Advertisement

ನೋಟ್‌ ರದ್ದತಿ ಮತ್ತು ಶನಿ ಮಹಾರಾಜನ ತೊಂದರೆಗಳು

10:09 AM Dec 31, 2016 | |

ಇದೀಗ ದೇಶದಲ್ಲಿ ನೋಟಿನ ಅಪಮೌಲ್ಯೀಕರಣದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಮೋದಿಯ ಪರವಾಗಿರುವವರಿಗೆ ನರೇಂದ್ರ ಮೋದಿ ಹೊಸ ಸ್ವರೂಪವನ್ನೇ ಭಾರತಕ್ಕೆ ಒದಗಿಸಲು ಶ್ರಮಿಸುತ್ತಿರುವ ಶಕಪುರುಷನಂತೆ ಕಾಣುತ್ತಿದ್ದಾರೆ. ನರೇಂದ್ರ ಮೋದಿ ವಿರೋಧಿಗಳಿಗೆ ಭಾರತವನ್ನು ಆರ್ಥಿಕ ಹಿನ್ನೆಡೆಗೆ ತಂದು ಪ್ರಪಾತಕ್ಕೆ ಉರುಳಿಸುತ್ತಿರುವ ವಿಚಾರಶೂನ್ಯರಾಗಿ ಕಾಣುತ್ತಿದ್ದಾರೆ. ನಿಷ್ಪಕ್ಷಪಾತಿಗಳಿಗೆ ಏನು ನಡೆಯುತ್ತಿದೆ ಎಂದು ತಿಳಿಯಲಾಗದ ಪ್ರಶ್ನೆಯೊಂದನ್ನು ಕೊರಳಿಗೆ ಸುತ್ತಿಕೊಂಡಂತಿದೆ. ಮೋದಿಯವರ ಪಾಲಿಗೆ ದೊರೆತೆ ಅದ್ಭುತ ಯಶಸ್ಸು ಸಾಡೆ ಸಾತಿ ಕಾಟ ನಡೆಯುತ್ತಿದ್ದರೂ ಶನೈಶ್ಚರನ ಬೆಂಬಲ ಇತ್ತೆ? ಖಂಡಿತಕ್ಕೂ ಶನೈಶ್ಚರನ ಬೆಂಬಲ ಮೋದಿಯವರಿಗೆ ಇಲ್ಲ. ಆದರೆ ಶನೈಶ್ಚರನನ್ನು ಹಾಗೂ ಹೀಗೂ ತುಸು ಸಾವರಿಸುವ ಮೋದಿಯವರ ಜಾತಕದ ಗುರುಗ್ರಹ ಮೋದಿಯವರನ್ನು ಕಾಡಲಿಕ್ಕೇ ಇರುವ ಶನೈಶ್ಚರನಿಂದ ಬಾಧೆಗೊಳಗಾಗಿದೆ. 

Advertisement

  ಮೋದಿ ಜಾತಕ ಕುಂಡಲಿಯಲ್ಲಿ ತಾನು ಯಾರಿಂದ ನರಳುತ್ತಿದ್ದೇನೋ ಅಂತ ಗ್ರಹವನ್ನು ತಾನು ಸ್ವತಃ ನರಳುತ್ತಿದ್ದರೂ ಬಹುದೊಡ್ಡ ವಿನಾಶಕ್ಕೆ ಕಾರಣವಾಗದ ಹಾಗೆ ಇನ್ನೊಂದು ಗ್ರಹ ಸಾವರಿಸುತ್ತಿದೆ. ಮೋದಿಯವರ ಜಾತಕದಲ್ಲಿ ಶನೈಶ್ಚರನಿಂದ ಗುರುಗ್ರಹ ನರಳಿದರೂ ಶನಿಗ್ರಹವನ್ನು ಸಂಭಾಳಿಸುವ ಕೆಲಸ ಮಾಡುತ್ತಿರುತ್ತದೆ. ಅವರ ವೈಯುಕ್ತಿಕ ಜೀವನದಲ್ಲಿ ಬಹುದೊಡ್ಡ ಸಮಸ್ಯೆಯಾಗಬಹುದಿದ್ದ ವಿಚಾರವೊಂದನ್ನು ಗುರು ತಡೆದಿರುವ ರೀತಿ ಅದ್ಭುತ. ನರಳಿಸಲೆಂದೇ ಸನ್ನದ್ಧನಾಗಿರುವ ಶನೈಶ್ಚರ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯವರನ್ನು ನಿಶ್ಚಿತಕಾರಣಗಳಿಗಾಗಿ ಪ್ರದಾನಿ ಪಟ್ಟ ಏರದಿರುವಂತೆ ತಡೆ ಒಡ್ಡಲಿಲ್ಲ. ಏಕೆಂದರೆ ತಾನು ಉತ್ಛನಾಗಿರಬೇಕಾದ ತುಲಾರಾಶಿಯಲ್ಲಿ ಕ್ರೂರಿಯಾಗಿರಲಿಲ್ಲ. ಜೊತೆಗೆ ಮೋದಿಯವರಿಗೆ ಪರೋತ್ಛ ಅಧಿಕಾರ ಕೊಡಿಸುವ ವಿಚಾರದಲ್ಲಿ ಕೌಟುಂಬಿಕ ವಿಚಾರದಲ್ಲಿ ಒಳಿತುಗಳಿಗೆ ಕಾರಣನಾಗುವ ಗುರು ಕರ್ಕಾಟಕದಲ್ಲಿ ಉಚ್ಛಾನಾಗಿದ್ದು, ಭಾಗ್ಯಕ್ಕೆ ಉತ್ತಮವಾದುದನ್ನು ಚಂದ್ರ ದಶಾವೂ ಆಗಿದ್ದ ಕಾರಣದಿಂದಾಗಿ ಪವಾಡವೋ ಎನ್ನುವಂತೆ ಚಂದ್ರನಿಗೆ ತನ್ನ ಭುಕ್ತಿಯ ಕಾಲದ ಸರ್ವತ್ರ ಬಲವನ್ನು ಧಾರೆ ಎರೆದು ಗುರುಬಲದ ಸೊಗಸೂ ಹೊಂದಿಕೊಂಡಿದ್ದರಿಂದ ಮೋದಿಯವರನ್ನು ಅನುಗ್ರಹಿಸಿದ. 

 ಇದೀಗ ಚಂದ್ರದಶಾ ಕಾಲದಲ್ಲಿ ಗುರುಭುಕ್ತಿ ಮುಗಿದು ಈಗಿನ ಶನಿಭುಕ್ತಿಯಲ್ಲಿ ಎಂದೂ ಮಾತಾಡಲು ಹಿಂಜರೆಯದ ಮೋದಿಯವರನ್ನು ಸ್ಪಷ್ಟವಾದ ಯಾವ ಮಾತುಗಳನ್ನೂ ಆಡದಂತೆ ಶನೈಶ್ಚರ ತಡೆದ. ಬಂಗಾಲ, ಬಿಹಾರದಂತ ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಸಂದರ್ಭಗಳಲ್ಲಿ ಮೋದಿಯವರ ವರ್ಚಸ್ಸು ದಾರುಣ ಸ್ಥಿತಿಗೆ ತಲುಪುವಂತೆ ಮಾಡಿದ. ಗೋಚರದಲ್ಲಿ ಸಧ್ಯ ಗುರುಬಲವಿದ್ದು ಗುರುವು ಲಾಭದಲಿದ್ದಾನೆ. ಆದರೆ 17.11.2016 ರಿಂದ ಬುಧ ಭುಕ್ತಿ ನಡೆಯುತ್ತಿದ್ದು ಬುಧ ಮೋದಿಯವರ ಜಾತಕದಲ್ಲಿ ಅಷ್ಟಮ ಸ್ಥಾನ ಹಾಗೂ ಲಾಭದ ಅಧಿಪತಿಯಾಗಿದ್ದಾನೆ. 

ಮೋದಿಯವರನ್ನು ಕಷ್ಟಕ್ಕೆ ಒಡ್ಡಿದ್ದಾನೆ. ಮೋದಿಯವರ ಜಾತಕದಲ್ಲಿ ಬಹುಮುಖ್ಯವಾದ ರವಿಯ ಜೊತೆಗೆ ಕಾಂತಿ ಕಳೆದುಕೊಂಡು ಉತ್ತರಾ ನಕ್ಷತ್ರದಲ್ಲಿ ಕುಳಿತ ಕೇತುವಿನೊಂದಿಗೆ ಬುದ್ಧಿಯೋಗ ಕೊಟ್ಟಿದ್ದಾನೆ. ಇದೀಗ ಗೋಚರದಲ್ಲಿ ಪೂರ್ವಪುಣ್ಯದಲ್ಲಿ ಹುಟ್ಟಿದಾಗ ಇದ್ದ ರಾಹು ಕರ್ಮ ಕ್ಷೇತ್ರದಲ್ಲಿದ್ದಾನೆ. ಮಾತು, ಲಾಭ, ಬುದ್ಧಿ, ವರ್ಚಸ್ಸುಗಳೆಲ್ಲವೂ ಮೋದಿಯವರ ಪಾಲಿಗೆ ಸೂಕ್ಷ್ಮವಾದ ಸೂಜಿಯ ಮೊನೆಯ ಮೇಲೆ ನಿಂತಿದೆ. ತನ್ನ ಭುಕ್ತಿಕಾಲ ಬಿಡುವ ಸುಮಾರು ಹತ್ತು ದಿನಗಳ ಮುಂಚೆ ಶನೈಶ್ಚರ ತನಗೆ ಎಂದೂ ಹಿತಕಾರಿಯಾಗಿರದ ಕುಜಗ್ರಹದೊಡನೆ ಪರಿವರ್ತನಾ ಯೋಗ ಪಡೆದಿದ್ದಾಗ 1000 ಹಾಗೂ 500 ನೋಟುಗಳ ಅಮಾನ್ಯಿàಕರಣ ಮೋದಿಯವರಿಂದ ಮಾಡಿಸಿದ್ದಾನೆ. 

ಇಂಥದೊಂದು ಅಮಾನ್ಯಿàಕರಣ ದೇಶಕ್ಕೆ ಬೇಕಿತ್ತೆ? ಅನಿವಾರ್ಯವಾಗಿದ್ದರೆ ಮೋದಿ ಒಂಟಿಯಾಗಿ ತೆಗೆದುಕೊಂಡ ನಿರ್ಧಾರದ ಕಾರಣಕ್ಕಾಗಿನ ಯಶಸ್ಸು ಅಥವಾ ಅಪಯಶಸ್ಸಿಗೆ ಎಷ್ಟು ಪಾತ್ರರು? ನೋಟು ರದ್ದತಿಯಿಂದ ಮೋದಿ ಗಟ್ಟಿಯಾದರೆ? ಇದು ಬಿಲಿಯನ್‌ ಡಾಲರ್‌ ಪ್ರಶ್ನೆ. ಒಬ್ಬೊಬ್ಬರು ಒಂದೊಂದು ಉತ್ತರ ಕೊಡುತ್ತಿದ್ದಾರೆ. ಈ ಲೇಖನ ಪ್ರಕಟವಾಗುವ ಹೊತ್ತಿಗೆ ನೋಟು ರದ್ಧತಿಯ ವಿಚಾರ ಒಂದು ನಿರ್ಣಾಯಕ ಹಂತವನ್ನು ತಲುಪುತ್ತದೆ. 

Advertisement

ಬ್ಯಾಂಕಿನವರೇ ಮೋದಿಯವರ ಯೋಜನೆಯನ್ನು ಬಹುತೇಕ ಮೋದಿಯವರ ಯೋಜನೆಯನ್ನು ವಿಫ‌ಲಗೊಳಿಸಿದರು ಎಂಬ ಆರೋಪ ಕೇಳಿ ಬರುತ್ತಿದೆ. ಪಾರ್ಲಿಮೆಂಟಿನಲ್ಲಿ ಮೋದಿ ಮಾತನಾಡಿಲ್ಲ ಎಂಬ ಆರೋಪವಿದೆ. ಬಹುತೇಕ ಎಟಿಎಂಗಳು ದುರಸ್ತು ಅಥವಾ ನಗದು ಪೂರೈಕೆಗಳಿಲ್ಲ ಎಂಬ ನಾಮಫ‌ಲಕ ಹೊತ್ತಿವೆ. ಭ್ರಷ್ಟರನ್ನು ಹಿಡಿಯುತ್ತೀರಾದರೆ ನಾವು ನಿಮ್ಮೊಂದಿಗಿದ್ದೇವೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. 

ಸರಕಾರ ಕಾಳಧನದ ಕುರಿತು ತಿಳಿಸಿದ ಅಂಕಿಅಂಶಗಳು ಬ್ಯಾಂಕುಗಳಿಗೆ ಸುನಾಮಿಯ ಅಲೆಗಳಂತೆ ಬಂದ ಅಮಾನ್ಯಗೊಂಡ ನೋಟುಗಳು ತಾಳೆಯಾಗುತ್ತಿಲ್ಲ. ದಿನಕ್ಕೊಂದು ರೀತಿಯ ಆರ್‌ ಬಿ ಐ ಪ್ರಕಟಣೆಗಳು ಹೊರಬಂದವು. ಕೆಲವು ಹಿಂದೆ ಸರಿದವು. ಜನರಿಗೆ ಬೇಕಾಗುವ ಹಾಗೆ ನಿತ್ಯದ ಖರ್ಚಿಗೆ ನೋಟುಗಳು ಸಿಗುತ್ತಿಲ್ಲ. ಪಿಂಕ್‌ರೋಸ್‌ ನಂತೆ ಬಂದ 2000 ಮುಖಬೆಲೆಯ ಧಾರಾಳವಾಗಿ ಎಲ್ಲಲ್ಲೋ ಬೇಕಿರದ ಕಡೆಗಳಲ್ಲಿ ಭದ್ರವಾಗಿ ಸೇರಿಕೊಂಡಿದೆ ಎಂಬ ಮಾತು ಕೇಳುತ್ತಿದ್ದೇವೆ. ಭ್ರಷ್ಟರನ್ನು ನಿಯಂತ್ರಿಸಲು ಸಹಾಯಕ ಎಂದುಕೊಂಡಿದ್ದ ನೋಟುಗಳ ಅಮಾನ್ಯಿàಕರಣ ಬೆಟ್ಟ ಅಗೆದು ಇಲಿ ಹಿಡಿದಂತಾಯ್ತು ಎಂಬ ಟೀಕೆಗೆ ಒಳಗಾಗುತ್ತಿದೆ. ಹಾಗಾದರೆ ಸ್ವಿಸ್‌ ಬ್ಯಾಂಕಿನಿಂದ ಭ್ರಷ್ಟರ ಹಣ ದೇಶಕ್ಕೆ ತರುತ್ತೇನೆ ಎಂದು ಗುಡುಗಿದ್ದ ಮೋದಿ ಈಗ ಅಮಾನ್ಯಿàಕರಣದ ಉತ್ತಮ ಉದ್ದೇಶ ವಿಫ‌ಲವಾದರೆ,  ವೈಫ‌ಲ್ಯಕ್ಕೆ ನಾನೇ ಹೊಣೆ ಎಂದು ಕಳೆದ ನವೆಂಬರ್‌ 8 ರಂದು ಹೇಳಿದ್ದ ಮೋದಿಯವರ ಆತ್ಮವಿಶ್ವಾಸದ ಮಾತುಗಳು ಅವರನ್ನು  ದಿವ್ಯಕ್ಕೆ ಒಯ್ಯದೆ ಉಳಿಸಿದ್ದು ಯಾಕೆ? ಶನೈಶ್ಚರ ಮೋದಿಯವರನ್ನು ಸಂಪೂರ್ಣವಾಗಿ ವಿಫ‌ಲಗೊಳಿಸುವುದನ್ನೇ ತನ್ನ ಕಾಯಕ ಮಾಡಿಕೊಂಡಿದ್ದಾನೆಯೇ? ಹಾಗಾದರೆ ಶನೈಶ್ಚರನನ್ನು ನಿಯಂತ್ರಿಸಲಿರುವ ಗುರು 2017 ಮಧ್ಯಭಾಗದ ನಂತರ ಇನ್ನಷ್ಟು ದುರ್ಬಗೊಳ್ಳುವುದು ಗಮನಿಸ ಬೇಕಾದ ಅಂಶ. 

ಈಗ ಕ್ಯಾಶ್‌ಲೆಸ್‌ ವಹಿವಾಟು ಮತ್ತು ಬೇನಾಮಿ ಆಸ್ತಿ ತಡೆ ಹೇಗೆ ಎತ್ತ?ಮೋದಿಯವರಿಗೆ ಈಗ ಗೆಲುವು ಬೇಕಾಗಿದೆ. ಪ್ರಧಾನಿ ಪಟ್ಟಕ್ಕೆ ಏರುವಾಗ ತಟಸ್ಥನಾಗಿದ್ದ ಶನೈಶ್ಚರ ಮೋದಿಯವರನ್ನು ಆತುರದ ಹೆಜ್ಜೆಗಳಿಗೆ ಪ್ರಚೋದಿಸಿ ವೈಫ‌ಲ್ಯಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದಾನೆಯೇ? ಕೇಜ್ರಿವಾಲಾ ಅಂತೂ ಮೋದಿಗೆ ಆರ್ಥಿಕ ವಿಚಾರಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವಷ್ಟು ಶಿಕ್ಷಣವೇ ಇಲ್ಲ ಎಂದು ನೇರ ಪ್ರಹಾರ ಮಾಡಿದ್ದಾರೆ.  ಎಂದೂ ಮಾತನಾಡದ ಮನಮೋಹನ ಸಿಂಗ್‌ ಮೋದಿ ಜೇನು ಗೂಡಿಗೆ ಕೈಯಿಟ್ಟು ಜೇನು ತೆಗೆಯಲಾಗದ ಕೆಲಸ ನಡೆಸಿ ಜೇನ್ನೋಣಗಳ ಆಕ್ರಮಣಕ್ಕೆ ತುತ್ತಾದ ಸ್ಥಿತಿಯಲ್ಲಿದ್ದಾರೆ ಎಂಬರ್ಥದ ಮಾತಾಡಿದ್ದಾರೆ. ಮಾತನಾಡುವ ಮೋದಿ ಮೌನಿಯಾಗಿದ್ದಾರೆ. ಜನವರಿ 26, 2017 ರಿಂದ ಶನೈಶ್ಚರ ಸ್ವಾಮಿ ಧನುಸ್ಸು ರಾಶಿಗೆ ಬಂದು ಮೌನವನ್ನು ಮುರಿಸಿದರೆ ಕಷ್ಟ, ಮೌನಿಯಾದರೆ ಇನ್ನೊಂದು ಕಷ್ಟ ಎಂಬ ಸ್ಥಿತಿಗೆ ತಳ್ಳುತ್ತಾನೆ ಎಂಬುದಕ್ಕೆ ಅನುಮಾನ ಬೇಡ. ನಿಸ್ವಾರ್ಥಿಯಾದ ಮೋದಿಗೆ ಪ್ರಜಾಸತ್ತೆಯ ಚೌಕಟ್ಟಿನಲ್ಲಿ ಕೆಲಸ ಮಾಡಲಾಗದ ಸ್ಥಿತಿಯನ್ನು ಶನೈಶ್ಚರ ತಂದಿಡುತ್ತಾನೆಯೇ?

ಚಂದ್ರದಶಾಕಾಲ ಸಾಡೆ ಸಾತಿಯಲ್ಲಿ ಬುಧಭುಕ್ತಿಕಾಲ
ಮೋದಿಯವರೇ ಪ್ರಾಣದ ಮೇಲಿನ ಎಚ್ಚರಿಕೆ ಸದಾ ಇರಲಿ. ಬುಧಭುಕ್ತಿಅಕಾಲ ಮೋದಿಯವರು ಎದುರಿಸಬೇಕಾದ ಅಗ್ನಿಪರೀಕ್ಷೆಯ ಕಾಲ. ಇನ್ನೂ 16 ತಿಂಗಳುಗಳ ಕಾಲ ಇವರಿಗೆ ಅಗ್ನಿ ಪರೀಕ್ಷೆ. ಮೋದಿ ಹೆಜ್ಜೆ ಇಡುವ ಹಾದಿಗೆ ಸ್ವತ್ಛ ಭಾರತ ದೊರಕಬಹುದೆ?

Advertisement

Udayavani is now on Telegram. Click here to join our channel and stay updated with the latest news.

Next