Advertisement
ಇದನ್ನೂ ಓದಿ:ಕನ್ನಡದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ನಿಧನ
Related Articles
Advertisement
ಬಹುಶಃ ಕರ್ನಾಟಕದ ಸಮಕಾಲೀನ ವಿಚಾರಗಳ ಬಗ್ಗೆ ನಿರ್ಭಿಡೆಯಿಂದ ಸ್ಪಂದಿಸುವ, ಪ್ರತಿಕ್ರಿಯಿಸುವ ಸಾಹಿತಿಗಳ ಪೈಕಿ ಪ್ರೊ.ಯು.ಆರ್.ಅನಂತಮೂರ್ತಿ ಹಾಗೂ ಚಂಪಾ ಮೊದಲಿಗರಾಗಿದ್ದರು. ಆದರೆ ಇವರಿಬ್ಬರ ನಡುವೆಯೇ ಅಳಿಸಲಾಗದ ಕಂದರವಿತ್ತು. ಅನಂತಮೂರ್ತಿಯವರ ದ್ವಂದ್ವ ನಿಲುವುಗಳನ್ನು ಚಂಪಾ ಬಹುವಾಗಿ ಕಾಡುತ್ತಿದ್ದರು. “ಅನಂತಮೂರ್ತಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಲ್ಲ, ಹೊಡೆದುಕೊಂಡಿದ್ದು” ಎಂದೊಮ್ಮೆ ನೇರವಾಗಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅನಂತಮೂರ್ತಿ “ಚಂಪಾ ಚೇಳಿನಂತೆ ಆಗಾಗ ಕುಟುಕುತ್ತಾ ಇರುತ್ತಾರೆ’’ ಎಂದು ವಿವಾದ ತಿಳಿಗೊಳಿಸಲು ಯತ್ನಿಸಿದರೆ, “ನಾನು ಚೇಳಾದರೆ ಅನಂತಮೂರ್ತಿ ಘಟಸರ್ಪ’’ ಎಂದು ತಿರುಗೇಟು ನೀಡಿದ್ದರು.
ಚಂಪಾ ಅವರ ಈ ಹಠ ಕೇವಲ ಸಾಹಿತ್ಯ ವಲಯಕ್ಕೆ ಮಾತ್ರ ಸೀಮಿತವಾದುದ್ದಲ್ಲ. ಅಧಿಕಾರಸ್ಥರನ್ನೂ ಅವರು ಕಾಡದೇ ಬಿಟ್ಟಿಲ್ಲ. ಡಾ.ಎಂ.ಎಂ.ಕಲಬುರ್ಗಿ ಅವರ ಕೊಲೆ ಪ್ರಕರಣದ ತನಿಖೆ ವಿಳಂಬವಾದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ತರಾಟೆಗೆ ತೆಗೆದುಕೊಂಡಿದ್ದು ಚಂಪಾ. ಸಾಹಿತಿಗಳು ಎಂದ ಮಾತ್ರಕ್ಕೆ ಪದ ಬರ‍್ಕೋತಾ ಇರೋದಲ್ಲೋ, ಸಮಕಾಲೀನ ಸ್ಥಿತಿಗತಿಗೆ ಸ್ಪಂದಿಸಬೇಕು ಎನ್ನುತ್ತಿದ್ದ ಚಂಪಾ ಅವರ ಪರಮ ಜಗಳಗಂಟುತನವೇ ಅವರ ಟ್ರೇಡ್ ಮಾರ್ಕ್ ಹಾಗೂ ಬಲವಾಗಿತ್ತು.
ಚಂಪಾ ಅವರ ಹೋರಾಟ ಇನ್ನುಳಿದ ಬುದ್ಧಿಜೀವಿಗಳ ರೀತಿ ದಂತಗೋಪುರದ ಒಳಗೆ ಕುಳಿತು ನಡೆಸಿದ್ದಲ್ಲ. ಅವರದ್ದು ಏನಿದ್ದರೂ ಬೀದಿ ಹೋರಾಟ. ಲಂಡನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾಗ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ್ದರ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಸೇರಿದ್ದರು. ಬಹುಶಃ ಸರಕಾರ ನೌಕರಿಯಲ್ಲಿದ್ದು ಸರಕಾರವನ್ನು ವಿರೋಧಿಸಿ ಜೈಲು ಸೇರಿದ ಸಾಹಿತಿಗಳ ಪೈಕಿ ಚಂಪಾ ಮೊದಲಿಗರಿರಬಹುದು. ಅದೇ ರೀತಿ ಗೋಕಾಕ್ ಚಳವಳಿಯ ಅಖಾಡಕ್ಕೆ ಡಾ.ರಾಜ್‌ಕುಮಾರ್ ಅವರನ್ನು ಕರೆತರುವಲ್ಲಿ ಚಂಪಾ ಪಾತ್ರ ಮಹತ್ವದ್ದಾಗಿತ್ತು. ಈ ಹೋರಾಟ ಯಶಸ್ವಿಯಾದಾಗ ರಾಜ್‌ಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಬೇಕೆಂದು ಪ್ರತಿಪಾದಿಸಿದ್ದೂ ಚಂಪಾ. ಇದೇ ಕಾರಣಕ್ಕಾಗಿ ಅವರು ಲಂಕೇಶ್ ಜತೆ ಮುನಿಸಿಕೊಂಡು ಆ ಪತ್ರಿಕೆಗೆ ಲೇಖನ ಬರೆಯುವುದನ್ನೇ ನಿಲ್ಲಿಸಿದ್ದರು.
ಚಂಪಾ ತಮ್ಮ ಹೋರಾಟದ ನೆಲೆಯನ್ನು ಧಾರವಾಡದಿಂದ ಬೆಂಗಳೂರಿಗೆ ಬದಲಾಯಿಸದೇ ಇದಿದ್ದರೆ ಇನ್ನಷ್ಟು ಪ್ರಖರವಾಗಿ ಬೆಳೆಯಬಹುದಿತ್ತು, ಬೆಳಗಬಹುದಿತ್ತು ಎಂಬ ಮಾತು ಸಾಹಿತ್ಯಿಕ ವಲಯದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಬೇಂದ್ರೆ, ಗೋಕಾಕ್‌ರಂಥ ಕವಿಗಳ ಜತೆಗೆ ಆರ್ದ್ರವಾದ ಪ್ರೀತಿಯನ್ನಿಟ್ಟುಕೊಂಡೇ ಅವರನ್ನು ಟೀಕಿಸುತ್ತಿದ್ದ ಚಂಪಾ ಅವರಂಥ ವಸ್ತುನಿಷ್ಠ ವ್ಯಕ್ತಿಗಳಿಲ್ಲದೇ ಕನ್ನಡದ ಸಾರ್ವಜನಿಕ ಬದುಕು ಇನ್ನು ಕಳೆ ಕಳೆದುಕೊಳ್ಳುವುದು ಸುಳ್ಳಲ್ಲ. ಧಾರವಾಡದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ಚಂಪಾ ಬರೆದಿದ್ದು ಕಡಿಮೆ. ಆದರೆ ಕನ್ನಡಕ್ಕಾಗಿ ಆಧಿಕಾರಸ್ಥರನ್ನು ಬಡಿಯುವುದು ಮಾತ್ರ ಜೀವನದ ಕೊನೆಯ ಕ್ಷಣದವರೆಗೂ ಮುಂದುವರಿಸಿದ್ದರು. ಉಸಿರು ನಿಲ್ಲುವವರೆಗೂ “ಕನ್ನಡ, ಕನ್ನಡ ಬರ‍್ರಿ ನಮ್ಮ ಸಂಗಡ” ಎನ್ನುತ್ತಿದ್ದರು ಚಂಪಾ. ಆ ಹೋರಾಟದ ಜೀವಿಗೊಂದು ಗೌರವಪೂರ್ವಕ ನಮನ.
*ರಾಘವೇಂದ್ರ ಭಟ್