ಆಳಂದ: ಆಹಾರ ಇಲಾಖೆ ಮೂಲಕ ತಾಲೂಕಿನ ರೇಷನ್ ಅಂಗಡಿಗಳಿಗೆ ನೀಡುವ ರೇಷನ್ ಸೋರಿಕೆ ತಡೆದು ಪೂರ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ರೇಷನ್ ಅಂಗಡಿ, ಗೋದಾಮಿಗೆ ಶಾಸಕ ಸುಭಾಷ ಗುತ್ತೇದಾರ ಭೇಟಿ ನೀಡಿ ಪರಿಶೀಲಿಸಿದರು.
ಬೆಣ್ಣೆಶಿರೂರ ಗ್ರಾಮದಲ್ಲಿನ ರೇಷನ್ ಅಂಗಡಿಗೆ ಹಠಾತ್ ಭೇಟಿ ನೀಡಿದ ಬಳಿಕ ಮಾತನಾಡಿದ ಗುತ್ತೇದಾರ, ಗೋದಾಮಿನಿಂದಲೇ ಅಂಗಡಿಗಳಿಗೆ ಪೂರೈಕೆಯಾಗುವ ಆಹಾರಧಾನ್ಯ ಕಡಿತವಾಗಬಾರದು.
ಪಡೆದ ಆಹಾರವನ್ನು ಅಂಗಡಿಯವರು ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಒದಗಿಸಬೇಕು. ಹೆಚ್ಚಿನ ಹಣ ಪಡೆಯಬಾರದು, ಮುಂಗಡವಾಗಿಯೇ ಬಯೋ ಮೆಟ್ರಿಕ್ ಪಡೆದು ಕೆಲವೆಡೆ ಗ್ರಾಹಕರನ್ನು ವಂಚಿಸಲಾಗುತ್ತಿದೆ. ಇದು ಸಂಪೂರ್ಣ ನಿಲ್ಲುವ ವರೆಗೆ ಭೇಟಿ ನಿಲ್ಲಿಸಲಾಗದು ಎಂದು ಹೇಳಿದರು.
ಇದೇ ವೇಳೆ ಗ್ರಾಮದ ಅಂಗಡಿಗೆ ಆಗಮಿಸಿದ್ದ ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕ ರಾಮೇಶ್ವರಪ್ಪ ಅವರಿಗೆ ಶಾಸಕರು ಇಂಥ ಪ್ರಕರಣ ಮರುಕಳಿಸಬಾರದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಈ ವೇಳೆ ಅಂಗಡಿ ಮಾಲೀಕನ ಪರ ಸಹಾಯಕರು ಇದ್ದರು. ಹೀಗಾಗಿ ಯಾವುದೇ ಸ್ಪಷ್ಟನೆ ನೀಡಲು ಸಾಧ್ಯವಾಗಲಿಲ್ಲ.
ಗ್ರಾಮದ ಬಿಜೆಪಿ ಕಾರ್ಯಕರ್ತರು, ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಗೌಳಿ ಹಾಗೂ ನಿಂಬರಗಾ ಪಿಎಸ್‌ಐ, ಸಿಬ್ಬಂದಿಗಳಿದ್ದರು.