Advertisement

ನಗರ ಮಹಾಯೋಜನೆಗೆ ಅಪಸ್ವರ

09:57 AM Dec 03, 2018 | |

ಸುಳ್ಯ : ನಗರ ಪಂಚಾಯತ್‌ ಆಗಿ 20 ವರ್ಷಗಳು ಕಳೆದಿವೆ. ಅಚ್ಚರಿ ಅಂದರೆ ಇಲ್ಲಿ ನಗರಾಭಿವೃದ್ಧಿಗೆ ಸಂಬಂಧಿಸಿ ಯಾವ ಮಾಸ್ಟರ್‌ ಪ್ಲ್ರಾನ್‌ ಕೂಡ ಚಾಲ್ತಿಯಲ್ಲಿಲ್ಲ! ಇಲ್ಲಿ ಮಂಡಲ ಪಂಚಾಯತ್‌ ಆಡಳಿತದ ಪ್ರಕ್ರಿಯೆ ಈಗಲೂ ಮುಂದುವರಿದೆ. ನಿರ್ದಿಷ್ಟ ವಲಯಗಳು ರೂಪಿತವಾಗಿಲ್ಲ. ನಗರ ಮಹಾಯೋಜನೆ ಬಗ್ಗೆ ಆತಂಕ ಇರುವುದೇ ಅನುಷ್ಠಾನದ ವಿಳಂಬಕ್ಕೆ ಮುಖ್ಯ ಕಾರಣ.

Advertisement

ಏಕೆ ಆತಂಕ?
ಹತ್ತು ವರ್ಷಗಳಿಂದ ಟೌನ್‌ ಪ್ಲ್ಯಾನಿಂಗ್‌ ಅನುಷ್ಠಾನದ ವಿಚಾರ ನನೆಗುದಿಯಲ್ಲಿದೆ. ಇದು ಸುಳ್ಯದಂತಹ ಪ್ರಾಕೃತಿಕ ನಗರಕ್ಕೆ ಪೂರಕ ಅಲ್ಲ. ವಸತಿ, ನಿವೇಶನಗಳಿಗೆ ಸಂಚಕಾರ ಉಂಟಾಗಲಿದೆ ಎಂಬ ಆತಂಕ ಜನಪ್ರತಿನಿಧಿಗಳದ್ದು. ಸೂಡಾ ಆರಂಭಗೊಳ್ಳುವ ಮೊದಲು ಮನೆ, ಕಟ್ಟಡ ನಿರ್ಮಿಸಿದವರಿಗೆ ನಿಯಮ ಅನ್ವಯವಾದಲ್ಲಿ ಕಷ್ಟ. ಈಗ ನೀಲ ನಕಾಶೆಯಲ್ಲಿ ಫಾರೆಸ್ಟ್‌ ಎಂದು ತೋರಿಸಿರುವ ಜಾಗದಲ್ಲಿ ಮನೆಗಳಿವೆ. ಮೂರು ಸೆಂಟ್ಸ್‌ ಜಾಗ ಹೊಂದಿರುವವರೂ ರಸ್ತೆಗೆ ಜಾಗ ಬಿಡಬೇಕು ಎಂಬ ಹತ್ತಾರು ನಿಯಮಗಳಿಂದ ಜನರಿಗೆ ತೊಂದರೆ ಉಂಟಾಗಲಿದೆ ಎನ್ನುವುದು ಅನುಷ್ಠಾನದ ವಿರೋಧಕ್ಕಿರುವ ಕಾರಣ.

ಕೆಲ ತಿಂಗಳ ಹಿಂದೆ ಸೂಡಾ ಅಧಿಕಾರಿಗಳು ನೀಲ ನಕಾಶೆಯ ಬಗ್ಗೆ ನಗರ ಪಂಚಾಯತ್‌ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದರು. ಆಗ ಬದಲಾವಣೆಗೆ ಅಭಿಪ್ರಾಯ ವ್ಯಕ್ತವಾಗಿತ್ತು. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವವಾಗಿತ್ತು. ಮಹಾಯೋಜನೆ ಅನುಷ್ಠಾನದ ಸಾದಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದ್ದರು. ಅದಕ್ಕಾಗಿ ವಿಶೇಷ ಸಭೆ ಕರೆಯಲು ನಿರ್ಧರಿಸಲಾಗಿತು. 

ಏಕೆ ಬೇಕು?
ನಗರದಲ್ಲಿ ಈಗ ಯಾವ ಪ್ಲ್ಯಾನಿಂಗ್‌ ಇಲ್ಲ. ಇದರಿಂದ 33 ಕೆ.ವಿ., 110 ಕೆ.ವಿ. ಮೊದಲಾದ ಯೋಜನೆಗಳು ನಗರದೊಳಗೆ ಅನುಷ್ಠಾನಕ್ಕೆ ಅಡ್ಡಿ ಆಗಬಹುದು. ಈಗಿನ ಒಳಚರಂಡಿ ವೈಫಲ್ಯಕ್ಕೂ ಅದೇ ಕಾರಣ. ವಲಯಗಳನ್ನು ಗುರುತಿಸದೆ ಇದ್ದಲ್ಲಿ ನಗರದ ಎಲ್ಲೆಂದರಲ್ಲಿ ವಾಣಿಜ್ಯ, ಗೃಹ, ಕೈಗಾರಿಕೆ ಮೊದಲಾದವುಗಳು ನಿರ್ಮಿಸಿ ಭವಿಷ್ಯದ ಅಭಿವೃದ್ಧಿ ಕಾರ್ಯ ಅನುಷ್ಠಾನಕ್ಕೆ ಅಡ್ಡಿ ಆಗಲಿದೆ ಅನ್ನುವುದು ಅಧಿಕಾರಿಗಳು ಅಭಿಪ್ರಾಯ.

ಮಾಸ್ಟರ್‌ ಪ್ಲ್ಯಾನ್‌ ಅಂಗೀಕಾರವಾದ ಬಳಿಕ ನಿರ್ದಿಷ್ಟ ರಸ್ತೆಗಳ ಉದ್ದೇಶಿತ ವಿಸ್ತೀರ್ಣದ ಒಳಗೆ ಹೊಸ ಕಟ್ಟಡ, ಕಟ್ಟಡ ವಿಸ್ತರಣೆ, ಭೂ ಪರಿವರ್ತನೆಗೆ ಸೂಡಾ ಅನುಮತಿ ನೀಡದು. ಮಾಸ್ಟರ್‌ ಪ್ಲ್ಯಾನ್‌ ಅನ್ವಯದಂತೆ ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾಮಗಾರಿ ಆಗಬೇಕು. ನಿರ್ದಿಷ್ಟ ಯೋಜನೆ ಕಾರ್ಯಗತಕ್ಕೆ ನಿರ್ದಿಷ್ಟ ವಲಯ (ಪ್ರದೇಶ) ಎಂದು ಗುರುತಿಸಿದ್ದಲ್ಲಿ ಭವಿಷ್ಯದಲ್ಲಿ ಮನೆ, ವಾಣಿಜ್ಯ ಕಟ್ಟಡ ಕಟ್ಟುವಾಗ ಅಥವಾ ಇತರೆ ಯೋಜನೆ ಅನುಷ್ಠಾನಿಸುವಾಗ ಅಡ್ಡಿ ಉಂಟಾಗದು. ಉದಾಹರಣೆಗೆ ಕೈಗಾರಿಕೆ ವಲಯದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ಸಿಗದು. ವಲಯಕ್ಕೆ ಸಂಬಂಧಪಡದ ಕಾಮಗಾರಿಗಳಿಗೆ ಸೂಡಾ ಅನುಮತಿ ನೀಡುವುದಿಲ್ಲ. ಇದರಿಂದ ಯೋಜನೆ ಅನುಷ್ಠಾನಿಸುವ ಸಂದರ್ಭ ಅಡ್ಡಿ, ಆಕ್ಷೇಪಣೆ, ವಿಳಂಬಕ್ಕೆ ಅವಕಾಶ ಇರದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ನಗರವನ್ನು ಎಲ್ಲೆಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬ ಬಗ್ಗೆ ರೂಪುರೇಷೆ ಮಾಡದಿದ್ದರೆ ಸರಕಾರದಿಂದ ವಿಶೇಷ ಅನುದಾನಗಳನ್ನು ಕೇಳಲು ಆಗದು. ಪ್ಲ್ಯಾನ್ ಅನುಷ್ಠಾನಗೊಂಡಲ್ಲಿ ಆ ವಲಯಕ್ಕೆ ಅದರ ಮೇಲೆ ಅನುದಾನ ಕೇಳಬಹುದು ಅನ್ನುತ್ತಾರೆ ನ.ಪಂ. ಅಧಿಕಾರಿಗಳು.

Advertisement

ಆಕ್ಷೇಪಣೆಗೆ ಅವಕಾಶ
ನಗರಾಭಿವೃದ್ಧಿ ಇಲಾಖೆ ಮಾಡಿರುವ ಕರಡು ಮಾಸ್ಟರ್‌ ಪ್ಲ್ರಾನ್‌ ಅನ್ನು ಸಾಮಾನ್ಯ ಸಭೆಯಲ್ಲಿ ಇಟ್ಟು ಅನುಮೋದನೆ ಪಡೆದುಕೊಳ್ಳಬೇಕು. ಎರಡು ತಿಂಗಳ ಕಾಲ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಜನರ ಅಥವಾ ಜನಪ್ರತಿನಿಧಿಗಳು ಪ್ರಶ್ನೆ ರೂಪದಲ್ಲಿ ಕೇಳುವ ಅನುಮಾನಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಮಾಸ್ಟರ್‌ ಪ್ಲ್ರಾನ್‌ ರೂಪಿಸಲು ಸಾರ್ವಜನಿಕರ ಅಭಿಪ್ರಾಯವೇ ಅಂತಿಮವಾಗಿರುತ್ತದೆ. 60ನೇ ದಿನ ಸಲಹೆ, ಆಕ್ಷೇಪಗಳನ್ನು ಪರಿಗಣಿಸಿ ಮಾಸ್ಟರ್‌ ಪ್ಲ್ರಾನ್‌ ಅಂತಿಮಗೊಳಿಸಿ, ಸರಕಾರಕ್ಕೆ ಕಳುಹಿಸಲಾಗುತ್ತದೆ. ಬಳಿಕ ಟೌನ್‌ ಪ್ಲ್ಯಾನಿಂಗ್‌ ಅನುಷ್ಠಾನಕ್ಕೆ ಬರುತ್ತದೆ. 

ಏನಿದು ಟೌನ್‌ ಪ್ಲ್ಯಾನಿಂಗ್‌?
ಮಂಡಲ ಪಂಚಾಯತ್‌ನಿಂದ ನಗರ ಪಂಚಾಯತ್‌ ಆಗಿ ಮೇಲ್ದರ್ಜೆಗೆ ಏರಿದ ತತ್‌ಕ್ಷಣ ಆ ನಗರಕ್ಕೆ ಟೌನ್‌ ಪ್ಲ್ಯಾನಿಂಗ್‌ ಆ್ಯಕ್ಟ್ಅನ್ವಯಗೊಳ್ಳುತ್ತದೆ. ಅದರಂತೆ ಟೌನ್‌ ಪ್ಲ್ಯಾನಿಂಗ್‌ ರೂಪಿಸಿ ಅಭಿವೃದ್ಧಿ ಯೋಜನೆ ಅನುಷ್ಠಾನಿಸಬೇಕು. ಕೈಗಾರಿಕೆ, ವಾಣಿಜ್ಯ ಹೀಗೆ ಬೇರೆ-ಬೇರೆ ವಲಯ ಗುರುತಿಸಿ, ಅದಕ್ಕೆ ಪೂರಕ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕೈಗಾರಿಕೆ ವಲಯದಲ್ಲಿ ವಾಣಿಜ್ಯ ಚಟುವಟಿಕೆಗೆ, ವಾಣಿಜ್ಯ ವಲಯದಲ್ಲಿ ಕೈಗಾರಿಕೆಗಳಿಗೆ ಅವಕಾಶ ಕೊಡುವಂತಿಲ್ಲ. ಇಂತಹ ಹಲವು ನಿಯಮಗಳ ವ್ಯಾಪ್ತಿಗೆ ನಗರ ಒಳಪಡುತ್ತದೆ.

ಮಾರ್ಪಾಡಾಗಬೇಕು
ಮಹಾಯೋಜನೆಗೆ ಅನುಮೋದನೆ ನೀಡುವ ಮೊದಲು ಸಾದಕ-ಬಾಧಕಗಳ ಬಗ್ಗೆ ಪ್ರತೀ ಮನೆಯವರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಸೂಡಾ ಅಧಿಕಾರಿಗಳು ಮಾಹಿತಿ ನೀಡಿದ ವೇಳೆ ನೀಲ ನಕಾಶೆಯ ಕೆಲವು ಅಂಶಗಳ ಮಾರ್ಪಾಡಿಗೆ ಸಲಹೆ ನೀಡಿದ್ದೇವೆ. ವಿಶೇಷ ಸಭೆ ಕರೆದು ಚರ್ಚೆ ಆಗಬೇಕು.
-ಮುಸ್ತಾಫ ಕೆ.ಎಂ.
ನ.ಪಂ. ಸದಸ್ಯರು, ಸುಳ್ಯ

ಜನಾಭಿಪ್ರಾಯವೇ ಅಂತಿಮ
ಮಂಡಲ ಪಂಚಾಯತ್‌ನಿಂದನಗರ ಪಂಚಾಯತ್‌ಗೆ ಮೇಲ್ದರ್ಜೆಗೆ ಏರಿದ್ದರೂ ಇಲ್ಲಿ ಯಾವುದೇ ಟೌನ್‌ ಪ್ಲ್ಯಾನಿಂಗ್‌ ಇಲ್ಲ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಉಂಟಾಗಲಿದೆ. ಟೌನ್‌ ಪ್ಲ್ಯಾನ್‌ ಹೇಗಿರಬೇಕು ಎನ್ನುವುದು ಜನಭಿಪ್ರಾಯ ಆಧರಿಸಿರುವುದರಿಂದ ಆತಂಕ ಪಡುವ ಅಗತ್ಯವೇ ಇಲ್ಲ.
-ಶಿವಕುಮಾರ್‌
ಎಂಜಿನಿಯರ್‌, ನ.ಪಂ. ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next