ಬೆಂಗಳೂರು: ಬೆಂಗಳೂರಿನ ನೂರಾರು ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದ ವಿದ್ಯಾರ್ಥಿಗಳೂ ಕೈಜೋಡಿಸಿದ್ದು, ಬೀದಿ ನಾಟಕಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ, ರಾಜಾಜಿನಗರ, ಜಯನಗರದ ಕಾಲೇಜು ಮತ್ತು ಜನನಿಬಿಡ ಪ್ರದೇಶಗಳಲ್ಲಿ ವಿದ್ಯುನ್ಮಾನ ವಿಭಾಗದ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿಗಳು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅದನ್ನು ನಾಟಕದ ವಿಷಯವಸ್ತುವನ್ನಾಗಿಸಿಕೊಂಡಿದ್ದಾರೆ. 40 ವಿದ್ಯಾರ್ಥಿಗಳು 5 ತಂಡಗಳ ಮೂಲಕ ಬೀದಿ ನಾಟಕಗಳನ್ನು ಮಾಡಿದ್ದಾರೆ.
ನೋಟಾ ಕೂಡ ಹಕ್ಕು ಚಲಾವಣೆ: ನೋಟಾ ಚಲಾವಣೆಯೂ ನಿಮ್ಮ ಹಕ್ಕು ಚಲಾವಣೆಯ ಒಂದು ಭಾಗ ಎಂದು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ನೋಟಾ ಚಲಾವಣೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. “ನೋಟಾ ಚಲಾವಣೆ ಮಾಡುವುದರಿಂದ ಯಾವುದೇ ಲಾಭ ಇಲ್ಲ ಎಂದು ಬಹಳಷ್ಟು ಜನ ಭಾವಿಸಿದ್ದಾರೆ. ಹೀಗಾಗಿ, ನೋಟಾ ಚಲಾವಣೆಯ ಆಯ್ಕೆಯನ್ನು ಸಾರ್ವಜನಿಕರು ಮಾಡುತ್ತಿಲ್ಲ’ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದ 2ನೇ ಸೆಮಿಸ್ಟರ್ ವಿದ್ಯಾರ್ಥಿ ಅರುಣ್.
“ಜನರಲ್ಲಿ ನೋಟಾ ಚಲಾವಣೆಯ ಬಗ್ಗೆ ನಿರಾಸಕ್ತಿ ಇದೆ. ನೋಟಾ ಚಲಾವಣೆ ಮಾಡಿದರೂ ತಮಗೆ ಬೇಡವಾದ ಅಭ್ಯರ್ಥಿ ಆಯ್ಕೆಯಾಗುತ್ತಾರೆ ಎಂದು ಮತದಾರರು ಭಾವಿಸುತ್ತಾರೆ. ಆದರೆ, ಅತೀ ಹೆಚ್ಚು ನೋಟಾ ಚಲಾವಣೆಯಾದಾಗಲೂ ಪಕ್ಷಗಳು ತಮ್ಮ ನಿಲುವು ಮತ್ತು ಅಭ್ಯರ್ಥಿಗಳನ್ನು ಬದಲಾಯಿಸಬೇಕಾಗುತ್ತದೆ’ ಎಂದು ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ ಎನ್ನುತ್ತಾರೆ ಅರುಣ್.
“ಈ ರೀತಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವುದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಚಿಂತನೆ ಅಭಿಪ್ರಾಯಗಳನ್ನು ಸಾರ್ವಜನಿಕರು ಬೆಂಬಲಿಸಿದ್ದಾರೆ’ ಎನ್ನುತ್ತಾರೆ ವಿಭಾಗದ ಪ್ರಾಧ್ಯಾಪಕರು. ಆಮಿಷಗಳಿಗೆ ಬಲಿಯಾಗಬೇಡಿ, ಈ ಹಿಂದೆ ಗೆಲುವು ಸಾಧಿಸಿದ್ದರೂ ಯಾವುದೇ ಕೆಲಸ ಮಾಡದ ನಾಯಕರಿಗೂ ಮತ ನೀಡಬೇಡಿ ಎನ್ನುವ ವಿಷಯಗಳನ್ನು ಇಟ್ಟುಕೊಂಡು ಜಾಗೃತಿ ಮೂಡಿಸಲಾಗಿದೆ.