Advertisement

ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ

07:10 AM Feb 05, 2019 | |

ಮಂಡ್ಯ: ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ ಎಂದು ಹೇಳುವ ಮೂಲಕ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾ ವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿಸಲು ತೆರೆಮರೆ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಕೆ.ಟಿ. ಶ್ರೀಕಂಠೇಗೌಡರ ಹೇಳಿಕೆ ಅಂಬರೀಶ್‌ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.

Advertisement

ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ. ಅವರು ಆಂಧ್ರಪ್ರದೇಶ ಮೂಲದ ಗೌಡ್ತಿ. ನನ್ನ ಮನೆಗೆ ರಾಜಕಾರಣ ನನಗೇ ಕೊನೆಯಾಗಲಿ. ಚುನಾವಣೆಗೆ ನನ್ನ ಪತ್ನಿ ಹಾಗೂ ಮಗನನ್ನು ತರುವುದಿಲ್ಲ ಎಂದು ಅಂಬರೀಶ್‌ ಬದುಕಿದ್ದಾಗಲೇ ಸ್ಪಷ್ಟವಾಗಿ ಹೇಳಿದ್ದರು. ಈಗಾಗಲೇ ರಮ್ಯಾ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿ ನೋಡಾಗಿದೆ. ಅವರು ಎಷ್ಟರ ಮಟ್ಟಿಗೆ ಜಿಲ್ಲೆಯ ಜನರ ಪರವಾಗಿ ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ರಮ್ಯಾ ಅವರಿಂದ ಈಗಾಗಲೇ ಜನರು ಪಾಠ ಕಲಿತಿದ್ದಾರೆ ಎಂದು ಮಂಡ್ಯ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸೋಲಿಗೆ ಹೆದರಿದ ಅಂಬಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂಬರೀಶ್‌ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಧೈರ್ಯ ಮಾಡಲಿಲ್ಲ. ಜನರು ಸೋಲಿಸುತ್ತಾರೆ ಎನ್ನುವುದು ಅಂಬರೀಶ್‌ಗೆ ಚೆನ್ನಾಗಿ ಗೊತ್ತಿತ್ತು. ಅದೇ ಕಾರಣಕ್ಕೆ ಅವರು ಕ್ಷೇತ್ರದ ಕಡೆಗೂ ಮುಖ ಮಾಡಲಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

ಹುಡುಗಾಟವಲ್ಲ: ರಾಜಕಾರಣ ಎನ್ನುವುದು ಹುಡುಗಾಟವಲ್ಲ. ರಾಜಕೀಯಕ್ಕೆ ಬರುವಾಗಲೇ ಯಾರೂ ಅನುಭವದೊಂದಿಗೆ ಬರುವುದಿಲ್ಲ. ಜನಪರವಾದ ಕಾಳಜಿ, ಆಸಸ್ತಿ, ತಾಳ್ಮೆ ಹಾಗೂ ಸೇವಾ ಮನೋಭಾವ ಇದ್ದಾಗ ಜನರು ಅದನ್ನು ಒಪ್ಪುತ್ತಾರೆ. ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಮಂಡ್ಯ ಜನ ಸಾಕಷ್ಟು ನೋವು ಅನುಭವಿಸಿದ್ದಾರೆ. ಅನುಭವಗಳನ್ನು ಕಂಡಿದ್ದಾರೆ. ಮತ್ತೆ ಭ್ರಮೆಗಳಿಗೆ ಸಿಲುಕುವ ಸ್ಥಿತಿಯಲ್ಲಿ ಇಲ್ಲ. ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಜನರ ನಡುವೆ ಇರುವವರು, ಅವರ ನೋವಿಗೆ ಸ್ಪಂದಿಸುವವರು ಅವರಿಗೆ ಬೇಕು. ಎಲ್ಲೋ ಕುಳಿತು ಸ್ಪರ್ಧೆ ಮಾಡುತ್ತೇನೆ ಎನ್ನುವವರನ್ನು ಮಂಡ್ಯ ಜನರು ಗೆಲ್ಲಿಸುವುದಿಲ್ಲ ಶ್ರೀಕಂಠೇಗೌಡ ಎಂದು ಹೇಳಿದರು.

ಹೋಲಿಕೆ ಸರಿಯಲ್ಲ: ದೇವೇಗೌಡರ ಕುಟುಂಬವನ್ನು ಅಂಬರೀಶ್‌ ಕುಟುಂಬದೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ದೇವೇಗೌಡರ ಕುಟುಂಬ ಸೇವೆಯಿಂದ ಬೆಳೆದುಬಂದಿದೆ. ಅವರ ಬದುಕಿನ ರೀತಿ-ನೀತಿ, ಜನರಿಗೆ ಪ್ರೀತಿಸುವ ರೀತಿ, ಅವರಿಗಿರುವ ಕಾಳಜಿಯೇ ಬೇರೆ. ಅವರನ್ನು ಬೇರೆ ಕುಟುಂಬದೊಂದಿಗೆ ಹೋಲಿಸಲಾಗದು. ಅವರ ಕುಟುಂಬ 24 ತಾಸು ಜನಪರ ಕೆಲಸ ಮಾಡಲು ರೆಡಿಯಾಗಿದೆ. ದೇಶದಲ್ಲೇ ಸೇವೆಗೆ ಹೆಸರಾಗಿದೆ. ಅವರ ರೈತರು, ಕೃಷಿ, ನೀರಾವರಿ ಬಗೆಗಿನ ಕಾಳಜಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಕೇಂದ್ರ, ರಾಜ್ಯ ಸಚಿವರಾಗಿ ಶಾಸಕರಾಗಿ ಅಂತಹ ಹೆಸರನ್ನು ಅಂಬರೀಶ್‌ ಏಕೆ ಪಡೆಯಲಾಗಲಿಲ್ಲ. ಜನರ ಪರವಾಗಿ ಏಕೆ ನಿಲ್ಲಲಿಲ್ಲ. ಜನಪ್ರತಿನಿಧಿಗಳ ಕೆಲಸ ಸುಲಭವಲ್ಲ. ಹುಡುಗಾಟಿಕೆಯಲ್ಲ. ಅದಕ್ಕೆ ನ್ಯಾಯ ಸಲ್ಲಿಸುವ ಸಾಮರ್ಥ್ಯ ಇರಬೇಕು ಎಂದರು.

Advertisement

ನಿಖೀಲ್‌ ಜನರ ಒಡನಾಡಿ: ನಿಖೀಲ್‌ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸುವುದರಲ್ಲಿ ಅರ್ಥವಿದೆ. ನಿಖೀಲ್‌ ವಿಧಾನಸಭಾ ಚುನಾವಣೆಯಿಂದಲೂ ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಾ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ಜನರ ನೋವು-ನಲಿವುಗಳಿಗೆ ತಕ್ಷಣವೇ ಸ್ಪಂದಿಸಿದ್ದಾರೆ. ಆದರೆ, ಸುಮಲತಾ ಗೆದ್ದ ಬಳಿಕ ಅವರನ್ನ ಎಲ್ಲಿ ಅಂತ ಹುಡುಕಲು ಸಾಧ್ಯ ಎಂದು ಪ್ರಶ್ನಿಸಿದರು. ಮಂಡ್ಯ ಕ್ಷೇತ್ರ ಕಾಂಗ್ರೆಸ್‌ ಪಾಲಾಗುವುದೋ, ಜೆಡಿಎಸ್‌ ಪಾಲಾಗುವುದೋ ನನಗೆ ಗೊತ್ತಿಲ್ಲ. ಆ ವಿಷಯವಾಗಿ ಚರ್ಚೆಯೇ ಆಗಿಲ್ಲ. ಆದರೆ, ಹುಡುಗಾಟಿಕೆಗೆ ಚುನಾವಣೆಗೆ ನಿಲ್ಲುವವರಿಗಿಂತ ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವವರು ಬೇಕು. ಅದಕ್ಕೆ ಸ್ಪಂದಿಸುವ ಮನಸ್ಸುಳ್ಳವರು ಬೇಕು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ
ಮಂಡ್ಯ:
ಅಂಬರೀಶ್‌ ಹಾಗೂ ಸುಮಲತಾ ಅಂಬರೀಶ್‌ ವಿರುದ್ಧ ಹಗುರವಾದ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಅಂಬಿ ಅಭಿಮಾನಿಗಳು ವಾರ್‌ ಶುರು ಮಾಡಿದ್ದಾರೆ.

ತಮ್ಮ ನೆಚ್ಚಿನ ನಾಯಕ ಅಂಬರೀಷ್‌ ಹಾಗೂ ಪತ್ನಿ ಸುಮಲತಾ ಬಗ್ಗೆ ಹಗುರವಾಗಿ ಮಾತನಾಡುವ ಯಾವುದೇ ರಾಜಕಾರಣಿಗಳನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶ ಸಾರಿರುವ ಅಭಿಮಾನಿಗಳು, ಸಂಸದ ಶಿವರಾಮೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡರ ಬಗ್ಗೆ ವಾಚಾಮಗೋಚರವಾಗಿ ವಾಗ್ಯುದ್ಧ ಆರಂಭಿಸಿರುವುದು ಮಂಡ್ಯ ರಾಜಕಾರಣ ತಾರಕ್ಕೇರುವಂತೆ ಮಾಡಿದೆ.

ಅಂಬಿಯನ್ನು ಹೊತ್ತು ಮೆರೆಸಿದ್ದೇವೆ: ಅಂಬರೀಶ್‌ ಬದುಕಿದ್ದಾಗ ಅವರನ್ನು ನಾವೂ ಹೊತ್ತು ಮೆರೆಸಿ ರಾಜಕಾರಣದಲ್ಲಿ ಯಶಸ್ಸು ತಂದು ಕೊಟ್ಟಿದ್ದೇವೆ ಎಂದು ಸಂಸದ ಎಲ್‌.ಆರ್‌.ಶಿವರಾಮೇಗೌಡರು ನೀಡಿರುವ ಹೇಳಿಕೆ ಅಭಿಮಾನಿಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಮಂಡ್ಯ ಹಾಗೂ ರಾಜ್ಯದ ಜನ ಅಂಬರೀಷ್‌ ಅವರನ್ನು ಹೊತ್ತು ಮೆರೆಸಿದ್ದಾರೆಯೇ ಹೊರತು ಈ ಶಿವರಾಮೇಗೌಡ ಅಲ್ಲ ಎಂದು ಅಂಬಿ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್‌ ಟೀಕಾ ಪ್ರಹಾರ ನಡೆಸಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ವೈರಲ್‌ ಆಗುವುದರೊಂದಿಗೆ ವಾಗ್ಯುದ್ದಕ್ಕೆ ಕಾರಣವಾಗಿದೆ.

ಮುಂದೈತೆ ಮಾರಿಹಬ್ಬ: ಈ ಹಿಂದೆ ಶಿವರಾಮೇಗೌಡರು ಗೆಲ್ಲಲು ಅಂಬಿ ಅಣ್ಣನ ಆಶೀರ್ವಾದ ಬೇಕಿತ್ತು, ಗೆÇ್ಲೊ ತನಕ ಅಣ್ಣನ ಕಾಲಿಗೆ ಬಿದ್ದಿದ್ದೋ ಬಿದ್ದಿದ್ದು. ಈಗ ಅಂಬಿ ಅಣ್ಣನ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಶಿವರಾಮೇಗೌಡ ಅಂಬರೀಶ್‌ ಕಾಲು ಹಿಡಿದುಕೊಂಡಿರುವ ಭಾವಚಿತ್ರ ಹಾಕಿದ್ದೇವೆ. ಅಣ್ಣನ ಕುಟುಂಬದ ಬಗ್ಗೆ ಹಗುರವಾಗಿ ಮಾತು ಮುಂದುವರಿಸಿದರೆ ಶಿವರಾಮೇಗೌಡರಿಗೆ ಮುಂದೆ ಇದೆ ನಿಂಗೆ ಮಾರೀ ಹಬ್ಬ ಎಂದು ಹೇಳುವುದರೊಂದಿಗೆ ಸಂಸದ ಶಿವರಾಮೇಗೌಡ ವಿರುದ್ಧ ಅಂಬಿ ಅಭಿಮಾನಿಗಳು ಸಾಕಷ್ಟು ಗರಂ ಆಗಿದ್ದಾರೆ.

ಸುಮಲತಾಗೆ ರಾಜಕಾರಣ ಸವಾಲು: ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ನಡೆಯುತ್ತಿರುವ ರಾಜಕೀಯ ಹೋರಾಟ ಹಾಗೂ ಸುಮಲತಾ ಸ್ಪರ್ಧೆ ವದಂತಿ ಹಿನ್ನೆಲೆಯಲ್ಲಿ ಆರಂಭವಾಗಿರುವ ವಾಗ್ಯುದ್ದ ಅಂಬಿ ಕುಟುಂಬದಲ್ಲಿ ರಾಜಕೀಯದ ಹೊಸ ಮನ್ವಂತರ ಸೃಷ್ಟಿಸಿದೆ. ಈ ಸನ್ನಿವೇಶದಲ್ಲಿ ಸುಮಲತಾ ಅಂಬರೀಶ್‌ ರಾಜಕೀಯಕ್ಕೆ ಪಾದಾರ್ಪಣೆ ಮಾಡಬೇಕೆ? ಬೇಡವೇ? ಎನ್ನುವುದು ಒಂದೆಡೆಯಾದರೆ ಸುಮಲತಾ ಯಾವ ಪಕ್ಷವನ್ನು, ಯಾವ ಕಾರಣಕ್ಕಾಗಿ ಆಯ್ಕೆ ಮಾಡಿಕೊಂಡು ರಾಜಕಾರಣದಲ್ಲಿ ಇರಬೇಕು ಎನ್ನುವುದು ಸವಾಲಾಗಿದೆ.

ಈಗಿನ ಬೆಳವಣೆಗೆಗಳನ್ನು ಗಮನಿಸಿದರೆ ಸುಮಲತಾ ಅಂಬರೀಷ್‌ಗೆ ರಾಜಕೀಯ ಅನಿವಾ ರ್ಯತೆ ಇಲ್ಲ. ಬದಲಿಗೆ ಅಂಬಿ ಅಭಿಮಾನಿಗಳಿಗೆ ಮತ್ತು ಕೆಲವು ರಾಜಕೀಯ ಪಕ್ಷಗಳಿಗೆ ಸುಮಲತಾ ರಾಜಕೀಯಕ್ಕೆ ಬರುವ ಅನಿವಾರ್ಯತೆ ಇದೆ ಎನ್ನುವುದು ಎದ್ದು ಕಾಣುತ್ತದೆ. ಈ ಕಾರಣಕ್ಕಾಗಿ ಸುಮಲತಾ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾವ ನಿರ್ಧಾರವನ್ನೂ ಮಾಡಿಲ್ಲ. ಮಾಡಲೇಬೇಕಾದ ಕಾಲವೂ ಬಂದೇ ಬರುತ್ತದೆ.

ಅಭಿಮಾನಿಗಳು ಹಾಗೂ ಕೆಲವು ರಾಜಕಾರಣಿಗಳ ಮಾತು ಕಟ್ಟಿಕೊಂಡು ಹೋದರೆ ರಾಜಕಾರಣ ಸಾಧ್ಯವೇ ಎಂಬ ಪ್ರಶ್ನೆ ಮೂಡಿದ್ದು, ಕಾಂಗ್ರೆಸ್‌ನವರಿಗೆ ಜಿಲ್ಲೆಯಲ್ಲಿ ಜೆಡಿಎಸ್‌ ಎದುರಿಸಲು ಅಸ್ತ್ರದ ರೂಪದಲ್ಲಿರುವ ಸುಮಲತಾ ಅವರನ್ನು ಅಂಬರೀಶ್‌ ಹೆಸರಿನಲ್ಲಿ ಬಳಕೆ ಮಾಡಿಕೊಳ್ಳುವ ತಂತ್ರಗಾರಿಕೆಯಾಗಿದೆ. ಅಂಬರೀಶ್‌ ಕುಟುಂಬ ಅವಮಾನಿಸಿದರೆ ತಕ್ಕ ಉತ್ತರಮದ್ದೂರು: ಮಾಜಿ ಸಚಿವ, ನಟ ದಿವಂಗತ ಅಂಬರೀಶ್‌ ಪತ್ನಿ ಸುಮಲತಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿರುದ್ಧ ಅಂಬರೀಶ್‌ ಅಭಿಮಾನಿಗಳು ಹೆದ್ದಾರಿ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸರ್ಕಾರಿ ಬಸ್‌ ನಿಲ್ದಾಣದ ಬಳಿ ಜಮಾಯಿಸಿದ ಅಂಬರೀಶ್‌ ಅಭಿಮಾನಿಗಳು, ಕೆ.ಟಿ. ಶ್ರೀಕಂಠೇಗೌಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸಿದರು. ಅಂಬರೀಶ್‌ ಪತ್ನಿ ಸುಮಲತಾ ‘ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಪ್ರದೇಶದ ಗೌಡ್ತಿ’ ಹೇಳಿಕೆ ಖಂಡಿಸಿದ ಪ್ರತಿಭಟನಾನಿರತರು, ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಚಲನಚಿತ್ರ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಅಂಬರೀಶ್‌ ಮತ್ತು ಅವರ ಕುಟುಂಬದವರ ತೇಜೋವಧೆ ಸಹಿಸಲು ಸಾಧ್ಯವಿಲ್ಲ. ಯಾವ ಮಾನದಂಡದ ಮೇಲೆ ವಿಧಾನ ಪರಿಷತ್‌ ಸದಸ್ಯ ಕೆಟಿಎಸ್‌ ಮಂಡ್ಯದ ಗೌಡ್ತಿ ಅಲ್ಲ ಎಂದು ಹೇಳುತ್ತಾರೆ. ಸುಮಲತಾ ಮಂಡ್ಯ ಗಂಡು ಅಂಬರೀಶ್‌ರ ಧರ್ಮಪತ್ನಿ ಆದ ಮೇಲೆ ಅವರು ಮಂಡ್ಯದ ಗೌಡ್ತಿ ಅಲ್ಲ ಎಂದು ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.

ಅಂಬರೀಶ್‌ ಮತ್ತು ಅವರ ಕುಟುಂಬದವರನ್ನು ಕೇವಲ ರಾಜಕೀಯ ದೃಷ್ಟಿಯಿಂದ ಬಿಂಬಿಸಿರುವ ಶ್ರೀಕಂಠೇಗೌಡರ ಸಂಕುಚಿತ ಮನೋಭಾವಕ್ಕೆ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಇಂತಹ ಉದ್ಧಟತನದ ಹೇಳಿಕೆಗಳಿಗೆ ಸೂಕ್ತ ರೀತಿಯ ಉತ್ತರ ನೀಡುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಅಂಬಿ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ನಾಗೇಶ್‌, ಮುಖಂಡರಾದ ಲೋಕೇಶ್‌, ಯಶವಂತ್‌, ರಾಘವೇಂದ್ರ, ವಿನಯ್‌, ಸೋಮಣ್ಣ, ಪುರುಷೋತ್ತಮ್‌, ಆನಂದ್‌, ರಘು, ಅನಿಲ್‌ರಾಜು, ಸಂಪ್ರೀತ್‌, ರಾಜು ಮತ್ತಿತರರಿದ್ದರು.

ಕಾಂಗ್ರೆಸ್‌ಗೆ ಸೀಟು ಬಿಟ್ಟು ಕೊಡಲು ಹೇಗೆ ಸಾಧ್ಯ: ತಮ್ಮಣ್ಣ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುವ ಬಗ್ಗೆ ನಾನು ಯಾವುದೇ ಅಭಿಪ್ರಾಯ ಹೇಳುವುದಿಲ್ಲ. ಸೀಟು ಕೇಳ್ಳೋದು ಕಾಂಗ್ರೆಸ್‌ ಧರ್ಮ. ಅದನ್ನು ಕೊಡೋದು ಬಿಡೋದು ಜೆಡಿಎಸ್‌ ನಾಯಕರಿಗೆ ಸೇರಿದ್ದು ಎಂದು ಸಾರಿಗೆ ಸಚಿವ ತಮ್ಮಣ್ಣ ಹೇಳಿದರು. ಕಾಂಗ್ರೆಸ್‌ನವರು ಮಂಡ್ಯ ಕ್ಷೇತ್ರ ಕೇಳುವುದರಲ್ಲಿ ಯಾವುದೇ ಅರ್ಥವೇ ಇಲ್ಲ.ಯಾಕೆಂದರೆ ನಮ್ಮ ಪಕ್ಷ ಏಳಕ್ಕೆ ಏಳು ಕ್ಷೇತ್ರದಲ್ಲೂ ಗೆದ್ದಿದೆ.

ನಾವು 8 ಮಂದಿ ಶಾಸಕರಿದ್ದೇವೆ. ನಮ್ಮ ಶ್ರಮ, ಪಕ್ಷ ಸಂಘಟನೆ ಬಲವಾಗಿದೆ. ಇಂತಹ ವೇಳೆಯಲ್ಲಿ ನಾವು ಹೇಗೆ ಬಿಟ್ಟು ಕೊಡಲು ಸಾಧ್ಯಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರನ್ನು ಪ್ರಶ್ನಿಸಿದರು. ಸಿಎಂ ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರ್‌ ಸ್ವಾಮಿ ಸ್ಪರ್ಧೆ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.

ಮಂಡ್ಯದಿಂದ ಸುಮಲತಾ ಅಂಬರೀಶ್‌ ಸ್ಪರ್ಧೆ ವಿಚಾರವೂ ನನಗೂ ಗೊತ್ತಿಲ್ಲ. ಸ್ಪರ್ಧೆ ಮಾಡೋದು, ಬಿಡೋದು ಸುಮಲತಾಗೆ ಬಿಟ್ಟ ವಿಚಾರ ಎಂದು ಜಾಣತನದ ಉತ್ತರ ನೀಡಿ ಜಾರಿಕೊಂಡರು. ರಾಜ್ಯ ಬಜೆಟ್ ಅಂಗೀಕಾರ ಆಗಲ್ಲ ಎಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು ಫೆಬ್ರವರಿ 8ರವರೆಗೆ ಕಾದು ನೋಡಿ ಎಂದಷ್ಟೇ ಹೇಳಿದರು.

ಅಂಬಿ ಅಭಿಮಾನಿಗಳ ಆಕ್ರೋಶ: ಅಜ್ಞಾತ ಸ್ಥಳಕ್ಕೆ ಶ್ರೀಕಂಠೇಗೌಡ
ಮಂಡ್ಯ:
ಸುಮಲತಾ ಅಂಬರೀಶ್‌ ಆಂಧ್ರ ಗೌಡ್ತಿ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅಂಬರೀಶ್‌ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅವರ ಮೊಬೈಲ್‌ ಸ್ವಿಚ್ ಆಫ್ ಆಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಂಬರೀಶ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ಅಜ್ಞಾತ ಸ್ಥಳಕ್ಕೆ ತೆರಳಿರುವ ಶ್ರೀಕಂಠೇಗೌಡರ ಫೋನ್‌ ನಂಬರ್‌ನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇವರೆಲ್ಲಾ ದೇವೇಗೌಡರ ಕುಟುಂಬದ ಹೊಗಳು ಭಟ್ಟರು, ಅಂಬರೀಶ್‌ ಪತ್ನಿಯ ಬಗ್ಗೆ ಮಾತನಾಡುವ ಯೋಗ್ಯತೆ ಇವರಿಗಿಲ್ಲ, ಅಂಬರೀಶ್‌ ಬದುಕಿದ್ದಾಗ ಈ ಮಾತನಾಡೋಕೆ ಧೈರ್ಯ ಇರಲಿಲ್ಲವೇ, ದೇವೇಗೌಡ ಮತ್ತು ನಿಖೀಲ್‌ ಪಾಳೇಗಾರರೇ, ನಿಖೀಲ್‌ಗೆ ಯಾವ ರಾಜಕೀಯ ಅನುಭವವಿದೆ, ಭವಾನಿ ಮೇಡಂ ಮೈಸೂರಿನ ಮಹಿಳೆ- ಅನಿತಾ ಚಿಕ್ಕಬಳ್ಳಾಪುರದವರಲ್ಲವೇ, ಎಲ್ಲದರಲ್ಲೂ ಜಾತಿ ಹುಡುಕಿ ಸ್ವಾಮಿ ಎನ್ನುವುದೂ ಸೇರಿದಂತೆ ಅವಾಚ್ಯ ಶಬ್ಧಗಳಿಂದಲೂ ಕೆ.ಟಿ.ಶ್ರೀಕಂಠೇಗೌಡ ಅವರನ್ನು ನಿಂದಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಸುಮಲತಾ ಏಕೆ ಬಿಜೆಪಿ ಅಭ್ಯರ್ಥಿಯಾಗ್ತಾರೆ?
ಮಂಡ್ಯ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಏಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪಧಿಸ್ತಾರೆ? – ಈ ಪ್ರಶ್ನೆ ಹಾಕಿರುವ ಬಿಜೆಪಿ ನಾಯಕ ಸಿದ್ದರಾಮಯ್ಯ ಅಂಬರೀಶ್‌ ಪತ್ನಿ ಸುಮಲತಾರನ್ನು ಬಿಜೆಪಿಗೆ ಆಹ್ವಾನಿಸಿರುವ ಆರ್‌.ಅಶೋಕ್‌ಗೆ ಟಾಂಗ್‌ ನೀಡಿದ್ದಾರೆ. ಸುಮಲತಾ ಕಾಂಗ್ರೆಸ್‌ನಲ್ಲಿದ್ದಾರೆ. ಅವರ ಯಜಮಾನ(ಅಂಬರೀಶ್‌)ರು ಕಾಂಗ್ರೆಸ್‌ನಲ್ಲಿದ್ದವರು. ಅವರು ಯಾಕೆ ನಮ್ಮ ಪಕ್ಷಕ್ಕೆ ಬರ್ತಾರೆ. ಅಂಹದ್ದು ಅವರಿಗೇನಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಒಂದು ಭಾಗವಾಗಿದೆ. ಆಡಳಿತ ಪಕ್ಷ ಬಿಟ್ಟು ವಿರೋಧ ಪಕ್ಷದ ಅಭ್ಯರ್ಥಿಯಾಗಿ ಅವರೇಕೆ ಗುರುತಿಸಿಕೊಳ್ಳುತ್ತಾರೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರನ್ನು ಪ್ರಶ್ನಿಸಿದರು. ಒಂದು ವೇಳೆ ಅವರು ಪಕ್ಷ ಸೇರಿದರೆ ಕಾರ್ಯಕರ್ತರಾಗಿ ಕೆಲಸ ಮಡಬೇಕು. ಬಿಜೆಪಿಗೆ ಯಾರೇ ಬಂದರೂ ನಾನು ಸ್ವಾಗತಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ನನಗೇ ಟಿಕೆಟ್ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ.

ಅವರ ಸೂಚನೆಯಂತೆ ಈಗಾಗಲೇ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಎರಡು ಬಾರಿ ಕ್ಷೇತ್ರ ಪ್ರವಾಸ ಮುಗಿಸಿದ್ದೇನೆ ಎಂದರು. ಫೆ.9ರಂದು ಮಂಡ್ಯಕ್ಕೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಆಗಮಿಸುತ್ತಿದ್ದು, ಅಂದು ಅಧಿಕೃತವಾಗಿ ಚುನಾವಣಾ ಸಿದ್ಧತೆಗೆ ಚಾಲನೆ ನೀಡಲಿದ್ದೇನೆ. ಎಸ್‌.ಎಂ.ಕೃಷ್ಣ ಆಗಮನದಿಂದ ಕಾರ್ಯಕರ್ತರಿಗೆ ಹೊಸ ಶಕ್ತಿ ಮತ್ತು ಸ್ಫೂರ್ತಿ ಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next