Advertisement

ಪಾಲಿಕೆ ಎಡವಟ್ಟು: ಬೈಲಾರೆ ನಿವಾಸಿಗಳ ಆತಂಕ

10:31 AM Jun 09, 2018 | Team Udayavani |

ಕುಳಾಯಿ : ಸುಮಾರು 750 ಮನೆಗಳ 5,000 ಜನ ವಾಸಿಸುವಂತಹ ಬೈಲಾರೆ ಪ್ರದೇಶಕ್ಕೆ ಕೈಗಾರಿಕಾ ವಲಯದ ಮಳೆ ನೀರು ಹರಿಯ ಬಿಟ್ಟಿರುವುದು ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

2006ನೇ ಇಸವಿಯಲ್ಲಿ ಬಂಡವಾಳ ಶಾಹಿಗಳು ಪಶ್ಚಿಮ ದಿಕ್ಕಿನಲ್ಲಿ ಇರುವಂತಹ ಬೈಲಾರೆ ಗದ್ದೆಗಳಿಗೆ ಮಣ್ಣು ತುಂಬಿಸಿದ ಪರಿಣಾಮ ಕೃತಕ ನೆರೆಗೆ ಸೃಷ್ಟಿಯಾಗಿ ಸತತವಾಗಿ ಬೈಲಾರೆ ಮುಳುಗಡೆಯಾಗುತ್ತಲೇ ಇತ್ತು. ಬಳಿಕ ಬೈಲಾರ ಹಿತರಕ್ಷಣಾ ವೇದಿಕೆ ಸತತ ಹೋರಾಟದಿಂದ ಹಿಂದಿನ ಸುರತ್ಕಲ್‌ ಉತ್ತರ ಕ್ಷೇತ್ರದ ಶಾಸಕ ಮೊಯಿದಿನ್‌ ಬಾವಾ ಸರಕಾರದಿಂದ ಬಿಡುಗಡೆ ಮಾಡಿಸಿದ 1.75 ಲಕ್ಷ ರೂ. ಅನುದಾನದಿಂದ ಈಗ ಕಾಲುವೆಯ ಕೆಲಸ ಪ್ರಾರಂಭವಾದರೂ ಈಗ ಮಳೆಗಾಲ ಆರಂಭವಾದ ಕಾರಣ ಕಾಮಗಾರಿ ಮೊಟಕುಗೊಂಡಿದ್ದು, ಮಳೆಗಾಲ ಮುಗಿದ ಬಳಿಕವೇ ಮುಂದುವರಿಯಲಿದೆ. ಆದರೆ ವಿವಿಧೆಡೆಯಿಂದ ಹರಿದು ಬರುವ ನೀರು ಹಾಗೂ ಕೈಗಾರಿಕಾ ಪ್ರದೇಶದ ಮಳೆ ನೀರನ್ನು ಇದೀಗ ಬೈಲಾರೆ ತೋಡಿಗೆ ಸಂಪರ್ಕಿಸಿರುವುದರಿಂದ ಮತ್ತಷ್ಟು ಮನೆಗಳು ಮುಳುಗುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಒತ್ತುವರಿಯಾದ ಕಾಲುವೆ ಸರಿಪಡಿಸಿದ್ದರೂ ಸಮರ್ಪಕ ಕ್ರಮವಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಬೈಕಂಪಾಡಿ ಚಿತ್ರಾಪುರ ರೋಡಿನ ಮಧ್ಯದಲ್ಲಿ ಇರುವಂತಹ ಸೇತುವೆಯ ಪಕ್ಕದಲ್ಲಿ ಪೂರ್ವ ದಿಕ್ಕಿಗೆ ಮತ್ತೊಂದು  ಕಾಲುವೆ ಮಾಡಿದ್ದು, ಅದಕ್ಕೆ ಬೈಕಂಪಾಡಿ ಪೂರ್ವ ದಿಕ್ಕಿನಲ್ಲಿ ಇರುವಂತಹ ಇಂಡಸ್ಟ್ರಿಯಲ್‌ ಏರಿಯಾದಿಂದ ಮತ್ತು ಅಂಗರಗುಂಡಿಯಿಂದ ನೀರು ಬಂದು ಈ ಬೈಲಾರ ಪ್ರದೇಶದ ತೋಡಿಗೆ ಸೇರುವಂತೆ ಮಾಡಿರುವುದರಿಂದ ಒಂದೇ ಸಮನೆ ನೀರು ಏರಿ ಬೈಲಾರ ಪ್ರದೇಶದ ಎಲ್ಲ ಜಾಗವನ್ನು ಆವರಿಸಿ ಕೃತಕ ನೆರೆಗೆ ಕಾರಣವಾಗಿದೆ.

ಇನ್ನೂರು ಮನೆಗಳು ಮುಳುಗಡೆ
ಪೂರ್ವ ದಿಕ್ಕಿನಿಂದ ಬರುವಂತಹ ನೀರಿಗೆ ಬೇರೆಯೇ ಕಾಲುವೆ ಇರುವ ಕಾರಣ ಆ ಕಾಲುವೆಯನ್ನು ನಮ್ಮ ಬೈಲಾರ ಕಾಲುವೆಗೆ ಸೇರಿಸಿದ್ದೇ ಮತ್ತೆ ನೆರೆಯ ಅವಾಂತರ ಸೃಷ್ಟಿಯಾಗ ಭೀತಿ ತಂದೊಡ್ಡಿದೆ. ಇದುವರೆಗೆ ಪೂರ್ವ ದಿಕ್ಕಿನ ತೋಡು ನಮ್ಮ ಬೈಲಾರ ತೋಡಿಗೆ ಯಾವುದೇ ಜೋಡಣೆ ಇರಲಿಲ್ಲ. ಈ ವರ್ಷ ಆ ಜೋಡಣೆ ಮಾಡಿದ್ದರಿಂದ ಸುಮಾರು ಇನ್ನೂರು ಮನೆಗಳು ಮುಳುಗಡೆ ಆಗಿ ಜನರು ಮನೆಬಿಟ್ಟು ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗಿದ್ದಾರೆ. ಅಪಾರ ಹಾನಿಯಾಗಿದೆ.

ನೀರಿಳಿಯಲು ಬೇಕಾಯಿತು ವಾರ!
ಕೆಲವು ಮನೆಗಳಲ್ಲಿ ಸುಮಾರು ಮೂರು ಲಕ್ಷಗಳಷ್ಟು ನಷ್ಟವಾಗಿದೆ. ಸೊತ್ತುಗಳು ಹಾನಿಯಾಗಿದೆ. ಮನೆಗಳಿಗೆ ನುಗ್ಗಿದ ನೀರು ಹೊರ ಹೋಗಲು ವಾರಗಳು ಬೇಕಾದವು. ತತ್‌ಕ್ಷಣ ಇದಕ್ಕೆ ಕ್ರಮ ಕೈಗೊಳ್ಳದೇ ಹೋದಲ್ಲಿ ಮಳೆಗಾಲದಲ್ಲಿ ಶಾಶ್ವತವಾಗಿ ಮನೆ ತೊರೆದು ಹೋಗುವ ಅನಿವಾರ್ಯ ಇಲ್ಲಿನ ನಾಗರಿಕರಿಗೆ ಬರಲಿದೆ. 

Advertisement

ಕೃತಕ ನೆರೆಯಿಂದ ಪಾರು ಮಾಡಿ
ಪೂರ್ವ ದಿಕ್ಕಿನಿಂದ ಬರುವಂತಹ ಕಾಲುವೆಯನ್ನು ಸಂಪೂರ್ಣವಾಗಿ ಮುಚ್ಚಿಸಿ ಬೈಲಾರೆ ಪ್ರದೇಶದ ನೀರು ಸರಾಗವಾಗಿ ಹರಿದು ಪಶ್ಚಿಮ ದಿಕ್ಕಿನಲ್ಲಿ ಇರುವಂತಹ ಸಮುದ್ರಕ್ಕೆ ಸೇರುವಂತೆ ಮಾಡಬೇಕು. ಪೂರ್ವ ದಿಕ್ಕಿನ ಕಾಲುವೆಗೆ ಈಗಾಗಲೇ ಸಮುದ್ರಕ್ಕೆ ಸೇರಲು ಅದಕ್ಕೆ ಪ್ರತ್ಯೇಕ ಕಾಲುವೆ ಇದೆ. ಆದ್ದರಿಂದ ಬೈಕಂಪಾಡಿ ಇಂಡಸ್ಟ್ರಿಯಲ್‌ ಏರಿಯಾದ ನೀರು ಹೋಗಲು ಯಾವುದೇ ಸಮಸ್ಯೆ ಇಲ್ಲ. ಬೈಕಂಪಾಡಿ -ಚಿತ್ರಾಪುರ ರೋಡಿನ ಮಧ್ಯ ಭಾಗದಲ್ಲಿರುವಂತಹ ಸೇತುವೆಯ ಪೂರ್ವ ದಿಕ್ಕಿನ ಚರಂಡಿಯನ್ನು ಸಂಪೂರ್ಣವಾಗಿ ಮುಚ್ಚಿಸಿ ಬೈಲಾರೆ ಪ್ರದೇಶದಲ್ಲಿರುವಂತೆ ಸುಮಾರು 750 ಮನೆಗಳ 5,000 ಜನಕ್ಕೆ ನಿಶ್ಚಿಂತೆಯಿಂದ ರಾತ್ರಿ ಹೊತ್ತಿನಲ್ಲಿ ನಿದ್ದೆ ಮಾಡುವಂತೆ ಹಾಗೂ ಕೃತಕ ನೆರೆಯಿಂದ ನಮ್ಮನ್ನೆಲ್ಲ ಪಾರು ಮಾಡಿ.
 - ವಿಶ್ವೇಶ್ವರ ಬದವಿದೆ, ಬೈಲಾರ ಹಿತರಕ್ಷಣಾ ವೇದಿಕೆ, ಹೊಸಬೆಟ್ಟು 

 ಒತ್ತುವರಿ ತೆರವು
ನಗರದಲ್ಲಿ ಹಾಗೂ ಹೊರವಲಯದಲ್ಲಿ ಈಗಾಗಲೇ ತೋಡು, ರಾಜಕಾಲುವೆಗಳ ವರದಿ ತಯಾರು ಮಾಡಲಾಗುತ್ತಿದೆ. ಒತ್ತುವರಿಯಾಗಿರುವ ಜಾಗ ಗುರುತಿಸಿ ತೆರವು ಮಾಡುವ ಕಾರ್ಯಾಚರಣೆ ನಡೆದಿದೆ. ಮುಂದೆಯೂ ನಡೆಯುತ್ತದೆ.
 - ಮಹಮ್ಮದ್‌ ನಝೀರ್‌,
    ಮನಪಾ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next