Advertisement

14 ವರ್ಷ ಕಳೆದರೂ ಸಿಗದ ಪರಿಹಾರ

01:47 PM Oct 06, 2020 | Suhan S |

ನಾಗಮಂಗಲ: ನಾಲೆ ಕಾಮಗಾರಿಗೆ ಭೂ ಸ್ವಾಧೀನ ಪಡಿಸಿಕೊಂಡು14 ವರ್ಷಗಳೇ ಕಳೆದು ಹೋಗಿದ್ದರೂ, ನಾಲೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಮಾತ್ರಇನ್ನೂ ಪರಿಹಾರ ದೊರಕದಿರುವುದು ವಿಪರ್ಯಾಸ. ರೈತರು ತಮಗಾಗಿರುವ ಅನ್ಯಾಯವನ್ನು ಯಾರಿಗೆ ಬೇಡಿಕೊಂಡರೂ ಫ‌ಲ ಸಿಗದೆ ಇರುವುದರಿಂದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Advertisement

13.17 ಎಕರೆ ಭೂ ಸ್ವಾಧೀನ: ಕಳೆದ 14 ವರ್ಷಗಳ ಹಿಂದೆ ಹೇಮಾವತಿ ನಾಲೆ ನಿರ್ಮಿಸಲು ಬೈರನಹಳ್ಳಿ ಗ್ರಾಮದ 27 ಮಂದಿ ರೈತರ ಒಟ್ಟು 13 ಎಕರೆ 17 ಗುಂಟೆ ಜಮೀನು ಭೂ ಸ್ವಾಧಿನಗೊಂಡಿದೆ. ಇಲ್ಲಿ 2006ರಲ್ಲಿಯೇ ಕಾರ್ಯ ಪಾಲಕ ಅಭಿಯಂತ ರರು, ನಂ.11 ಹೇಮಾವತಿ ನಾಲಾ ವಿಭಾಗ, ಕಾವೇರಿ ನೀರಾವರಿ ನಿಗಮ, ನಿಯಮಿತ, ಯಡಿಯೂರುರವರು ರಾಜ್ಯಪತ್ರ ಘೋಷಣೆಗೂ ಮುನ್ನವೇ ನಾಲೆ ನಿರ್ಮಾಣ ಮಾಡಿದ್ದಾರೆ. ತದ ನಂತರ ಎಲ್ ಎಕ್ಯೂ(2) 303/ 09-2010ರಲ್ಲಿ ಮಂಡ್ಯ

ಜಿಲ್ಲಾಧಿಕಾರಿ 2011ರ ಮೇ. 19ರಂದು ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದ್ದಾರೆ. ಈ ಆದೇಶದಂತೆ ಸರ್ಕಾರ ಭೂಮಿ ವಶಪಡಿಸಿಕೊಂಡು ನಾಲೆ ಕಾಮಗಾರಿಯನ್ನುಪೂರ್ಣಗೊಳಿಸಿದ್ದಾರೆ.ಗುತ್ತಿಗೆದಾರರಿಗೆ ಬಿಲ್‌ ಕೂಡ ಪಾವತಿಯಾಗಿದೆ. ಆದರೆ, ರೈತರಿಗೆ ದೊರಕಬೇಕಾದ ಪರಿಹಾರಕೊಡಿಸುವಲ್ಲಿ ಮಾತ್ರ ಕಂದಾಯ ಮತ್ತು ನೀರಾವರಿ ನಿಗಮದ ಅಧಿಕಾರಿಗಳು ವಿಫ‌ಲರಾಗಿದ್ದಾರೆ.

ಅಧಿಕಾರಿಗಳ ಎಡವಟ್ಟು: ಇಲ್ಲಿ 1 ಗುಂಟೆಯಿಂದ 1.20 ಗುಂಟೆವರೆಗೆ ರೈತರು ಹೇಮಾವತಿ ನಾಲೆಗಾಗಿ ಭೂಮಿ ಕಳೆದುಕೊಂಡಿದ್ದಾರೆ. ಆದರಲ್ಲಿ ನೀರಾವರಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಪ್ಪಿ ನಿಂದಾಗಿ ನಾಲೆ ಒಬ್ಬರ ಜಮೀನಿ ನಲ್ಲಿ ಹೋದರೆ ಭೂಮಿ ಸ್ವಾಧೀನ ವಾಗಿರುವುದೇ ಮತ್ತೂಬ್ಬ ರೈತರ ಜಮೀನಿನಲ್ಲಿ. ಹೀಗಾಗಿ ನಾಲೆ ಕಾಮಗಾರಿ ನಡೆಯುವಾಗ ರೈತರು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ನಡುವೆ ಬಾರಿ ಜಟಾಪಟಿಯೇ ನಡೆದಿತ್ತು. ಈ ಕುರಿತಂತೆ ಹಲವು ಬಾರಿ ಪೊಲೀಸ್‌ ಇಲಾಖೆಯ ಮಧ್ಯ ಪ್ರವೇಶವು ಆಗಿತ್ತು. ತಾಲೂಕಿನಲ್ಲಿ ಹೇಮೆ ನೀರು ಎಡದಂಡೆ ನಾಲೆ ಮತ್ತು ನಾಗಮಂಗಲ ಶಾಖಾ ಕಾಲುವೆ ಮೂಲಕ ಹರಿದು ಇಲ್ಲಿನ ಕೆರೆ ಕಟ್ಟೆಗಳನ್ನು ತುಂಬಿಸಿ ಜೀವಕಳೆ ನೀಡಿದ್ದಾಳೆ.

ದೇವಲಾಪುರ ಹೋಬಳಿಯ ಹಿದುವ, ತೊರೆಮಲ್ಲ ನಾಯಕನಹಳ್ಳಿ, ಮೈಲಾರಪಟ್ಟಣ, ಪಾಲಕೆರೆ, ದೊಡ್ಡ ಉಪ್ಪಳ, ಜಕ್ಕನಹಳ್ಳಿ, ದೊಡ್ಡಚಿಕ್ಕನಹಳ್ಳಿ ಮುತ್ಸಂದ್ರ, ಯಗಟಹಳ್ಳಿ, ಕಾರಗೆರೆ, ಕೊಡಗಹಳ್ಳಿ ಕೆರೆಗಳಿಗೆ ಜೀವ ಚೈತನ್ಯ ಬಂದಿದೆ. ಹಾಗೆಯೇ ಕಸಬಾ ಹೋಬಳಿಯ ತೊಳಲಿ, ಕಾಚೇನಹಳ್ಳಿ, ಬ್ಯಾಡರಹಳ್ಳಿ, ಹಾಲತಿ, ಬೈರನ ಹಳ್ಳಿ, ಅಂಚೆಭೂವನಹಳ್ಳಿ ಕೆರೆಗಳು ಮೈತುಂಬಿವೆ. ಆದರೆ, ಹೇಮೆ ಹರಿಯಲು ದಾರಿ ಮಾಡಿಕೊಟ್ಟ ರೈತ ಅತ್ತ ಜಮೀನು ಇಲ್ಲದೆ ಇತ್ತ ಪರಿಹಾರವು ಇಲ್ಲದೆ ತಲೆ ಮೇಲೆ ಕೈಹೊತ್ತು ಕೂರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸೀಮೆಂಟ್‌ ಲೈನಿಂಗ್‌ ಆಗಿಲ್ಲ: ವಿತರಣಾ ನಾಲೆ 17ರಲ್ಲಿ ನಾಲೆಗೆ ಸಿಮೆಂಟ್‌ ಲೈನಿಂಗ್‌ ಕೂಡ ಆಗಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ನೀರು ಬಿಡುವಾಗ ನಾಲೆ ಬಳಿ ಬಂದು ರೈತರಿಗೆ ಖಾಲಿ ಭರವಸೆ ನೀಡಿ, ತಮ್ಮ ಕೆಲಸವಾದಾಗ ರೈತರಿಗೆ ಕೊಟ್ಟ ಭರವಸೆ ಮರೆತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ರೈತರು, ಜಿಲ್ಲಾಧಿಕಾರಿ, ಭೂ ಸ್ವಾಧೀನ ಅಧಿಕಾರಿ ಕಚೇರಿ ಮತ್ತು ಕಂದಾಯ ಇಲಾಖೆ ಕಚೇರಿ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು ಏನು ಪ್ರಯೋಜನವಾಗಿಲ್ಲ.

ಬೆಳ್ಳೂರು ಹೋಬಳಿಯಲ್ಲೂ ಇದೇ ಕಥೆ: ಬೆಳ್ಳೂರು ಹೋಬಳಿ ಗೋವಿಂದಘಟ್ಟ ಮತ್ತು ಕಾಳಿಂಗನಹಳ್ಳಿ ಗ್ರಾಮಗಳಲ್ಲಿಯೂ ಇದೆ. ಹಾಗೆಯೇ ವಿತರಣಾ ನಾಲೆ 18ರಲ್ಲಿ ಬರುವ ಕೆಂದನಹಳ್ಳಿ ಗ್ರಾಮದ ಎಲ್ಲೆಯಲ್ಲಿಯೂ ಯಾವುದೇ ರೈತರಿಗೂ ಹಣ ಮಂಜೂರಾಗಿಲ್ಲ, ಇಲ್ಲಿ ಹಾಲತಿ ಗ್ರಾಮದ ರೈತರೊಬ್ಬರ ಸಪೋಟ ಗಿಡ ಇರುವ ತೋಟದ30 ಗುಂಟೆ ಜಮೀನು ಹೇಮಾ ವತಿ ನಾಲೆಯ ಪಾಲಾಗಿದೆ. ಅವರಿಗೂ ಇನ್ನು ಹಣ ಬಿಡುಗಡೆಯಾಗಿಲ್ಲ.

ನಾಲೆ 19ರದ್ದೂ ಅದೇ ಕಥೆ: ಮತ್ತೂಂದು ವಿತರಣಾ ನಾಲೆ 19ರಲ್ಲಿ ಇದುವರೆಗೂ ನೀರು ಹರಿದದ್ದೆ ಇಲ್ಲ. ಇಲ್ಲಿಯ ಭೂ ಸ್ವಾಧೀನದ್ದು ಬೇರೆಯದೇ ಕಥೆ ಹೇಳುತ್ತದೆ. ಚೌಡೇನಹಳ್ಳಿ, ಅರಸೇಗೌಡನಕೊಪ್ಪಲು ಮತ್ತು ಉಪ್ಪಾರಹಳ್ಳಿ ಗ್ರಾಮಗಳ ಎಲ್ಲೆಯಲ್ಲಿ ಹಾದು ಹೋಗುವ ನಾಲೆಗೆ ಜಮೀನು ಕೊಟ್ಟ ರೈತರಿಗೆ ಇದುವರೆಗೂ ನಯಾ ಪೈಸೆ ಬಿಡುಗಡೆಯಾಗಿಲ್ಲ. ಇತ್ತೀಚೆ ಗಷ್ಟೇ ನಾಲೆಯಲ್ಲಿ ಬೆಳೆದು ನಿಂತಿದ್ದ ಗಿಡಗಂಟೆಗಳನ್ನು ತೆಗೆಯಲು ಬಂದಿದ್ದ ಹಿಟಾಚಿ ಯಂತ್ರದ ಮೇಲೆ ಕಲ್ಲು ಎಸೆಯಲು ಸ್ಥಳೀಯ ಭೂ ಮಾಲೀಕರು ಇಂಜಿನಿ ಯರ್‌ ಎದುರೇ ಪ್ರಯತ್ನಿಸಿ ತಮ್ಮ ಸಿಟ್ಟನ್ನುಹೊರಗೆಡವಿದ್ದಾರೆ.

ನಾಲೆ ನಿರ್ಮಾಣ ಮಾಡಿಕೊಂಡು ರೈತರಿಗೆ ಇನ್ನೂ ಪರಿಹಾರ ಕೊಡದಿರುವುದು ಸರಿಯಲ್ಲ. ಒಂದು ಗುಂಟೆಗೆ 33 ಸಾವಿರ ಹಣವನ್ನು ಸರ್ಕಾರ ಮುಂಜೂರು ಮಾಡಿದೆ. ಹಣವನ್ನು ಶೀಘ್ರವಾಗಿ ರೈತರಿಗೆ ವಿತರಿಸಬೇಕು. ತಪ್ಪಿದಲ್ಲಿ ರೈತರ ಪರವಾಗಿ ಹೋರಾಟ ನಡೆಸಲಾಗುವುದು. ಸುರೇಶ್‌ಗೌಡ, ಶಾಸಕರು, ನಾಗಮಂಗಲ

2006ರಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎನ್‌. ಚಲುವರಾಯಸ್ವಾಮಿ ಅವಧಿಯಲ್ಲೇ ಈ ವಿತರಣಾ ನಾಲೆಗಳಕಾಮಗಾರಿ ನಡೆದಿದ್ದು, ಭೂ ಸ್ವಾಧೀನಪಡಿಸಿಕೊಂಡ ರೈತರಿಗೆ ನ್ಯಾಯ ದೊರಕಿಲ್ಲ. ರೈತರುಕಳೆದುಕೊಂಡಿ ರುವ ಜಮೀನಿಗೆ ಇಂದಿನ ಮಾರುಕಟ್ಟೆ ದರದಂತೆ ಕೇಂದ್ರದಕಾಯ್ದೆಯಂತೆ ಹಣ ಕೊಡಬೇಕು. ಸಿ.ಚಂದ್ರಪ್ಪ,ಅಧ್ಯಕ್ಷ, ಹೇಮಾವತಿ ನೀರು ಬಳಕೆದಾರರ ಸಂಘ

ವಿತರಣಾ ನಾಲೆ 17ರ ಆರಂಭದಲ್ಲಿಯೇ ಬೈರನಹಳ್ಳಿ ಗ್ರಾಮಸ್ಥರ 13 ಎಕರೆ 17 ಗುಂಟೆ ಜಮೀನು ಭೂ ಸ್ವಾಧೀನ ಮಾಡಿಕೊಂಡಿದ್ದಾರೆ. ಆದರೆ, ರೈತರ ಜಮೀನು ಹೆಚ್ಚು ಹೋಗಿದ್ದರೂಕಡಿಮೆ ತೋರಿಸಲಾಗುತ್ತಿದೆ. ಕೃಷ್ಣೇಗೌಡ,ರೈತ

ಈ ವಿಷಯ ನನ್ನ ಗಮನಕ್ಕೆ ಈಗಷ್ಟೇ ಬಂದಿದೆ. ಈ ಕುರಿತು ಸದನದಲ್ಲಿ ಪ್ರಶ್ನೆ ಮಾಡಿ, ರೈತರಿಗೆ ಈಗಿನ ಮಾರುಕಟ್ಟೆ ದರದಂತೆ ಹಣ ಕೊಡಿಸಲು ಪ್ರಯತ್ನಿಸುವೆ. ಎನ್‌.ಅಪ್ಪಾಜಿಗೌಡ, ವಿಧಾನ ಪರಿಷತ್‌ ಸದಸ್ಯ

 

ಪಿ.ಜೆ.ಜಯರಾಂ

Advertisement

Udayavani is now on Telegram. Click here to join our channel and stay updated with the latest news.

Next