Advertisement

Mother: ಅಮ್ಮ ನೀ ಕೊಟ್ಟ ಜೀವವಿದು

03:46 PM Sep 01, 2024 | Team Udayavani |

ಜಗತ್ತಿನ ಪ್ರತಿಯೊಂದು ಜೀವರಾಶಿಯಲ್ಲಿಯೂ ಅಮ್ಮ ಎಂಬ ತುಡಿತವಿದೆ. ಅಮ್ಮ ಎಂಬ ಶಬ್ದವೇ ಬಹಳ ಪವಿತ್ರವಾದುದು. ತನಗಾಗಿ ಏನನ್ನೂ ಬಯಸದೆ, ತನ್ನ ಮಕ್ಕಳ ಖುಷಿಯಲ್ಲೇ ಸಂತೋಷವನ್ನು ಕಂಡವಳು ಆಕೆ. ಅಮ್ಮನ ತ್ಯಾಗದ ಋಣವನ್ನು ಎಂದೆಂದಿಗೂ ನಾವು ತೀರಿಸಲು ಸಾಧ್ಯವೇ ಇಲ್ಲ.

Advertisement

ತನ್ನ ಗರ್ಭದೊಳಗಿರುವ ಮಗುವಿನ ಸ್ಪರ್ಶಕ್ಕಾಗಿ, ಧ್ವನಿ ಕೇಳುವುದಕ್ಕಾಗಿ ಹಂಬಳದಿಂದ ತನಗೆ ಎಷ್ಟೇ ನೋವಾದರೂ ಮಗುವಿನ ಬರುವಿಕೆಯ ನಿರೀಕ್ಷೆಯಲ್ಲಿದ್ದವಳು ಆಕೆ. ಮಗು ಜನಿಸುವಾಗ ಅವಳ ದೇಹದ ಅಷ್ಟೂ ಮೂಳೆಗಳು ಒಂದೇ ಬಾರಿ ಮುರಿದ ರೀತಿ ನೋವು ಅನುಭವಿಸಿದಳು. ತನ್ನ ಮಗುವಿನ ಮುಖವನ್ನು ನೋಡಲು ಎಲ್ಲ ನೋವನ್ನು ಸಹಿಸಿಕೊಂಡವಳು ಆಕೆ. ಇದೇ ಕಾರಣಕ್ಕೆ ಹೇಳುವುದು ತಾಯಿ ತ್ಯಾಗಮಯಿ ಎಂದು.

ತನ್ನ ಮಗು ಈ ಭೂಮಿಗೆ ಕಾಲಿಟ್ಟಾಗ ಆಕೆಯ ಕಣ್ಣಿನಿಂದ ಆನಂದ ಭಾಷ್ಮ ಹರಿಯುತ್ತದೆ. ಅದೇ ತಾನೇ ತಾಯಿ ಮಗುವಿನ ಸಂಬಂಧ. ಆ ಸಂದರ್ಭ ಅವಳಿಗೆ ಅರ್ಥವಾಗುತ್ತದೆ ತನ್ನ ಅಮ್ಮ ಕೂಡ ನನ್ನನ್ನು ಹೀಗೆ ಹುಟ್ಟಿಸಿದ್ದು ಎಂದು. ಅವಳು ಎಷ್ಟು ಕಷ್ಟಪಟ್ಟು ನನ್ನನ್ನು ಈ ಭೂಮಿಗೆ ಬರಮಾಡಿದಳೆಂದು. ಅಮ್ಮ ಎಂಬುದು ಕೇವಲ ಪದವಲ್ಲ ಅದೊಂದು ಶಕ್ತಿ. ಆದರೆ ಮಕ್ಕಳು ಬೆಳೆದು ದೊಡ್ಡವರಾದಂತೆ ಅಮ್ಮನನ್ನು ತಾತ್ಸಾರವಾಗಿ ಕಾಣಲು ಶುರುಮಾಡುತ್ತಾರೆ. ಅಮ್ಮ ಎಂದರೆ ಅಸಹ್ಯ, ನಾಚಿಕೆಯ ಸಂಗತಿಯಾಗುತ್ತದೆ. ಅಮ್ಮನೊಂದಿಗೆ ಮಕ್ಕಳು ಹೊರಗಡೆ ಹೋಗುವುದಿಲ್ಲ. ಯಾರಿಗೂ ತನ್ನಮ್ಮನನ್ನು ಪರಿಚಯಿಸುವುದಿಲ್ಲ. ಆದರೆ ಒಂದು ಮಾತನ್ನು ತಿಳಿದುಕೊ ನಿನಗೆ  ಜೀವ  ಕೊಟ್ಟವಳು ಅದೇ ಅಮ್ಮ, ನಿನಗೆ ಬದುಕು ಕೊಟ್ಟವಳು ಅದೇ ಅಮ್ಮ, ನಿನಗೆ ಹೊಟ್ಟೆಗೆ ಊಟವಿಲ್ಲದಾಗ ನಾಲ್ಕೈದು ಮನೆಯಲ್ಲಿ ಕೆಲಸ ಮಾಡಿ ನಿನ್ನ ಹೊಟ್ಟೆ ತುಂಬಿಸಿದವಳು ಅದೇ ಅಮ್ಮ. ಕಾರಣ ಇಷ್ಟೇ. ತಾನು ಅವಿಧ್ಯಾವಂತಳಾದರು ತನ್ನ ಮಕ್ಕಳು ವಿಧ್ಯಾವಂತರಾಗಬೇಕು, ತಾನು ಕಷ್ಟ ಪಟ್ಟ ಹಾಗೆ ತನ್ನ ಮಕ್ಕಳು ಕಷ್ಟಪಡಬಾರದೆಂಬ ಆಶಯವಷ್ಟೆ.

ಅಮ್ಮನನ್ನು ಯಾವತ್ತೂ ಕಡೆಗಣಿಸಬೇಡಿ. ಅಮ್ಮನನ್ನು ಬೇರೆಯವರಿಗೆ ಪರಿಚಯಿಸಲು ನಾಚಿಕೆ ಪಡಬೇಡಿ. ಪ್ರತಿಯೊಬ್ಬರ ಬೆಳವಣಿಗೆಗೆ ಅಮ್ಮ ಎಂಬ ಶಕ್ತಿಯೇ ಕಾರಣ. ಇದ್ದಷ್ಟು ದಿನ ಅವಳನ್ನು ಖುಷಿಯಾಗಿರಿಸಿ. ಯಾರಿಗೆ ಗೊತ್ತು? ಮುಂದೊಂದು ದಿನ ನಿನ್ನನ್ನು ಬಿಟ್ಟು ದೂರದ ಲೋಕಕ್ಕೆ ಹೋಗಬಹುದು. ಹೋದಾಗ ಕೊರಗುವುದಕ್ಕಿಂತ ಇದ್ದಾಗ ನೆಮ್ಮದಿಯಿಂದ ಅವಳನ್ನು ನೋಡಿಕೊಳ್ಳುವುದೇ ಅವಳಿಗೆ ನಾವು ಕೊಡುವ ದೊಡ್ಡ ಉಡುಗೊರೆ.

ಬೇರೆಯವರು ಬರೀ ನಿನ್ನ ಸುಖದ ಸಮಯದಲ್ಲಿ ನಿನ್ನೊಂದಿಗಿರುವರು. ಕಷ್ಟದ ಸಮಯದಲ್ಲಿ ನಿನ್ನನ್ನು ತೊರೆದು ತೆಗಳುವವರೇ ಹೆಚ್ಚು. ಆದರೆ ಅಮ್ಮ ಎಲ್ಲ ಸಂದರ್ಭದಲ್ಲೂ ನಿನ್ನ ಜತೆಗೆ ನಿಲ್ಲುತ್ತಾಳೆ. ಆದ್ದರಿಂದ ಅಮ್ಮನನ್ನು ದ್ವೇಷಿಸಬೇಡಿ ಪ್ರೀತಿಸಿ. ಅಮ್ಮನನ್ನು ಗೌರವಿಸಿ, ಪೂಜಿಸಿ. ನಿಮ್ಮ ಪ್ರತಿಯೊಂದು ಸಾಧನೆಗೆ ಕಾರಣ ಅಮ್ಮನೇ ಎಂದು ನಂಬಿ. ಅಮ್ಮನನ್ನು ನಂಬಿದವರು ಯಾರು ಕೂಡ ಜೀವನದಲ್ಲಿ ಸೋತಿಲ್ಲ. ನಮ್ಮ ಹೃದಯದ ಪ್ರತಿಯೊಂದು ಬಡಿತವು ಅಮ್ಮ ನೀಡದ ಭಿಕ್ಷೆ ಎಂದರೆ ತಪ್ಪಿಲ್ಲ.

Advertisement

n  ಮೌಲ್ಯ ಶೆಟ್ಟಿ

ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.