ರಾಯಚೂರು: ಆರಂಭದಲ್ಲಿ ದಲಿತ ಸಾಹಿತ್ಯಕ್ಕೆ ಸಾತ್ವಿಕ ನೆಲೆಗಟ್ಟಿಲ್ಲ ಎಂದು ಅನೇಕರು ಜರಿದರು. ಆದರೆ, ಬೇರೆ ಸಾಹಿತ್ಯದಂತೆ ಇದಕ್ಕೆ ಯಾವುದೇ ಚೌಕಟ್ಟು, ಗಡಿ ರೇಖೆಗಳಿಲ್ಲ ಎಂಬುದನ್ನು ಅರಿಯಬೇಕು ಎಂದು ಗಂಗಾವತಿ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ದೇವೇಂದ್ರಪ್ಪ ಜಾಜಿ ಹೇಳಿದರು.
ನಗರದ ರಂಗಮಂದಿರದಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ದಲಿತ ಬಂಡಾಯ ಸಾಹಿತ್ಯ; ಸೈದ್ಧಾಂತಿಕ ನೆಲೆಗಟ್ಟು ಎಂಬ ವಿಷಯದ ಕುರಿತು ಅವರು ಮಾತನಾಡಿದರು.
70ರ ದಶಕದಲ್ಲಿ ಹುಟ್ಟಿಕೊಂಡ ಬಂಡಾಯ ಸಾಹಿತ್ಯದ ಚಳವಳಿ ನಾನಾ ಆಯಾಮ ಪಡೆಯಿತು. ಆದರೆ, ಇದನ್ನು ಒಪ್ಪದ ವ್ಯವಸ್ಥೆ ಅದೊಂದು ಸಾಹಿತ್ಯವೇ ಅಲ್ಲ ಎನ್ನುವಂತೆ ಮಾಡಿತ್ತು. ಅದಕ್ಕೂ ಮುನ್ನ ನಾಡಿನ ಮೇರು ಸಾಹಿತಿಗಳು ಕುಲಭೇದದ ಬಗ್ಗೆ ಬರೆದಿದ್ದರು ಎಂಬುದನ್ನು ಅರಿಯಬೇಕು. ಹರಿಹರ, ರಾಘವಾಂಕ, ವಾಲ್ಮೀಕಿಯಂಥವರು ತಮ್ಮ ಕೃತಿಗಳಲ್ಲಿ ಕುಲಭೇದವನ್ನು ಪ್ರಶ್ನಿಸಿದ್ದಾರೆ ಎಂದು ವಿವರಿಸಿದರು.
ದಲಿತ ಬಂಡಾಯ ಸಾಹಿತ್ಯ ಸ್ಥಗಿತಗೊಂಡಿಲ್ಲ. ಇಂದಿಗೂ ಅನೇಕ ಸಾಹಿತಿಗಳು ತಮ್ಮೊಳಗಿನ ತುಮುಲಗಳನ್ನು ಬರಹಗಳಲ್ಲಿ ದಾಖಲಿಸುತ್ತಿದ್ದಾರೆ. ಸಾಫ್ಟವೇರ್ ಯುಗದಲ್ಲಿ ನಾಜೂಕಾದ ಶೋಷಣೆಗಳು ದಾಳಿ ಮಾಡುತ್ತಲೇ ಇವೆ. ಆದರೆ, ಬಂಡಾಯದ ಜತೆಗೆ ನಾವಿದ್ದೇವೆ ಎನ್ನುವವರ ಬಗ್ಗೆಯೂ ಜಾಗರೂಕತೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ದಲಿತ ಸಾಹಿತ್ಯ ಹಾಗೂ ಸಾಮಾಜಿಕ ತಲ್ಲಣಗಳ ಕುರಿತು ಮಾತನಾಡಿದ ದೇವೇಂದ್ರ ಹೆಗಡೆ, ಈಗ ನಮ್ಮೆದುರು ಸಂಕಲ್ಪಗಳೇ ಇಲ್ಲ ಎನ್ನುವ ತಲ್ಲಣ ಕಾಡುತ್ತಿದೆ. ಸಾಹಿತ್ಯದ ಬಗ್ಗೆ ಮಾತನಾಡಿ ಸುಮ್ಮನಾಗುತ್ತಿದ್ದೇವೆ. ಈಗ ಮನುವಾದ ಮತ್ತಷ್ಟು ಆಳಕ್ಕೆ ಬೇರು ಬಿಟ್ಟು ತಳದಿಂದ ಬೆಳೆಯುತ್ತಿದೆ. ನಮ್ಮ ಮನೆ ಪಕ್ಕದಲ್ಲಿ ಹಿಂದುತ್ವವಾದ ಬೆಳೆಯುತ್ತಿದ್ದರೆ ನಾವು ಮಾತ್ರ ನಮ್ಮ ವೈಚಾರಿಕೆ ನೆಲೆಗಟ್ಟಿನಲ್ಲಿ ಬೆಳೆಯದೆ ಹಿಂದುಳಿಯುತ್ತಿದ್ದೇವೆ ಎಂದು ವಿಷಾದಿಸಿದರು. ಆಶಯ ನುಡಿಗಳನ್ನಾಡಿದ ಪತ್ರಕರ್ತ ನಾಗತಿಹಳ್ಳಿ ನಾಗರಾಜ, ಈಗ ವ್ಯವಸ್ಥೆಯನ್ನು ಪ್ರಶ್ನಿಸಿದವರನ್ನು ನಗರ ನಕ್ಸಲ್‌ಗಳು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ.
ದಲಿತರನ್ನು ನೇರವಾಗಿ ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಸಮಾನತೆ ಬೇಕಾದರೆ ಸವಾಲು ಎದುರಿಸಲೇಬೇಕು. ಪ್ರಗತಿಪರರು ಕೂಡ ಕೋಮುವಾದಿಗಳ ಜತೆ ಕೈ ಜೋಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಜವಾದ ಎಂದರೆ ದೇಶದ್ರೋಹ ಎನ್ನುವಂತಾಗಿದೆ. ಯುವಕರು ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಬೇಕು. ಕೇವಲ ಕಾಲಹರಣಕ್ಕೆ ಮಾತ್ರವಲ್ಲದೇ ನಮ್ಮತನ ಬಲಗೊಳ್ಳಲು ಬಳಸಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಅಲ್ಲಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ, ಸಾಹಿತಿ ವೀರ ಹನುಮಾನ, ಮಲ್ಲಿಕಾರ್ಜುನ ಶಿಖರಮಠ, ಎಂ.ಆರ್. ಭೇರಿ, ಚಾಂದಪಾಷಾ ಪಾಲ್ಗೊಂಡಿದ್ದರು.