Advertisement

ವಿಶೇಷ ಸಾಲಕ್ಕೆ ಮುಂದಾದ ವಾಯವ್ಯ ಸಾರಿಗೆ

05:11 PM Jun 10, 2021 | Team Udayavani |

ವರದಿ : ಹೇಮರಡ್ಡಿ ಸೈದಾಪುರ

Advertisement

ಹುಬ್ಬಳ್ಳಿ: ಲಾಕ್‌ಡೌನ್‌, ನೌಕರರ ಮುಷ್ಕರದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ವೇತನದಲ್ಲಿ ಕಡಿತಗೊಳಿಸಿದ ಶಾಸನಬದ್ಧ ಕಡಿತಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಪಾವತಿ ಮಾಡದಂತಹ ಸ್ಥಿತಿಗೆ ತಲುಪಿದ್ದು, ಈ ಬಾಕಿಗಳನ್ನು ಪಾವತಿಸಲು ವಿಶೇಷ ಸಾಲ ಪಡೆಯಲು ಮುಂದಾಗಿದೆ.

ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಸಂಸ್ಥೆ ನೌಕರರ ವೇತನ, ಶಾಸನಬದ್ಧ ಕಡಿತಗಳ ಪಾವತಿ, ಬಿಡಿ ಭಾಗಗಳ ಖರೀದಿ, ಇಂಧನಕ್ಕೆ ಕೊರತೆಯಾಗದಂತೆ ನಿರ್ವಹಣೆಯಾಗುತ್ತಿತ್ತು. ಆದರೆ ಮೊದಲ ಹಾಗೂ ಎರಡನೇ ಕೋವಿಡ್‌ ಅಲೆ, ಲಾಕ್‌ಡೌನ್‌ ತೆವಳುತ್ತಿದ್ದ ಸಂಸ್ಥೆಯನ್ನು ಹಿಡಿದು ಕಟ್ಟಿ ಹಾಕಿದಂತಾಗಿದೆ. ಸಾರಿಗೆ ಸೇವೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ವೆಚ್ಚಗಳಿಗೆ ತಡಕಾಡುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.

ಮೊದಲ ಲಾಕ್‌ಡೌನ್‌ ಪೂರ್ಣಗೊಂಡು ಇನ್ನೇನು ಸಾರಿಗೆ ಆದಾಯ ಸುಧಾರಿಸುತ್ತಿರುವ ಸಂದರ್ಭದಲ್ಲಿ ಎರಡನೇ ಅಲೆ ವ್ಯವಸ್ಥೆಯನ್ನು ಮಕಾಡೆ ಮಲಗಿಸಿದೆ. ನಿವ್ವಳ ವೇತನ ಪಾವತಿ ಮಾಡುತ್ತಿದ್ದು, ನೌಕರರ ವೇತನದಿಂದ ಕಡಿತಗೊಳಿಸಿದ ಶಾಸನಬದ್ಧ ಕಡಿತಗಳನ್ನು ಸಂಬಂಧಿಸಿದ ಇಲಾಖೆಗೆ ಪಾವತಿಸುವುದು ದುಸ್ತರವಾಗಿ ಪರಿಣಮಿಸಿದೆ.

50 ಕೋಟಿ ರೂ. ಸಾಲ: ಈಗಾಗಲೇ ನಿವೃತ್ತ ನೌಕರರ ಆರ್ಥಿಕ ಸೌಲಭ್ಯ ತೀರಿಸಲು, ವಿವಿಧ ಬಾಕಿಗಳನ್ನು ಪಾವತಿಸುವುದಕ್ಕಾಗಿ 200 ಕೋಟಿ ರೂ. ಸಾಲ ಪಡೆಯಲು ಮುಂದಾಗಿದ್ದು, ಸಾಲ ನೀಡಲು ಹಣಕಾಸು ಸಂಸ್ಥೆಗಳು ಮುಂದೆ ಬಂದಿವೆ. ಆದರೆ ಇದೀಗ ಎಲ್‌ಐಸಿ 6-7 ತಿಂಗಳ ಬಾಕಿ, ಸೊಸೈಟಿಗೆ ನೌಕರರ ಸಾಲ ಪಾವತಿ, ಪಿಂಚಣಿ ಹೀಗೆ ಸಂಬಂಧಿಸಿದ ಇಲಾಖೆಗೆ ಪ್ರತಿ ತಿಂಗಳು ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿರುವ ಕಾರಣ 50 ಕೋಟಿ ರೂ. ಕೋವಿಡ್‌ ಸಾಲ ಪಡೆಯಲು ಮುಂದಾಗಿದೆ. ಸಾಲ ಪಡೆಯಲು ಸರಕಾರಕ್ಕೆ ಅನುಮತಿ ಕೋರಿದ್ದಾರೆ.

Advertisement

ಯಾವುದು ಎಷ್ಟು ಬಾಕಿ: ನೌಕರರ ವೇತನಕ್ಕಾಗಿ ಸರಕಾರ ವಿದ್ಯಾರ್ಥಿಗಳ ಪಾಸ್‌ಗೆ ನೀಡಬೇಕಾದ ಅನುದಾನವನ್ನು ಮುಂಗಡವಾಗಿ ನೀಡುತ್ತಿರು ವುದರಿಂದ ನಿವ್ವಳ ವೇತನ ಪಾವತಿಗೆ ಸಮಸ್ಯೆ ಯಾಗಿಲ್ಲ. ಆದರೆ ಪಿಂಚಣಿ 8.12 ಕೋಟಿ ರೂ. ಎಲ್‌ಐಸಿ 17.70 ಕೋಟಿ ರೂ., ಸೊಸೈಟಿ ಸಾಲ ಮರುಪಾವತಿ 15.60 ಕೋಟಿ ರೂ. ಬಾಕಿ, ಬ್ಯಾಂಕ್‌ ಸಾಲ 14.10 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಎಷ್ಟೇ ಆರ್ಥಿಕ ಸಂಕಷ್ಟವಾದರೂ ಬ್ಯಾಂಕ್‌ ಸಾಲ, ಪಿಂಚಣಿ ಪಾವತಿ ಮಾತ್ರ ಇಲ್ಲಿಯ ವರೆಗೆ ಬಾಕಿ ಉಳಿಸಿಕೊಂಡಿರಲಿಲ್ಲ. ಆದರೆ ಮುಂದೆ ಯಾವುದೇ ಕಾನೂನು ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಇವುಗಳನ್ನು ಪಾವತಿಸುವುದಕ್ಕಾಗಿಯೇ ಸಾಲ ಮಾಡಲಾಗುತ್ತಿದೆ.

ನೌಕರರಿಗೆ ಏಪ್ರಿಲ್‌ ತಿಂಗಳಲ್ಲಿ 26 ಕೋಟಿ ರೂ. ನಿವ್ವಳ ವೇತನ ಪಾವತಿಸಬೇಕಿತ್ತು. ಸರಕಾರದಿಂದ ಬಂದಿದ್ದು, 16.60 ಕೋಟಿ ರೂ. ಹೀಗಾಗಿ ಶೇ.63 ಮಾತ್ರ ವೇತನ ನೀಡಿದ್ದು, ಇನ್ನು ಶೇ.37 ವೇತನ ಬಾಕಿ ಉಳಿದಿದೆ. ಆದರೆ ಮೇ ತಿಂಗಳಿಗೆ ಸರಕಾರ 49.81 ಕೋಟಿ ರೂ. ನೀಡಿದೆ. ಶಾಸನಬದ್ಧ ಕಡಿತಗೊಳಿಸಿ ಏಪ್ರಿಲ್‌ ತಿಂಗಳಲ್ಲಿ ಮೇ ತಿಂಗಳಲ್ಲಿ ಪೂರ್ಣ ಪ್ರಮಾಣದ ವೇತನ ನೀಡುವ ಕುರಿತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next