ರಬಕವಿ-ಬನಹಟ್ಟಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಮಲತಾಯಿ ಧೋರಣೆಯನ್ನು ತೋರುತ್ತಿವೆ. ೨೦೧೬ರಲ್ಲಿ ಬಾಗಲಕೋಟೆ ಕುಡಚಿ ರೈಲು ಮಾರ್ಗ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ಇದುವರೆಗೆ ಕಾಮಗಾರಿ ಖಜ್ಜಿಡೋಣಿಯವರಿಗೆ ಮಾತ್ರ ಬಂದು ನಿಂತಿದೆ. ಸರ್ಕಾರ ಬಾಗಲಕೋಟೆ ಕುಡಚಿ ರೈಲು ಮಾರ್ಗದ ಕುರಿತು ಶೀಘ್ರವಾಗಿ ನಿರ್ಣಯ ಕೈಗೊಳ್ಳದಿದ್ದರೆ ಉತ್ತರ ಕರ್ನಾಟಕದ ಪ್ರತ್ಯೇಕ ಕೂಗು ಮತ್ತೆ ಏಳುತ್ತದೆ ಎಂದು ಕರ್ನಾಟಕ ರಾಜ್ಯ ರೈಲು ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ ಖಾಜಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಅವರು ರಬಕವಿಯ ಶಂಕರಲಿಂಗ ದೇವಸ್ಥಾನದ ಮುಂಭಾಗದಲ್ಲಿ ಬಾಗಲಕೋಟೆ ಕುಡಚಿ ರೈಲು ಮಾರ್ಗದ ಕುರಿತು ಹಮ್ಮಿಕೊಳ್ಳಲಾದ ಪತ್ರ ಚಳುವಳಿಯಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕದ ಪ್ರತ್ಯೇಕ ಕೂಗನ್ನು ದಮನ ಮಾಡಬೇಕಾದರೆ ಆದಷ್ಟು ಬೇಗನೆ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆದಿದೆ. ಈ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರೇಲ್ವೆ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಅವರಿಂದ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಅದೇ ರೀತಿಯಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಹಾಗೂ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದರು.
ಮುಧೋಳ, ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಶೇ. 95 ರಷ್ಟು ಭೂಸ್ವಾಧೀನ ಈಗಾಗಲೇ ಮುಕ್ತಾಯಗೊಂಡಿದೆ. ಬೇಗನೆ ಕಾಮಗಾರಿಯನ್ನು ಪೂರ್ಣಗೊಳಿಸುವುದರಿಂದ ಈ ಭಾಗದ ಅಭಿವೃದ್ಧಿ ಸಾಧ್ಯ. ಜಿಲ್ಲೆಯ ಸಂಸದರ, ಜಿಲ್ಲಾ ಉಸ್ತುವಾರಿ ಸಚಿವರ, ಶಾಸಕರ ಹಾಗೂ ಇನ್ನೀತರ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರೈಲು ಮಾರ್ಗ ವಿಳಂಬಗೊಂಡಿದೆ ಎಂದರು.
ಬೆಳಗಾವಿ ಅಧಿವೇಶನ ಮುಕ್ತಾಯಗೊಳ್ಳುವುದರೊಳಗಾಗಿ ಬಾಗಲಕೋಟೆ ಕುಡಚಿ ರೈಲು ಮಾರ್ಗದ ಕುರಿತು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಲೋಕಾಪುರದಲ್ಲಿ ಬಾಗಲಕೋಟೆ ಜಿಲ್ಲೆಯ ಜನರು ಕೂಡಿಕೊಂಡು ಬೆಳಗಾವಿ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು. ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿಯಾಗಲಿದೆ ಎಂದರು.
ಈಗಾಗಲೇ ಲೋಕಾಪುರ, ಮುಧೋಳ, ಮಹಾಲಿಂಗಪುರದಲ್ಲಿ ಮತ್ತು ರಬಕವಿ ಬನಹಟ್ಟಿಯಲ್ಲಿ ಪತ್ರ ಚಳುವಳಿಯನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜಮಖಂಡಿಯಲ್ಲೂ ಕೂಡಾ ಪತ್ರ ಚಳುವಳಿಯನ್ನು ಕೈಗೊಳ್ಳಲಾಗುವುದು ಎಂದು ಕುತುಬುದ್ದೀನ ಖಾಜಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ರವಿ ಜಮಖಂಡಿ, ರಾಮಣ್ಣ ಹುಲಕುಂದ, ಗಂಗಾಧರ ಉಕ್ಕಲಿ, ಸಂಜು ತೇಲಿ, ಆನಂದ ಜುಗಳಿ, ಬಸವರಾಜ ತೆಗ್ಗಿ, ರವಿ ಗಡಾದ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಚಿಂಡಕ, ಸಂಜಯ ಅಮ್ಮಣಗಿಮಠ, ಶೇಖರ ಕೊಟ್ಟರಶೆಟ್ಟಿ, ಡಾ.ಜಿ.ಎಚ್.ಚಿತ್ತರಗಿ, ಸಂಜಯ ತೆಗ್ಗಿ, ಚಿದಾನಂದ ಸೊಲ್ಲಾಪುರ ಸೇರಿದಂತೆ ಅನೇಕರು ಇದ್ದರು.