Advertisement

ಜಿಎಸ್‌ಟಿ ಬಗ್ಗೆ ವ್ಯಾಪಾರಸ್ಥರಲ್ಲಿಲ್ಲ ಅರಿವು

11:20 AM Jul 01, 2017 | Team Udayavani |

ಬೆಂಗಳೂರು: ಜಿಎಸ್‌ಟಿ ಅನುಷ್ಠಾನದಿಂದ ಆಗಬಹುದಾದ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ರಾಜಧಾನಿಯ ಬಹುತೇಕ ವ್ಯಾಪಾರಿಗಳಿಗೆ  ಸ್ಪಷ್ಟ ಮಾಹಿತಿಯೇ ಇಲ್ಲದಂತಿದೆ. ಅದರಲ್ಲೂ ನಗರದಲ್ಲಿ ನಿತ್ಯ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುವ ಕೆ.ಆರ್‌.ಮಾರುಕಟ್ಟೆ, ಅವೆನ್ಯೂರಸ್ತೆ, ಚಿಕ್ಕಪಟ್ಟೆ, ಬಳೆಪೇಟೆ, ಎಸ್‌.ಪಿ.ರಸ್ತೆ ಮೊದಲಾದ ಕಡೆಗಳಲ್ಲಿರುವ ವ್ಯಾಪಾರಸ್ಥರಿಗೆ ಜಿಎಸ್‌ಟಿ ಬಗ್ಗೆ ಮಾಹಿತಿ ಇಲ್ಲ. ಜತೆಗೆ ಅವರು ಇದರ ಬಗ್ಗೆ ತಲೆಕೆಡಿಸಿಕೊಂಡಂತೆಯೂ ಕಾಣಲ್ಲ.

Advertisement

ಜಿಎಸ್‌ಟಿ ಜಾರಿಯ ಮುನ್ನಾ ದಿನವಾದ ಶುಕ್ರವಾರ ಈ ಪ್ರದೇಶಗಳಿಗೆ ಭೇಟಿ ನೀಡಿದಾಗ, ಯಾವುದೇ ನಿಯಮ ಬಂದರೂ ನಮ್ಮ ವ್ಯಾಪಾರ ಹೀಗೇ ಇರುತ್ತದೆ ಬಿಡಿ ಎಂದು ಯಾವುದೇ ರೀತಿಯಲ್ಲೂ ತಲೆ ಕಡೆಸಿಕೊಳ್ಳದೇ ತಮ್ಮ ವ್ಯಾಪಾರ- ವಹಿವಾಟಿನಲ್ಲಿ ನಿರತರಾಗಿದ್ದದ್ದು ಕಂಡು ಬಂದಿತು. 

ಜಿಎಸ್‌ಟಿ ಬಗ್ಗೆ ಇಷ್ಟೆಲ್ಲಾ ಚರ್ಚೆಯಾಗುತ್ತಿದ್ದರೂ, ಇಲ್ಲಿನ ಎಲೆಕ್ಟ್ರಾನಿಕ್ಸ್‌, ಬಟ್ಟೆ, ತಾಮ್ರ ಹಾಗೂ ಕಬ್ಬಿಣದ ವ್ಯಾಪಾರಿಗಳು ಸೇರಿದಂತೆ ಯಾರನ್ನೇ ಕೇಳಿದರೂ, ಜೂನ್‌ 30ರ ವ್ಯಾಪಾರ ಹೇಗಿತ್ತೋ ಜುಲೈ 1ರಿಂದು ಅದೇ ಮುಂದುವರಿಯಲಿದೆ ಎಂದು ಸಲೀಸಾಗಿ ಹೇಳುತ್ತಾರೆ.

ಇಲ್ಲಿ ಒಂದೊಂದು ಬೀದಿಯಲ್ಲಿ ಒಂದೊಂದು ಬಗೆಯ ಬ್ರ್ಯಾಂಡೆಡ್‌ ಉತ್ಪನ್ನ ಸಿಗುತ್ತದೆ. ಬಟ್ಟೆ, ಪಾತ್ರೆಗಳು, ಎಲೆಕ್ಟ್ರಾನಿಕ್ಸ್‌ ಉತ್ಪನ್ನ, ಅಟೋಮೊಬೈಲ್‌ ಉತ್ಪನ್ನ, ಗೃಹ ಅಲಂಕಾರಿಕ ಉತ್ಪನ್ನ ಹೋಲ್‌ಸೇಲ್‌ ಖರೀದಿ,  ರಶೀದಿ ಇಲ್ಲದೇ ಅಗ್ಗದ ದರದಲ್ಲಿ ಸಿಗುತ್ತದೆ. ಈ ಎಲ್ಲಾ ಕ್ಷೇತ್ರದಲ್ಲೂ ಜಿಎಸ್‌ಟಿ ಅನ್ವಯವಾಗುವುದರಿಂದ ವ್ಯಾಪಾರಿಗಳು ಇಂದಿನಿಂದ ಹೇಗೆ ವ್ಯವಹಾರ ನಡೆಸುತ್ತಾರೆ ಎನ್ನುವುದೇ ಕೌತುಕದ ವಿಚಾರ.

ಸಗಟು ವ್ಯಾಪಾರ ಕೇಂದ್ರವೆಂದೇ ಖ್ಯಾತಿ ಪಡೆದಿರುವ  ಬೆಂಗಳೂರಿನ ಚಿಕ್ಕಪೇಟೆ, ಅವೆನ್ಯೂರಸ್ತೆ, ಎಸ್‌.ಪಿ.ರಸ್ತೆ, ಕೆ.ಆರ್‌. ಮಾರುಕಟ್ಟೆ ಮೊದಲಾದ ಸ್ಥಳಗಳಲ್ಲಿ ಎಷ್ಟೇ ವ್ಯಾಪಾರ ಮಾಡಿದರೂ, ರಶೀದಿ ಸಿಗುವುದು ಸಿಗುವುದಿಲ್ಲ. ರಶೀದಿ ಬೇಕಾದರೆ, ಹೆಚ್ಚುವರಿ ಹಣ ಪಾವತಿಸಬೇಕು. ಬ್ರ್ಯಾಂಡೆಡ್‌ ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಲ್‌ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್‌ ವಸ್ತುಗಳು ಅಗ್ಗದ ದರದಲ್ಲಿ ರಶೀದಿ ಇಲ್ಲದೆ ದೊರೆಯುತ್ತದೆ.

Advertisement

ಜಿಎಸ್‌ಟಿ ಅನುಷ್ಠಾನದ ನಂತರ ಇದಕ್ಕೆಲ್ಲ ಬ್ರೇಕ್‌ ಬೀಳುತ್ತದೆಯೋ ಅಥವಾ ಜಿಎಸ್‌ಟಿ ಇಲ್ಲದೇ ಗೂಡ್ಸ್‌ ಮಾರಾಟಕ್ಕೆ ಇನ್ಯಾವುದಾದರೂ ಹೊಸ ಮಾರ್ಗ ಹುಡುಕುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಬಗ್ಗೆ ಕಳೆದ ಕೆಲವು ತಿಂಗಳಿಂದ ಬಹಳಷ್ಟು ಚರ್ಚೆ, ಸಂವಾದ, ವಿಚಾರ ಗೋಷ್ಠಿ, ತಿಳುವಳಿಕೆ ಕಾರ್ಯಗಾರ, ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದರ ಜತೆ ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ.

ಆದರೂ, ಬಹುತೇಕರಲ್ಲಿ ಜಿಎಸ್‌ಟಿ ಬಗ್ಗೆ ಇರುವ ಗೊಂದಲ ಬಗೆಹರಿದಿಲ್ಲ. ಯಾವೆಲ್ಲ ವಸ್ತುಗಳ ದರ ಹೆಚ್ಚಾಗುತ್ತದೆ ಮತ್ತು ಯಾವುದು ಅಗ್ಗವಾಗಲಿದೆ ಎಂಬುದರ ಸ್ಪಷ್ಟತೆಯೂ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದವರಿಗೆ ಮಾತ್ರವಲ್ಲ ನಗರ ಪ್ರದೇಶದ ಸುಶಿಕ್ಷಿತರಿಗೂ ಈ ಬಗ್ಗೆ ಗೊಂದಲ ಇದೆ.

ಗ್ರಾಹಕರಿಗೆ ಕಡಿಮೆ ದರದಲ್ಲಿ ಎಲ್ಲಾ ಬಗೆಯ ಎಲೆಕ್ಟ್ರಾನಿಕ್ಸ್‌ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದೇವೆ. ರಶೀದಿ ಕೇಳಿದರೆ, ನೀಡುತ್ತೇವೆ. ಮುಂದೆಯೂ ಕೊಡುತ್ತೇವೆ. ಜಿಎಸ್‌ಟಿಯಿಂದ ನಮ್ಮ ವ್ಯಾಪಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
-ವಿಶಾಲ್‌, ಎಲೆಕ್ಟ್ರಾನಿಕ್ಸ್‌ ವ್ಯಾಪಾರಿ, ಎಸ್‌.ಪಿ.ರಸ್ತೆ

ಹೋಲ್‌ಸೇಲ್‌ ಬಟ್ಟೆ ವ್ಯಾಪಾರಿಗಳ ಮೇಲೂ ಜಿಎಸ್‌ಟಿ ಹೇರಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಜವಳಿ ಮೇಲಿನ ಜಿಎಸ್‌ಟಿಯನ್ನು ಹಿಂದಕ್ಕೆ ಪಡೆಯಬೇಕು.  ಇಲ್ಲವಾದರೆ ಗ್ರಾಹಕರಿಗೆ ಅಗ್ಗದ ದರದಲ್ಲಿ ಬಟ್ಟೆ ಒದಗಿಸುವುದು ಅಸಾಧ್ಯ.
-ಕೌಶಿಕ್‌,  ಬಟ್ಟೆ ವ್ಯಾಪಾರಿ

ನಮ್ಮಂತ ಸಣ್ಣಪುಟ್ಟ ಅಂಗಡಿಗಳ ಮೇಲೆ ಜಿಎಸ್‌ಟಿ ಹೇಗೆ ಅನ್ವಯ ಆಗುತ್ತದೆ ಎಂಬುದು ಗೊತ್ತಿಲ್ಲ. ಜುಲೈ ತಿಂಗಳಲ್ಲಿ ಇದರ ಸಂಪೂರ್ಣ ಚಿತ್ರಣ ದೊರೆಯಲಿದೆ.
-ಪ್ರಸಾದ್‌, ಅವೆನ್ಯೂರಸ್ತೆ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next