Advertisement

Sagara: ಅರಣ್ಯವಾಸಿಗಳಿಗೆ ನೋಟಿಸ್… ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಕ್ರೋಶ

04:03 PM Jul 03, 2023 | Team Udayavani |

ಸಾಗರ: ಶಿವಮೊಗ್ಗ ಜಿಲ್ಲೆಯ ವಿವಿಧ ಉಪವಿಭಾಗದ ಅರಣ್ಯ ಹಕ್ಕು ಸಮಿತಿಯಿಂದ ಅಸ್ತಿತ್ವವಿಲ್ಲದ ಅರಣ್ಯ ಹಕ್ಕು ಸಮಿತಿ ಮೂಲಕ ಅರಣ್ಯವಾಸಿಗಳಿಗೆ ನೋಟಿಸ್ ಜಾರಿಗೊಳಿಸುತ್ತಿರುವುದನ್ನು ಖಂಡಿಸಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ವತಿಯಿಂದ ಸೋಮವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ್, ಸರ್ಕಾರ ಬದಲಾವಣೆ ಹಿನ್ನೆಲೆಯಲ್ಲಿ ಅರಣ್ಯಹಕ್ಕು ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಅಸ್ತಿತ್ವದಲ್ಲಿ ಇಲ್ಲದ ಅರಣ್ಯ ಹಕ್ಕು ಸಮಿತಿ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸುತ್ತಿದೆ. ಜನಪ್ರತಿನಿಧಿಗಳೇ ಇಲ್ಲದೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮಿತಿ ಸಭೆ ನಡೆಸಿದರೆ ಜನರಿಗೆ ನ್ಯಾಯ ಸಿಗುವುದಿಲ್ಲ. ಸಾಗರ ತಾಲೂಕಿನ ಜೋಗ ಸೇರಿದಂತೆ ಬೇರೆಬೇರೆ ಕಡೆ ಅರಣ್ಯ ಇಲಾಖೆ ಅರಣ್ಯವಾಸಿಗಳಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಭೀತಿಯನ್ನು ಹುಟ್ಟಿಸುತ್ತಿರುವುದು ಖಂಡನೀಯ. ಹಾಲಿ ಇರುವ ಅರಣ್ಯ ಸಮಿತಿ ಕಾನೂನುಬಾಹಿರವಾಗಿದ್ದು, ಮುಂದಿನ ೧೦ ದಿನಗಳಲ್ಲಿ ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ರೈತರಿಗೆ ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಅರಣ್ಯವಾಸಿಗಳಿಗೆ ಸಹಜ ನ್ಯಾಯ ನೀಡಿ, ಸ್ಥಾನಿಕ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಆದರೆ ಅಧಿಕಾರಿಗಳು ಸಾವಿರಾರು ಅರ್ಜಿಗಳನ್ನು ವಜಾಗೊಳಿಸಿ ರೈತರನ್ನು ಆತಂಕಕ್ಕೆ ದೂಡುತ್ತಿದ್ದಾರೆ. ಜೋಗದಲ್ಲಿ ಕಾಗೋಡು ತಿಮ್ಮಪ್ಪ ಅವರ ಆಡಳಿತ ಅವಧಿಯಲ್ಲಿ ೬೦೦ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಈಗ ಅವರಿಗೆ ಅರಣ್ಯ ಇಲಾಖೆ ತಮ್ಮ ಜಾಗ ಎಂದು ಸ್ಪಷ್ಟನೆ ಕೇಳಿ ನೋಟಿಸ್ ಜಾರಿಗೊಳಿಸುತ್ತಿರುವುದು ಖಂಡನೀಯ. ತಕ್ಷಣ ಜೋಗದ ನಿವಾಸಿಗಳಿಗೆ ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಜೋಗ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಎಸ್.ಎಲ್.ರಾಜಕುಮಾರ್ ಮಾತನಾಡಿ, ಮುವತ್ತು ವರ್ಷಗಳಿಂದ ನಾವು ವಾಸಿಸುತ್ತಿರುವ ಭೂಮಿ ಅರಣ್ಯಕ್ಕೆ ಸೇರಿದ್ದೆಂದು ಇಲಾಖೆ ನೋಟಿಸ್ ನೀಡಿ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ೨೦೧೬ರಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ನಾವು ಅರ್ಜಿ ಸಲ್ಲಿಸಿದ್ದೇವೆ. ನಾವು ಸಲ್ಲಿಸಿದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು ಎಲ್ಲರಿಗೂ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ನೀಡಿದ್ದು ಕಾನೂನುಬಾಹಿರವಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿದರು. ಪ್ರತಿಭಟನೆಯಲ್ಲಿ ಲಕ್ಷ್ಮೀರಾಜು, ವೀರಭದ್ರ ನಾಯ್ಕ್, ಸುರೇಶ್ ಇನ್ನಿತರರು ಹಾಜರಿದ್ದರು.

Advertisement

ಇದನ್ನೂ ಓದಿ: 10,000 ಕಿಮೀ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳಿಗೆ 4.5 ಲಕ್ಷ ಕೋಟಿ ರೂ.ಹೂಡಿಕೆ: ಗಡ್ಕರಿ

Advertisement

Udayavani is now on Telegram. Click here to join our channel and stay updated with the latest news.

Next