Advertisement
ಪ್ರತಿ ವರ್ಷದ ಮಳೆಗಾಲದಲ್ಲಿ ತೊಡಿಕಾನ ದೇಗುಲ ಬಳಿಯ ಮತ್ಸ್ಯ ತೀರ್ಥ ಹೊಳೆ ಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಈ ಸಂದರ್ಭ ದ.ಕ. ಮತ್ತು ಕೊಡಗು ಜಿಲ್ಲೆಯ ಸಂಪರ್ಕ ರಸ್ತೆಯಾದ ತೊಡಿಕಾನ-ಮಾಪಳಕಜೆ-ಕುದುರೆಪಾಯ ರಸ್ತೆಯಲ್ಲಿ ವಾಹನ ಸಂಪರ್ಕ ಕಡಿತಗೊಳ್ಳುತ್ತಿದೆ. ಇದರಿಂದ ಈ ಭಾಗದ ಜನರು ಹಲವು ವರ್ಷಗಳಿಂದ ಬವಣೆ ಪಡುತ್ತಲೇ ಇದ್ದಾರೆ.
ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವೆ ನಿರ್ಮಾಲಾ ಸೀತರಾಮನ್ ಅವರು 20 ಲಕ್ಷ ರೂ. ಅನುದಾನ ಮೀಸಲಿರಿಸಿದ್ದಾರೆ. ತೊಡಿಕಾನ- ಕುದುರೆಪಾಯ- ಮಾಪಳಕಜೆ ರಸ್ತೆ ದ.ಕ. ಮತ್ತು ಕೊಡಗು ಜಿಲ್ಲೆಯ ಸಂಪರ್ಕ ರಸ್ತೆಯಾಗಿದೆ. ಇದು ಅಂತರ್ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯಾಗಿದ್ದು, ದ.ಕ. ಜಿಲ್ಲೆಯ ಗಡಿಭಾಗದ ತನಕ ಅರಂತೋಡು ಗ್ರಾ.ಪಂ.ನ ವ್ಯಾಪ್ತಿಗೆ ಒಳಪಟ್ಟಿದೆ. ಉಳಿದ ಭಾಗ ಕೊಡಗಿನ ಚೆಂಬು ಗ್ರಾ.ಪಂ. ವ್ಯಾಪ್ತಿಯಲ್ಲಿದೆ. ತೊಡಿಕಾನ ಮಲ್ಲಿಕಾರ್ಜುನ ದೇಗುಲದಿಂದ 2 ಕಿ.ಮೀ. ದೂರದಲ್ಲಿ ದ.ಕ. ಮತ್ತು ಕೊಡಗು ಜಿಲ್ಲೆಯ ಗಡಿ ಗುರುತು ಇದೆ. ಕೊಡಗು ಜಿಲ್ಲೆಯ ವ್ಯಾಪ್ತಿಗೆ ಬರುವ ಮಾಪಳಕಜೆ ತನಕ ರಸ್ತೆಯನ್ನು ಸಂಪೂರ್ಣ ಕೊಡಗು ಜಿಲ್ಲಾಡಳಿತ ಅಭಿವೃದ್ಧಿ ಮಾಡಿದೆ. ಅಲ್ಲಿಯ ತನಕ ಇದು ಸರ್ವಋತು ರಸ್ತೆಯಾಗಿದೆ. ಅರಂತೋಡು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ರಸ್ತೆ ಇನ್ನೂ ಅಭಿವೃದ್ಧಿಗೊಂಡಿಲ್ಲ.
Related Articles
ಅರಂತೋಡು ಗ್ರಾ.ಪಂ. ಅನುದಾನ 1 ಲಕ್ಷ ರೂ. ಹಾಗೂ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ 2 ಲಕ್ಷ ರೂ. ಅನುದಾನ ಒದಗಿಸಿಕೊಟ್ಟ ಹಿನ್ನೆಲೆಯಲ್ಲಿ ತೊಡಿಕಾನ ದೇಗುಲ ಬಳಿಯ ಏರು ರಸ್ತೆಗೆ ಪೆರಂಬಾರು ಸಮೀಪ 60 ಕಿ.ಮೀ. ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಮತ್ಸ್ಯತೀರ್ಥ ಹೊಳೆಯ ಬದಿಯಿಂದ ಕೊಡಗಿನ ಗಡಿಭಾಗದ ತನಕ ಸುಮಾರು 2 ಕಿ.ಮೀ. ರಸ್ತೆ ಅಭಿವೃದ್ಧಿ ಕಾಣಬೇಕಾಗಿದೆ.
Advertisement
ಸುತ್ತು ಬಳಸಿ ಪ್ರಯಾಣಕೊಡಗು ಜಿಲ್ಲೆಯ ವ್ಯಾಪ್ತಿಗೆ ಬರುವ ಕುದುರೆಪಾಯ ಮತ್ತು ಮಾಪಳಕಜೆ ಎನ್ನುವಲ್ಲಿ ಪರಿಶಿಷ್ಟ ಪಂಗಡದ ಜನರೇ ಜಾಸ್ತಿ ವಾಸಿಸುತ್ತಿದ್ದಾರೆ. ಇಲ್ಲಿ ಸುಮಾರು ನೂರಕ್ಕೂ ಅಧಿಕ ಮನೆಗಳಿವೆ. ಮಾತ್ರವಲ್ಲದೆ ಇತರ ಪಂಗಂಡಕ್ಕೆ ಸೇರಿದ ಜನರ ಮನೆಗಳು ಈ ಭಾಗದಲ್ಲಿ ಸಾಕಷ್ಟು ಇವೆ. ದ.ಕ. ಜಿಲ್ಲಾ ವ್ಯಾಪ್ತಿಗೆ ಬರುವ ಮುಪ್ಪಸೇರು ಮತ್ತು ಚಳ್ಳಂಗಾಯ ಭಾಗದಲ್ಲಿ ಸುಮಾರು 20 ಮನೆಗಳಿದ್ದು, ಇಲ್ಲಿನವರು ಮಳೆಗಾಲದಲ್ಲಿ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣವಾಗದ ಕಾರಣ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚರಿಸದ ಕಾರಣ ಕೊಡಗಿನ ಕುದುರೆಪಾಯ ಮತ್ತು ಮಾಪಳೆಕಜೆಯ ಜನರು ಬಹುದೂರದ ಹಾದಿಯದ ಚೆಂಬು-ಕಲ್ಲುಗುಂಡಿ-ಅರಂತೋಡು ಮಾರ್ಗವಾಗಿ ಸುಳ್ಯಕ್ಕೆ ಬರಬೇಕಾಗುತ್ತದೆ. ಗಡಿನಾಡಿನ ಜಿಲ್ಲೆಯವರು ಕಚೇರಿ ವ್ಯವಹಾರವನ್ನು ಬಿಟ್ಟು ವಾಣಿಜ್ಯ ಮತ್ತು ಇತರ ವ್ಯವಹಾರಕ್ಕಾಗಿ ಸುಳ್ಯ ತಾಲೂಕು ಕೇಂದ್ರವನ್ನು ಆಶ್ರಯಿಸಿದ್ದಾರೆ. ಅಭಿವೃದ್ಧಿಗೊಂಡರೆ ಬಹಳ ಪ್ರಯೋಜನ
ತೊಡಿಕಾನ-ಕುದುರೆಪಾಯ-ಮಾಪಳ ಕಜೆ ರಸ್ತೆ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಂಡರೆ ಹಲವು ಪ್ರಯೋಜನ ವಿದೆ. ಮುಖ್ಯವಾಗಿ ಇದು ಅಂತರ್ ಜಿಲ್ಲಾ ರಸ್ತೆಯಾಗಿ ಅಭಿವೃದ್ಧಿಗೊಳ್ಳುತ್ತದೆ. ಈ ಭಾಗದ ಜನರು ಸುತ್ತು ಬಳಸಿಕೊಂಡು ಸುಳ್ಯಕ್ಕೆ ಬರುವ ಸಮಯ, ವಾಹನದ ಇಂಧನ ಉಳಿತಾಯವಾಗಲಿದೆ. ಹಾಗೆಯೇ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ ಹಾಗೂ ತೊಡಿಕಾನದ ಪ್ರವಾಸಿ ತಾಣಗಳು ಇನ್ನೂ ಹೆಚ್ಚು ಅಭಿವೃದ್ಧ್ದಿಯಾಗಲಿವೆ. ಪಂಚಾಯತ್‌ನಿಂದ ಅಸಾಧ್ಯ
ಈ ರಸ್ತೆ ಅಭಿವೃದ್ಧಿ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್ ಸಂಪೂರ್ಣ ಅನುದಾನ ಒದಗಿಸಿ ಕೊಡಲು ಅಸಾಧ್ಯ. ಕಳೆದ ವರ್ಷ 1 ಲಕ್ಷ ರೂ. ಅನುದಾನವನ್ನು ಇದಕ್ಕೆ ಮೀಸಲಿರಿಸಲಾಗಿದೆ. ಶಾಸಕರ ಜತೆ ಚರ್ಚಿಸಿ ರಸ್ತೆ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು.
-ಶಿವಾನಂದ ಕುಕ್ಕುಂಬಳ,
ಉಪಾಧ್ಯಕ್ಷರು, ಅರಂತೋಡು ಗ್ರಾ.ಪಂ. ತೇಜೇಶ್ವರ್ ಕುಂದಲ್ಪಾಡಿ