆ ನಿಭಾಯಿಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು.
ಅಗತ್ಯವಿರುವ ಕಡೆ ಮತ್ತು ನೀರು ಲಭ್ಯವಾಗುವ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಸಿ, ಅನಿವಾರ್ಯವಾದರೆ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಸಬೇಕು. ಸ್ಥಳೀಯವಾಗಿ ಹಾಲು ಉತ್ಪಾದಕರ ಸಂಘಗಳ ಸಹಕಾರದೊಂದಿಗೆ ಸಮನ್ವಯ ಸಾಧಿಸಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next