ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೈಕ್ಷಣಿಕ ಮಟ್ಟದ ಸುಧಾರಣೆಗೆ ನೂರೆಂಟು ಯೋಜನೆ ಜಾರಿ ಮಾಡಿ ಸಾವಿರಾರು ಕೋಟಿ ಅನುದಾನ ಹರಿಸುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಬೇಕಿರುವ ಅಗತ್ಯ ಮೂಲಭೂತ ಸೌಲಭ್ಯ ಸೇರಿದಂತೆ ಸರಿಯಾದ ಕೊಠಡಿಗಳ ವ್ಯವಸ್ಥೆ ಕೊಡುತ್ತಿಲ್ಲವೆಂಬ ವೇದನೆ ಜನರಲ್ಲಿ ಈಗಲೂ ಇದೆ.
ಇದಕ್ಕೆ ಸಾಕ್ಷಿ ಎಂಬಂತೆ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಸರ್ಕಾರಿ ಪಪೂ ಕಾಲೇಜು ಕಟ್ಟಡ ಕಾಮಗಾರಿ ವರ್ಷದಿಂದ ತೊಂದರೆ ಅನುಭವಿಸುತ್ತಲೇ ಇದೆ. ಇಂದಿಗೂ ವಿದ್ಯಾರ್ಥಿಗಳಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲದಂತಾಗಿದೆ.
ವರ್ಷದ ಹಿಂದೆಯೇ ಗ್ರಾಮದಲ್ಲಿನ ಪ್ರೌಢಶಾಲೆಯ ಆವರಣದಲ್ಲಿ ಪಪೂ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಇಲಾಖೆ ಹಂತದಲ್ಲಿ ಅಸ್ತು ಎಂದಿದೆ. 1.40 ಕೋಟಿ ರೂ. ಅನುದಾನವೂ ಮಂಜೂರಾಗಿದೆ. ಆದರೆ ಅನುದಾನ ನೀಡಿ ವರ್ಷ ಕಳೆದರೂ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 2017ರ ಡಿಸೆಂಬರ್ ತಿಂಗಳಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿ ಬುನಾದಿ ಹಾಕಲಾಗಿದೆ. ಅಂದಿನಿಂದ ಇಂದಿನವರೆಗೂ ಅಧಿಕಾರಿಗಳ, ಗುತ್ತಿಗೆದಾರರ ನಿರ್ಲಕ್ಷÂದಿಂದ ಕಾಮಗಾರಿ ನೆಲಬಿಟ್ಟು ಮೇಲೆಳುತ್ತಿಲ್ಲ. ಎಚ್‌ಕೆಆರ್‌ಡಿಬಿ ಈ ಯೋಜನೆಯಡಿ ಈ ಕಾಮಗಾರಿ ನಡೆಯುತ್ತಿದ್ದು, ಯಾವೊಬ್ಬ ಇಂಜನಿಯರ್ ಕಾಮಗಾರಿಯ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಮೌನವಾಗಿದ್ದಾರೆ.
ಬಯಲೇ ಆಸರೆ ವಿದ್ಯಾರ್ಥಿಗಳಿಗೆ ಪಾಠ: ಕಾಲೇಜು ವಿದ್ಯಾರ್ಥಿಗಳಿಗೆ ಜಯದೇವ ಮುರಘರಾಜೇಂದ್ರ ಸರಕಾರಿ ಪ್ರೌಢಶಾಲಾ ಕಟ್ಟಡದಲ್ಲಿ ಪಾಠ ಬೋಧನೆ ಮಾಡಲಾಗುತ್ತಿದೆ. ಎರಡನೇ ವರ್ಷದ ತರಗತಿಗೆ ಬಯಲು ಜಾಗೆಯನ್ನೇ ಆಶ್ರಯಿಸುವಂತಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕೊಠಡಿಗಳ ಸಮಸ್ಯೆಯಿಂದ ಪ್ರವೇಶಾತಿಗೆ ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿವೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಈ ಭಾಗದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸರಕಾರಿ ಸೌಲಭ್ಯ ಹಾಗೂ ಪಪೂ ಶಿಕ್ಷಣ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಅನುದಾನ ಬಿಡುಗಡೆ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸ್ವತಃ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುವ ಭಾಗ್ಯವಿಲ್ಲದಂತಾಗಿದೆ. ಜಿಲ್ಲಾಡಳಿತ ಶಿಕ್ಷಣ ಇಲಾಖೆ ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ ಸಚಿವರು ಅರೆಬರೆಯಾಗಿ ಅರ್ಧಕ್ಕೆ ನಿಂತ ಕಾಲೇಜುಗಳ ಬಗ್ಗೆ ಕಾಳಜಿ ವಹಿಸಬೇಕಿದೆ.
ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರಾಮಕ್ಕೆ ಕಾಲೇಜು ಮಂಜೂರು ಮಾಡಿ ಕಟ್ಟಡಕ್ಕೆ ಅನುದಾನವನ್ನೂ ಮಂಜೂರು ಮಾಡಿದೆ. ಆದರೆ ಕಟ್ಟಡ ಕಾಮಗಾರಿ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಬಯಲಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರು ಕೂಡಲೇ ಕ್ರಮಕೈಗೊಂಡು ಕಟ್ಟಡ ಕಾಮಗಾರಿ ಆರಂಭಿಸಬೇಕು.
ಬಸವರಾಜ ಕರೆಣ್ಣವರ, ಸ್ಥಳೀಯ ನಿವಾಸಿ.
ದತ್ತು ಕಮ್ಮಾರ