ನವದೆಹಲಿ: ಭಾರತದಲ್ಲಿ 9,152 ಕೋವಿಡ್ 19 ಸೋಂಕು ಪೀಡಿತರ ಪ್ರಕರಣ ಪತ್ತೆಯಾಗಿದ್ದು, ಸೋಮವಾರ 35 ಜನರು ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮತ್ತೊಂದೆಡೆ ಕೋವಿಡ್ 19 ಪ್ರಕರಣ ಹೊಸದಾಗಿ ಪತ್ತೆಯಾಗುತ್ತಿರುವ ನಡುವೆಯೇ ದೇಶದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಒಂದೇ ಒಂದು ಕೋವಿಡ್ 19 ಪ್ರಕರಣ ಪತ್ತೆಯಾಗಿಲ್ಲ ಎಂದು ವಿವರಿಸಿದೆ.
ದೇಶಾದ್ಯಂತ 9ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 856 ಜನರು ಗುಣಮುಖರಾಗಿದ್ದರು. ಅಲ್ಲದೇ 72 ಮಂದಿ ವಿದೇಶಿ ಪ್ರಜೆಗಳು ಇದರಲ್ಲಿ ಸೇರಿರುವುದಾಗಿ ಸಚಿವಾಲಯ ತಿಳಿಸಿದೆ.
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ದೇಶದಲ್ಲಿ ಕೋವಿಡ್ ಸೋಂಕಿತರ ಪ್ರಕರಣ 9,152ಕ್ಕೆ ಏರಿದ್ದು, ಸಾವಿನ ಸಂಖ್ಯೆ 308ಕ್ಕೆ ತಲುಪಿದೆ ಎಂದು ತಿಳಿಸಿದರು.
ಏಪ್ರಿಲ್ 12ಕ್ಕೂ ಮುನ್ನ ದೇಶದ 80 ಜಿಲ್ಲೆಗಳಲ್ಲಿ ಕೋವಿಡ್ 19 ಸೋಂಕು ಹರಡಿತ್ತು. ಆದರೆ ಒಳ್ಳೆಯ ಸುದ್ದಿ ಎಂಬಂತೆ ಸೋಂಕು ಹರಡದಂತೆ ತಡೆಗಟ್ಟಲು ಕೈಗೊಂಡ ಕ್ರಮದ ಪರಿಣಾಮವಾಗಿ 25 ಜಿಲ್ಲೆಗಳಲ್ಲಿ ಸೋಂಕು ಹರಡಿಲ್ಲ. ಈವರೆಗೆ ದೇಶದಲ್ಲಿ 400 ಜಿಲ್ಲೆಗಳು ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿದೆ.