Advertisement

ವಾಕರಸಾಸಂ ಹುದ್ದೆ ಕಡಿತ, ವಿಲೀನ ಚಿಂತನೆ

08:53 AM Jun 05, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಭತ್ಯೆ ಸ್ಥಗಿತದೊಂದಿಗೆ ಇದೀಗ ಹಲವು ಹುದ್ದೆಗಳ ಕಡಿತ ಹಾಗೂ ವಿಲೀನಕ್ಕೆ ಚಿಂತನೆ ನಡೆಸಿದ್ದು, “ಉಪ ಮುಖ್ಯ’ ಹುದ್ದೆಗಳಿಗೆ ಕತ್ತರಿ ಪ್ರಯೋಗಕ್ಕೆ ಚಿಂತನೆ ನಡೆದಿದೆ.

Advertisement

ಕೇಂದ್ರ ಕಚೇರಿ, ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಹಲವು ಹುದ್ದೆಗಳ ಕಡಿತ ಹಾಗೂ ವಿಲೀನಕ್ಕೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಅವರು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಬರೆದಿರುವ ಪತ್ರ ಇದೀಗ ಅಧಿಕಾರಿ ವಲಯದಲ್ಲಿ ಸಂಚಲನ ಮೂಡಿಸಿದ್ದು, ಸಾಧಕ-ಬಾಧಕಗಳ ಕುರಿತ ಚರ್ಚೆ ಕಚೇರಿ ಪಡಸಾಲೆಯಲ್ಲಿ ಬಹು ಜೋರಾಗಿ ನಡೆಯುತ್ತಿದೆ.

ಖರ್ಚು ಕಡಿಮೆ ಮಾಡಲು ತಯಾರಿಸಿರುವ ವರದಿ ಎಷ್ಟು ಸೂಕ್ತ ಹಾಗೂ ಸಕಾಲವೇ ಎನ್ನುವ ಚರ್ಚೆ ಹುಟ್ಟುಹಾಕಿದ್ದು, ಹುದ್ದೆ ಕಡಿತ ಹಾಗೂ ವಿಲೀನಗೊಳಿಸಿದರೆ ಆ ಸ್ಥಾನದಲ್ಲಿರುವ ಅಧಿಕಾರಿಯನ್ನು ಇತರೆ ಸ್ಥಳ ಅಥವಾ ಇನ್ನೊಂದು ಹುದ್ದೆಗೆ ನಿಯೋಜಿಸಲೇಬೇಕು. ಇದರಿಂದ ಖರ್ಚು ಕಡಿಮೆ ಹೇಗಾಗುತ್ತದೆ ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಯಾವ ಹುದ್ದೆಗಳು ವಿಲೀನ: ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಹಾಗೂ ಆರ್‌ಟಿಐ ಪ್ರಾಚಾರ್ಯ, ಮುಖ್ಯ ತಾಂತ್ರಿಕ ಶಿಲ್ಪಿ ಹಾಗೂ ಉಗ್ರಾಣ ಹಾಗೂ ಖರೀದಿ ನಿಯಂತ್ರಕ, ಮುಖ್ಯಯೋಜನಾ ಮತ್ತು ಅಂಕಿ-ಅಂಶ ಅಧಿಕಾರಿ ಹಾಗೂ ಮುಖ್ಯ ಗಣಕ ವ್ಯವಸ್ಥಾಪಕ, ಮುಖ್ಯ ಕಾನೂನು ಅಧಿಕಾರಿ ಹಾಗೂ ಮಂಡಳಿ ಕಾರ್ಯದರ್ಶಿ, ವಿಭಾಗಗಳ ಆಡಳಿತಾಧಿಕಾರಿ ಮತ್ತು ಕಾರ್ಮಿಕ ಕಲ್ಯಾಣಾಧಿಕಾರಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಮತ್ತು ವಿಭಾಗೀಯ ಕಾರ್ಯಾಧ್ಯಕ್ಷ, ವಿಭಾಗ ಲೆಕ್ಕಾಧಿಕಾರಿ ಹಾಗೂ ಅಂಕಿ ಸಂಖ್ಯಾಧಿಕಾರಿ, ವಿಭಾಗೀಯ ಭದ್ರತಾಧಿಕಾರಿ ಹಾಗೂ ಉಗ್ರಾಣಾಧಿಕಾರಿ, ವಿಭಾಗೀಯ ಸಾರಿಗೆ ಅಧಿಕಾರಿ ಹಾಗೂ ಬಸ್‌ ನಿಲ್ದಾಣ ಎಟಿಎಂ ಅಧಿ ಕಾರಿಗಳ ಹುದ್ದೆ ವಿಲೀನ ಮಾಡಬೇಕು.

ಯಾವ ಹುದ್ದೆಗಳು ಕಡಿತ?: ಪ್ರಾದೇಶಿಕ ಪ್ರಾಚಾರ್ಯ ಹುದ್ದೆ, ಉಪ ಕಾನೂನು ಅಧಿಕಾರಿ, ಉಪ ಸಂಚಾರ ವ್ಯವಸ್ಥಾಪಕ, ಉಪ ಸಿಬ್ಬಂದಿ ವ್ಯವಸ್ಥಾಪಕ, ಉಪ ಮುಖ್ಯ ಲೆಕ್ಕಾಧಿಕಾರಿ, ಉಪ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ಹುಬ್ಬಳ್ಳಿ ನಗರ ಹಾಗೂ ಗ್ರಾಮಾಂತರ ವಿಭಾಗದ ಭದ್ರತಾ ಮತ್ತು ಜಾಗೃತಾಧಿಕಾರಿ ಹುದ್ದೆಗಳನ್ನು ಕಡಿತಗೊಳಿಸಬೇಕು. ಕೆಲ ಅಧಿಕಾರಿಗಳನ್ನು ಹಿರಿಯ ಘಟಕ ವ್ಯವಸ್ಥಾಪಕ ಹುದ್ದೆಗೆ ನಿಯೋಜಿಸಬೇಕು ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

Advertisement

ವಿಶೇಷ ನಿವೃತ್ತಿ ಯೋಜನೆ: ಸಂಸ್ಥೆಯ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ 55 ವರ್ಷ ಮೇಲ್ಪಟ್ಟವರಿಗಾಗಿ ಸ್ವಯಂ ನಿವೃತ್ತಿ ವಿಶೇಷ ಯೋಜನೆ ಬಗ್ಗೆ ಗಮನ ಸೆಳೆದಿದ್ದಾರೆ. ಇದಕ್ಕೆ ತಗಲುವ ವೆಚ್ಚ ಸರಕಾರದಿಂದ ನೀಡಬೇಕು ಎಂದು ತಿಳಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿವೃತ್ತಿ ಪಡೆದರೆ ಅವರಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ಸಂಸ್ಥೆಗಿಲ್ಲ. 2018ರಲ್ಲಿ ನಿವೃತ್ತಿಯಾದ ಸಿಬ್ಬಂದಿಗೇ ಇನ್ನೂ ಸೌಲಭ್ಯಗಳು ಮುಟ್ಟಿಲ್ಲ. ಹೀಗಾಗಿ ಇಂತಹಸಮಯದಲ್ಲಿ ಸ್ವಯಂ ನಿವೃತ್ತಿ ಪಡೆದರೆ ಆರ್ಥಿಕ ಸೌಲಭ್ಯ ದೊರೆಯಲಿದೆ ಎನ್ನುವ ಖಾತ್ರಿ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿಲ್ಲ. ಅಧ್ಯಕ್ಷರ ವರದಿಯಿಂದ ಸದ್ಯಕ್ಕೆ ಅಲ್ಲದಿದ್ದರೂ ಮುಂಬರುವ ದಿನಗಳಲ್ಲಿ ಸಂಸ್ಥೆಗೆ ಒಂದಿಷ್ಟು ಆರ್ಥಿಕ ಭಾರ ಕಡಿಮೆಯಾಗಲಿದೆ. ಕಾರ್ಮಿಕ ಹಾಗೂ ಆಡಳಿತ ಮಂಡಳಿ ನಡುವಿನ ಸಂಪರ್ಕಸೇತುವೆಯ ಹುದ್ದೆಗಳನ್ನು ವಿಲೀನಗೊಳಿಸುವುದರಿಂದ ಕಾರ್ಮಿಕರ ಹಿತ ಕಾಪಾಡುವುದಾದರು ಹೇಗೆ ಎನ್ನುವಂತಹ ಗೊಂದಲಗಳು ಉದ್ಭವವಾಗಲಿವೆ.

ಕಾರ್ಯವೈಖರಿ ಮೇಲೆ ಪರಿಣಾಮ : ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಕೆಲ ಇಲಾಖೆಗಳಲ್ಲಿ ಓರ್ವ ಅಧಿಕಾರಿ ಎರಡು ಹೆಚ್ಚುವರಿ ಕಾರ್ಯಾಭಾರ ವಹಿಸಿದ್ದಾರೆ. ಆತುರದ ನಿರ್ಧಾರ ಸಂಸ್ಥೆಯ ಕಾರ್ಯವೈಖರಿ ಮೇಲೆ ಪರಿಣಾಮ ಬೀರಬಾರದು. ಅಧಿಕಾರಿಗಳ ಪ್ರಮಾಣ ಕಡಿಮೆ ಮಾಡಿದರೆ ಅದಕ್ಕನುಗುಣವಾಗಿ ಸಿಬ್ಬಂದಿ ಪ್ರಮಾಣವೂ ಇಳಿಸಬೇಕಾಗುತ್ತದೆ. ಇಂತಹ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸಾಧಕ-ಬಾಧಕ ಪರಿಶೀಲಿಸುವುದು ಸೂಕ್ತ ಎನ್ನುವುದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸಂಸ್ಥೆಯ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೆಲ ಹುದ್ದೆಗಳ ಕಡಿತ ಹಾಗೂ ವಿಲೀನಕ್ಕೆ ವರದಿ ನೀಡಿದ್ದೇನೆ. ಇದರಿಂದ ಮುಂದಿನ ದಿನಗಳಲ್ಲಿ ಸಂಸ್ಥೆಗೆ ಅನುಕೂಲವಾಗಲಿದೆ. ಇದರೊಂದಿಗೆ ಸ್ವಯಂ ನಿವೃತ್ತಿ ಯೋಜನೆಗೂ ಒತ್ತು ನೀಡಿ ಅದಕ್ಕೆ ತಗಲುವ ಆರ್ಥಿಕ ನೆರವನ್ನು ಸರಕಾರ ನೀಡಬೇಕು ಎಂದು ಕೇಳಿದ್ದೇನೆ. ವಿ.ಎಸ್‌. ಪಾಟೀಲ, ಅಧ್ಯಕ್ಷ ವಾಕರಸಾ ಸಂಸ್ಥೆ

ನಾಲ್ಕು ನಿಗಮಗಳಲ್ಲಿರುವ 1.30 ಲಕ್ಷ ಸಿಬ್ಬಂದಿಗೆ ಇರುವುದು ಕೇವಲ 700 ಅಧಿಕಾರಿಗಳು. ಇರುವ ಹುದ್ದೆಗಳನ್ನು ವಿಲೀನ, ಕಡಿತ ಮಾಡುವುದರಿಂದ ನಿತ್ಯದ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಂಸ್ಥೆ ಅಧ್ಯಕ್ಷರು ಪೂರ್ವಾಪರ ಚರ್ಚಿಸಿ ನಿರ್ಧಾರ ಕೈಗೊಳ್ಳ  ಬೇಕು. ಇದರಿಂದಾಗುವ ಪರಿಣಾಮದ ಕುರಿತು ಸಾರಿಗೆ ಮಂತ್ರಿಗಳಿಗೆ ವಿಸ್ತ್ರತ ವರದಿ ಸಲ್ಲಿಸುತ್ತೇವೆ. ಡಾ| ಎಂ.ಪಿ. ನಾಡಗೌಡ, ಗೌರವಾಧ್ಯಕ್ಷ, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next