ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ವರ್ಗಾವಣೆಗೆ ಉನ್ನತಮಟ್ಟದಲ್ಲಿ ಉದ್ದೇಶಪೂರ್ವಕವಾಗಿ ಕೊಕ್ಕೆ ಹಾಕಲಾಗಿದೆ ಎನ್ನುವ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿದ್ದು, ಸಾರ್ವತ್ರಿಕ ವರ್ಗಾವಣೆಯನ್ನು ತಡೆಹಿಡಿದಿರುವುದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಲ್ಲಿ ಅಸಮಾಧಾನ ಮೂಡಿಸಿದೆ.
ಹುಬ್ಬಳ್ಳಿ: ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದು ಮೂರೂವರೆ ತಿಂಗಳು ಗತಿಸಿದರೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವರ್ಗಾವಣೆ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ವಿವಿಧ ಕಾರಣಗಳಿಗೆ ವರ್ಗಾವಣೆ ಬಯಸಿರುವ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಅಧಿಕಾರಿಗಳಿಗೆ ವರ್ಗಾವಣೆ ನೀಡುವಲ್ಲಿ ಸರಕಾರ ಮೀನಮೇಷ ಎಣಿಸುತ್ತಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳಿಂದ ಅಧಿಕಾರಿಗಳು, ಕಚೇರಿ ಅಧೀಕ್ಷಕರು, ಮೇಲ್ವಿಚಾರಕರು ಹಾಗೂ ಪಾರುಪತ್ತೆದಾರರು ಸೇರಿ ಕೇಂದ್ರೀಕೃತ ವರ್ಗಾವಣೆ ವ್ಯಾಪ್ತಿಗೆ ಬರುವ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿ ಸಾರ್ವತ್ರಿಕ ವರ್ಗಾವಣೆಗೆ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ವರ್ಗಾವಣೆ ನೀತಿ ಗಾಳಿಗೆ: ಸಂಸ್ಥೆಯ ವರ್ಗಾವಣೆಯಲ್ಲಿ ಶಿಸ್ತು ಅಳವಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ವರ್ಗಾವಣೆ ನೀತಿ ರೂಪಿಸಲಾಯಿತು. ವರ್ಗಾವಣೆ ನೀತಿ ಪ್ರಕಾರ ಫೆಬ್ರವರಿ 1 ರಿಂದ ಮಾರ್ಚ್ 31 ರೊಳಗೆ ಅರ್ಜಿ ಸ್ವೀಕರಿಸಿ, ಏಪ್ರಿಲ್ 1ರಿಂದ 30 ರೊಳಗೆ ಅರ್ಜಿ ಪರಿಶೀಲಿಸಿ, ಮೇ 15 ರಿಂದ 25 ರೊಳಗೆ ವರ್ಗಾವಣೆ ಪರಿಶೀಲನಾ ಸಮಿತಿ ಅನುಮತಿ, ಮೇ 25 ರಿಂದ 30ರೊಳಗೆ ವರ್ಗಾವಣೆ ಆದೇಶ ಹೊರಡಿಸಿ ಸಾರ್ವತ್ರಿಕ ವರ್ಗಾವಣೆ ಪೂರ್ಣ ಗೊಳಿಸಬೇಕು. ಈ ಪ್ರಕಾರ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಖಾಲಿ ಹುದ್ದೆ, ಅರ್ಹತೆ ಸೇರಿ ನಿಯಮ ಪ್ರಕಾರ ಪಟ್ಟಿ ಸಿದ್ಧಪಡಿಸಲಾಗಿದೆ. ಮೂರೂವರೆ ತಿಂಗಳಾದರೂ ವರ್ಗಾವಣೆ ಆದೇಶ ಹೊರ ಬೀಳುವ ಯಾವುದೇ ಲಕ್ಷಣಗಳು ಕಾಣದಿರುವುದು ಸಾರ್ವತ್ರಿಕ ವರ್ಗಾವಣೆ ನೀತಿಯನ್ನು ಉನ್ನತ ಮಟ್ಟದಲ್ಲಿ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.
ಮಿನಿಸ್ಟರ್ ಬಳಿಯಿದೆ ಫೈಲ್: ಹಲವು ಕಾರಣಗಳಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಗಾಗಿ ನಿತ್ಯವೂ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಈ ಬಗ್ಗೆ ಕಚೇರಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಫೈಲ್ ಮಿನಿಸ್ಟರ್ ಬಳಿಯಿದೆ ಎಂದು ಸಿದ್ಧ ಉತ್ತರ ನೀಡುತ್ತಿದ್ದಾರೆ ಎಂಬುದು ವರ್ಗಾವಣೆಗೆ ಕಾಯುತ್ತಿರುವ ಸಿಬ್ಬಂದಿಯ ಅಳಲಾಗಿದೆ.
ಚರ್ಚೆಗೆ ಗ್ರಾಸವಾಗಿರುವ ಪತ್ರ: ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ಸ್ಥಗಿತಗೊಳ್ಳುವಂತೆ ಆಗಸ್ಟ್ 20 ರಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ಆ ಗಿದೆ. ಆದೇಶ ಹೊರಡಿಸಿರುವ ಮುನ್ನ ಈ ವಿಷಯ ನನ್ನ ಗಮನಕ್ಕೆ ತಂದಿರುವುದಿಲ್ಲ. ವರ್ಗಾವಣೆಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ನನ್ನೊಡನೆ ಚರ್ಚಿಸಿ ನಂತರ ವರ್ಗಾವಣೆ ಆದೇಶ ಹೊರಡಿಸಬೇಕು. ಅಲ್ಲಿಯ ವರೆಗೂ 18 ತಾಂತ್ರಿಕ ಸಿಬ್ಬಂದಿ ವರ್ಗಾವಣೆ ಆದೇಶ ತಡೆಹಿಡಿಯುವಂತೆ ಪತ್ರದ ಮೂಲಕ ಸೂಚಿಸಿದ್ದಾರೆ ಎನ್ನಲಾಗಿದ್ದು, ವರ್ಗಾವಣೆ ಮಾಫಿಯಾ ವ್ಯವಸ್ಥಿತ ವಾಗಿ ತಡೆಹಿಡಿದಿದೆ ಎನ್ನುವ ಮಾತುಗಳು ಅಧಿಕಾರಿಗಳ ವಲಯದಿಂದ ದಟ್ಟವಾಗಿ ಕೇಳಿ ಬರುತ್ತಿವೆ.
ಶಿಫಾರಸಿಗೆ ಕಿಮ್ಮತ್ತಿಲ್ಲ: ಕೆಲ ಅಧಿಕಾರಿಗಳು ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆಗಾಗಿ ಹತ್ತಿರದ ಶಾಸಕರ, ಸಚಿವರ ಶಿಫಾರಸು ಪತ್ರ ನೀಡಿದ್ದಾರೆ. ಆದರೆ ಈ ಶಿಫಾರಸು ಪತ್ರಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ನಿಯಮದ ಪ್ರಕಾರ ವರ್ಗಾವಣೆ ಕೇಳಿದಾಗ್ಯೂ, ಶಾಸಕರ ಶಿಫಾರಸು ಪತ್ರ ನೀಡಿದರೂ ನಮಗೆ ವರ್ಗಾವಣೆ ನೀಡುತ್ತಿಲ್ಲ. ಈಗಾಗಲೇ ಮೂರೂವರೆ ತಿಂಗಳು ವಿಳಂಬವಾಗಿದ್ದು, ಮುಂದೆ ವರ್ಗಾವಣೆ ನೀಡಿದರೆ ಮಕ್ಕಳ ಶಿಕ್ಷಣದ ಗತಿಯೇನು ಎಂಬುದು ಅಧಿಕಾರಿಗಳು ಹಾಗೂ ಸಿಬ್ಬಂದಿ ನೋವಾಗಿದೆ.
ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ಎರಡು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಸ್ವಗ್ರಾಮದಲ್ಲಿರುವ ವಯಸ್ಸಾದ ತಂದೆ-ತಾಯಿಗಳ ಆರೋಗ್ಯ ಕ್ಷೀಣಿಸುತ್ತಿದೆ. ಮೇಲಾಗಿ ಬೆಂಗಳೂರಿನ ಪರಿಸರಕ್ಕೆ ಒಗ್ಗಿಕೊಳ್ಳದ ಕಾರಣ ಪತ್ನಿ ಅನಾರೋಗ್ಯ ಪೀಡಿತರಾಗಿದ್ದಾರೆ. ನಿಯಮದ ಪ್ರಕಾರ ಅರ್ಹತೆಯಿದ್ದರೂ ವರ್ಗಾವಣೆ ಮಾಡುತ್ತಿಲ್ಲ. ಕೆಲವರು ನನಗಿಂತಲೂ ಗಂಭೀರ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
● ಹೆಸರು ಹೇಳಲು ಇಚ್ಛಿಸದ ಅಧಿಕಾರಿ
ಹೇಮರಡ್ಡಿ ಸೈದಾಪುರ