Advertisement
ದಶಕಗಳ ಹಿಂದೆ ರೈತಸಂಘಟನೆಗಳ ಮುಖಂಡರು ಸೇರಿ ಇಂತಹದೊಂದು ಪ್ರಯತ್ನ ನಡೆಸಿದ್ದರು. ಆದರೆ, ಕೆಲ ಕಾರಣಗಳಿಂದಾಗಿ ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂಬ ರೈತ ಮುಖಂಡರ ಪ್ರಯತ್ನ ಸಫಲವಾಗಿರಲಿಲ್ಲ.
Related Articles
Advertisement
ಹೀಗಾಗಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿರುವುದರಿಂದ ಕಾವೇರಿ ನದಿ ಪಾತ್ರದ ರೈತರು ಬೆಳೆ ಪದ್ಧತಿ ಬದಲಿಸಿಕೊಳ್ಳಬೇಕು, ಬೆಳೆ ರಜೆಯನ್ನೂ ಘೋಷಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಎರಡೂ ರಾಜ್ಯಗಳಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಿ ಚರ್ಚಿಸಿದ ಬಳಿಕ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜೆ.ಜಯಲಲಿತಾ, ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ದುಂಡುಮೇಜಿನ ಸಭೆ ನಡೆಸಿ ಕಾವೇರಿ ನೀರು ಹಂಚಿಕೆ ಸಂಬಂಧದ ಶತಮಾನಗಳ ಸಮಸ್ಯೆಗೆ ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳುವ ಗಂಭೀರ ಪ್ರಯತ್ನ ನಡೆದಿತ್ತು.
ಆದರೆ, ಮುಖ್ಯಮಂತ್ರಿಗಳ ಭೇಟಿ ಮಾಡುವ ವಿಚಾರದಲ್ಲಿ ತಮಿಳುನಾಡಿನ ಕೆಲವರು ಅಡ್ಡಗಾಲು ಹಾಕಿದ್ದರಿಂದ ನಮ್ಮ ಪ್ರಯತ್ನ ಕೈಗೂಡಲಿಲ್ಲ ಎನ್ನುತ್ತಾರೆ ಕಾವೇರಿ ಕುಟುಂಬದ ಸದಸ್ಯರಾಗಿರುವ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ. ಈಗಲೂ ಕಾವೇರಿ ಕುಟುಂಬ ಜೀವಂತವಾಗಿದೆ. ಆದರೆ, ನ್ಯಾಯಾಲಯದ ಆದೇಶದಿಂದ ಕರ್ನಾಟಕಕ್ಕೆ ಹಿನ್ನಡೆ ಉಂಟಾಗಿರುವುದರಿಂದ ಸಕ್ರಿಯವಾಗಿಲ್ಲ ಎನ್ನುತ್ತಾರೆ ಅವರು.
ಒಂದೊಮ್ಮೆ ತಮಿಳುನಾಡಿನ ಕೆಲ ರೈತ ಮುಖಂಡರು ಅಡ್ಡಗಾಲು ಹಾಕದಿದ್ದರೆ ಅಂದೇ ಸಮಸ್ಯೆ ಬಗೆಹರಿಯುತ್ತಿತ್ತು. ಇದು ಸಾಧ್ಯವಾಗಿದ್ದರೆ, ಕಾವೇರಿ ನ್ಯಾಯಾಧೀಕರಣ ಕರ್ನಾಟಕಕ್ಕೆ ಕೊಟ್ಟಿದ್ದಕ್ಕಿಂತ 15 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಗುತ್ತಿತ್ತು ಎಂದು ಬಡಗಲಪುರ ನಾಗೇಂದ್ರ “ಉದಯವಾಣಿ’ ಜತೆಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಸದ್ಗುರು ರಾಷ್ಟ್ರಯಾತ್ರೆ ಇಂದು ಮೈಸೂರಿಗೆ: ನದಿಗಳನ್ನು ರಕ್ಷಿಸಿ ಅಭಿಯಾನ ಕೈಗೊಂಡಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ರಾಷ್ಟ್ರಯಾತ್ರೆ ಶುಕ್ರವಾರ ಮೈಸೂರು ತಲುಪಲಿದೆ. ರಾಷ್ಟ್ರಯಾತ್ರೆ ಅಂಗವಾಗಿ ಸಂಜೆ 6ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದ್ದು, ರಾಜವಂಶಸ್ಥರಾದ ಡಾ.ಪ್ರಮೋದಾದೇವಿ ಒಡೆಯರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ನಟ ಗಣೇಶ್, ಸಂಸದ ಪ್ರತಾಪ್ ಸಿಂಹ, ಶಾಸಕ ವಾಸು ಭಾಗವಹಿಸಲಿದ್ದಾರೆ. ಸುಮಾರು 10 ಸಾವಿರ ಮಂದಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ರೈತರ ಸಭೆ: ಇದಕ್ಕೂ ಮುನ್ನ ಕೆಆರ್‌ಎಸ್ ಜಲಾಶಯದ ಹಿನ್ನೀರಿನ ಮೀನಾಕ್ಷಿಪುರದಲ್ಲಿ ಬೆಳಗ್ಗೆ 8.30ರಿಂದ 10ಗಂಟೆವರೆಗೆ ಕರ್ನಾಟಕ ಮತ್ತು ತಮಿಳುನಾಡು ಕಾವೇರಿ ನದಿ ಪಾತ್ರದ ರೈತರ ಸಭೆಯನ್ನು ಸದ್ಗುರು ನಡೆಸಲಿದ್ದಾರೆ.
ಸದ್ಗುರು ಅಭಿಯಾನದ ಉದ್ದೇಶವಿದು: ಭಾರತದ ನದಿಗಳು ದುಃಸ್ಥಿತಿಗೆ ತಲುಪಿದ್ದು, ಒಂದೊಮ್ಮೆ ವರ್ಷಪೂರ್ತಿ ಹರಿಯುತ್ತಿದ್ದ ನದಿಗಳು ಇಂದು ಮಳೆಗಾಲದಲ್ಲಿ ಹರಿಯುವ ನದಿಗಳಾಗಿವೆ. ಅದೆಷ್ಟೋ ಚಿಕ್ಕಪುಟ್ಟ ನದಿಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ. ಮುಂದಿನ 15 ವರ್ಷಗಳಲ್ಲಿ ನಮಗೆ ಬದುಕಲು ಅವಶ್ಯವಿರುವಷ್ಟು ನೀರೂ ಸಿಗುವುದಿಲ್ಲ.
ಮುಖ್ಯ ನದಿಗಳಾದ ಗಂಗಾ, ಕೃಷ್ಣಾ, ನರ್ಮದಾ, ಕಾವೇರಿ ಬಹು ಬೇಗನೆ ಬತ್ತಿ ಹೋಗುತ್ತಿವೆ. ಹೀಗಾಗಿ ನದಿಗಳನ್ನು ರಕ್ಷಿಸಿಕೊಳ್ಳಬೇಕಿರುವುದರಿಂದ ದೇಶಾದ್ಯಂತ ಜನ ಜಾಗೃತಿ ಮೂಡಿಸಲು ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ರಾಷ್ಟ್ರಯಾತ್ರೆ ಕೈಗೊಂಡಿದ್ದಾರೆ.
* ಗಿರೀಶ್ ಹುಣಸೂರು