Advertisement

ಮಕ್ಕಳಿಗೆ ಸಮವಸ್ತ್ರ ನೀಡದ ಪಾಲಿಕೆ

12:12 PM Jul 09, 2018 | |

ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಡವಿರುವ ಬೆನ್ನಲ್ಲೇ ಇತ್ತ ಬಿಬಿಎಂಪಿ ಕೂಡ ಪಾಲಿಕೆ ಶಾಲೆ ಮಕ್ಕಳಿಗೆ ಸಮವಸ್ತ್ರ ಮತ್ತಿತರ ಶೈಕ್ಷಣಿಕ ಪರಿಕರ ವಿತರಿಸಲು ವಿಳಂಬ ಮಾಡುತ್ತಿದೆ.

Advertisement

ಮೇ ಕೊನೆ ವಾರದಿಂದಲೇ ಪ್ರಸಕ್ತ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಆರಂಭವಾಗಿದ್ದು, ಇದಕ್ಕೂ ಮೊದಲೇ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿವೆ. ಆದರೆ, ಇದುವರೆಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಕ್ಕಿಲ್ಲ. ಅಷ್ಟೇ ಅಲ್ಲ, ಸದ್ಯಕ್ಕೆ ಸಮವಸ್ತ್ರ ಸಿಗುವ ಲಕ್ಷಣವೂ ಕಾಣಿಸುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ 90 ನರ್ಸರಿ, 15 ಪ್ರಾಥಮಿಕ ಶಾಲೆ, 32 ಪ್ರೌಢಶಾಲೆ ಹಾಗೂ 14 ಪದವಿ ಪೂರ್ವ ಕಾಲೇಜು ಹಾಗೂ ಆರೇಳು ಪದವಿ ಕಾಲೇಜುಗಳಿದ್ದು, ಸುಮಾರು 22 ಸಾವಿರ ವಿದ್ಯಾರ್ಥಿಗಳಿದ್ದಾರೆ.  ಇವರೆಲ್ಲರಿಗೂ ಬಿಬಿಎಂಪಿಯೇ ಸಮವಸ್ತ್ರ, ಶೂ-ಸಾಕ್ಸ್‌ ವಿತರಿಸುತ್ತದೆ.

ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ 2.45 ಕೋಟಿ ರೂ., ಶೂ-ಸಾಕ್ಸ್‌ಗೆ 2 ಕೋಟಿ ಹಾಗೂ ಪಠ್ಯಪುಸ್ತಕ, ಬ್ಯಾಗ್‌ ಮತ್ತು ಇತರೆ ಸಾಮಗ್ರಿಗಳ ವಿತರಣೆಗೆ ಸುಮಾರು 3 ಕೋಟಿ ರೂ. ಮೀಸಲಿಟ್ಟಿದೆ.

ಕಾರ್ಯಾದೇಶ ನೀಡಲು ವಿಳಂಬ: ಸಮವಸ್ತ್ರದ ಟೆಂಡರ್‌ ಪಡೆದಿರುವ ಸಂಸ್ಥೆಗೆ ಪಾಲಿಕೆಯಿಂದ ಇತ್ತೀಚೆಗಷ್ಟೇ ಕಾರ್ಯಾದೇಶ ನೀಡಿರುವ ಕಾರಣ ಸಮವಸ್ತ್ರ ವಿತರಣೆ ಮಾಡಿಲ್ಲ. ಮೂರು ದಿನಗಳಿಂದ ಕೆಲ ಶಾಲೆಗಳಲ್ಲಿ ಅಳತೆ ಪಡೆಯುವ ಕಾರ್ಯ ಆರಂಭವಾಗಿದೆ. ಬಿಬಿಎಂಪಿ ಪ್ರತಿ ವರ್ಷ ಮಕ್ಕಳಿಗೆ ಸಮವಸ್ತ್ರ ವಿತರಿಸುವಾಗ ಶೈಕ್ಷಣಿಕ ವರ್ಷ ಅರ್ಧ ಕಳೆದಿರುತ್ತದೆ.

Advertisement

2017-18ನೇ ಸಾಲಿನ ಸಮವಸ್ತ್ರಗಳನ್ನು ಶೈಕ್ಷಣಿಕ ವರ್ಷದ ಕೊನೆಯಲ್ಲಿ ನೀಡಿದ್ದು, ಬಹುತೇಕ ವಿದ್ಯಾರ್ಥಿಗಳು ಅದೇ ಸಮವಸ್ತ್ರ ಹಾಕಿಕೊಂಡು ಬರುತ್ತಿದ್ದಾರೆ. ಈ ವರ್ಷವೂ ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಸಮವಸ್ತ್ರ ಏಕೆ ಹಾಕಿಕೊಂಡು ಬಂದಿಲ್ಲ ಎಂದು ಕೇಳಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುತ್ತಾರೆ ಶಿಕ್ಷಕರು.

ಇನ್ನೂ ಸಕ್ಕಿಲ್ಲ ಪಿಯು ಪಠ್ಯಪುಸ್ತಕ: ಬಿಬಿಎಂಪಿ ಶಾಲೆಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರವೇ ಪುಸ್ತಕ ವಿತರಿಸುತ್ತದೆ. ಈಗಾಗಲೇ ಬಿಇಒಗಳ ಮೂಲಕ ಬಹುತೇಕ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ಆದರೆ, ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಸಿಕ್ಕಿಲ್ಲ.

ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಒದಗಿಸುವ ಹೊಣೆ ಹೊತ್ತಿರುವ ಬಿಬಿಎಂಪಿ, ಅರ್ಥಶಾಸ್ತ್ರ ಹಾಗೂ ಇತರ ವಿಷಯದ ಪುಸ್ತಕಗಳನ್ನು ಇನ್ನೂ ವಿತರಿಸಿಲ್ಲ. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ನೀಡುವ ಕಾರ್ಯವನ್ನೂ ಬಿಬಿಎಂಪಿ ಸಮರ್ಪಕವಾಗಿ ಮಾಡಿಲ್ಲ.

ಈ ಶಾಲೆಗಳಲ್ಲಿ ಬಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಹೆಚ್ಚಿರುವ ಕಾರಣ, ಪಾಲಿಕೆ ನೀಡುವ ಸೌಲಭ್ಯಗಳನ್ನೇ ಅವಲಂಬಿಸಿರುತ್ತಾರೆ. ಸೌಲಭ್ಯ ನೀಡಿದರೆ ಮಾತ್ರ ಶೈಕ್ಷಣಿಕ ಸುಧಾರಣೆ ಸಾಧ್ಯ ಎಂದು ಎಸ್‌ಡಿಎಂಸಿ ಸದಸ್ಯರೊಬ್ಬರು ಹೇಳುತ್ತಾರೆ.

ಶೂ, ಸಾಕ್ಸ್‌, ಬ್ಯಾಗ್‌ ಕೂಡ ಇಲ್ಲ: ಖಾಸಗಿ ಹಾಗೂ ಸರ್ಕಾರಿ ಶಾಲೆ ಮಕ್ಕಳು ಸಮವಸ್ತ್ರದ ಜತೆಗೆ ಶೂ, ಸಾಕ್ಸ್‌ ಹಾಕಿಕೊಂಡೇ ಮನೆಯಿಂದ ಶಾಲೆಗೆ ಹೊರಡುತ್ತಾರೆ. ಆದರೆ, ಬಿಬಿಎಂಪಿ ಶಾಲಾ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್‌ ಸಿಕ್ಕಿಲ್ಲ. ಬಹುತೇಕ ವಿದ್ಯಾರ್ಥಿಗಳು ಹಳೇ ಶೂ, ಸಾಕ್ಸ್‌ ಹಾಕಿಕೊಂಡರೆ, ಕೆಲವರು ಚಪ್ಪಲಿ ಹಾಕಿಕೊಂಡೇ ಶಾಲೆಗೆ ಹೋಗುತ್ತಿದ್ದಾರೆ.

ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದಾಗಿ ಹೇಳುವ ಬಿಬಿಎಂಪಿ ವಿದ್ಯಾರ್ಥಿಗಳಿಗೆ ಬೇಕಾದ ಯಾವ ಸೌಲಭ್ಯವನ್ನೂ ನಿಗದಿತ ಸಮಯಕ್ಕೆ ನೀಡುತ್ತಿಲ್ಲ. ಪುಸ್ತಕ ಕೊಂಡೊಯ್ಯಲು ಅಗತ್ಯವಿರುವ ಬ್ಯಾಗ್‌ಗಳೂ ಮಕ್ಕಳ ಕೈಸೇರಿಲ್ಲ.

ಪ್ರಸಕ್ತ ಸಾಲಿನ ಸಮವಸ್ತ್ರ ವಿತರಣೆ ಟೆಂಡರ್‌ ಆಗಿದ್ದು, ಅಳತೆ ತೆಗೆದುಕೊಳ್ಳುತ್ತಿದ್ದಾರೆ. ಹದಿನೈದು ದಿನದೊಳಗೆ ವಿತರಿಸಲಾಗುತ್ತದೆ. ಪಠ್ಯಪುಸ್ತಕ ವಿತರಣೆ ಬಹುತೇಕ ಪೂರ್ಣಗೊಂಡಿದೆ. ಶೂ, ಸಾಕ್ಸ್‌ ಮತ್ತು ಬ್ಯಾಗ್‌ ಆದಷ್ಟು ಬೇಗ ನೀಡುತ್ತೇವೆ.
-ಶಿವಣ್ಣ, ಬಿಬಿಎಂಪಿ ಶಿಕ್ಷಣಾಧಿಕಾರಿ

ಸಮವಸ್ತ್ರ ವಿತರಣೆ ಸಂಬಂಧ ಗುತ್ತಿಗೆದಾರರಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಜು.9ರಿಂದ ಸಮವಸ್ತ್ರ, ಶೂ, ಸಾಕ್ಸ್‌ ಸೇರಿದಂತೆ ಎಲ್ಲ ಪರಿಕರ ಹಂಚಿಕೆ ಆರಂಭವಾಗಲಿದೆ. ಜುಲೈ 15ರೊಳಗೆ ಎಲ್ಲವೂ ವಿದ್ಯಾರ್ಥಿಗಳ ಕೈ ಸೇರಲಿವೆ.
-ಗಂಗಮ್ಮ, ಬಿಬಿಎಂಪಿ ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷೆ

* ರಾಜು ಖಾರ್ವಿ ಕೊಡೇರಿ/ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next