Advertisement

ಕಾರ್ಯಾರಂಭಿಸದ ಜಿಪಂ ಕಚೇರಿ

07:25 AM Jan 29, 2019 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಆಡಳಿತ ಕಚೇರಿ ಜಿಲ್ಲಾ ಸಂಕೀರ್ಣಕ್ಕೆ ಸ್ಥಳಾಂತರಗೊಂಡು 10 ದಿನ ಕಳೆದಿದೆ. ಆದರೆ, ಇನ್ನೂ ಕಾರ್ಯಾರಂಭ ಮಾಡಿಲ್ಲ. ಇದರಿಂದ ಸಮಸ್ಯೆಗಳನ್ನು ಹೊತ್ತು ಬರುವ ಜನ, ಜನಪ್ರತಿನಿಧಿಗಳು ಪರದಾಡುವಂತಾಗಿದೆ.

Advertisement

ಜಿಲ್ಲೆಯಲ್ಲಿ ತೀವ್ರ ಬರ ಇರುವ ಕಾರಣ, ಮೇವು, ಕುಡಿಯುವ ನೀರು, ಮುಂತಾದ ಸಮಸ್ಯೆಗಳನ್ನು ಹೊತ್ತು ಜಿಪಂ ಕಚೇರಿಗೆ ಬರುತ್ತಾರೆ. ಆದರೆ, ಇಲ್ಲಿ ಅಧಿಕಾರಿಗಳು ತಮ್ಮ ಕಾರ್ಯ ಆರಂಭಿಸದ ಕಾರಣ ದೂರದ ನೆಲಮಂಗಲ, ಹೊಸಕೋಟೆ ತಾಲೂಕಿನಿಂದ ಬರುವ ಜನರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ಸಾಗುತ್ತಿದ್ದಾರೆ. 

ಕೊಠಡಿಗಳ ವಿನ್ಯಾಸ ಬಾಕಿ: ಪೂಜೆಯೊಂದಿಗೆ ಜ.16ರಂದು ಜಿಲ್ಲಾ ಸಂಕೀರ್ಣಕ್ಕೆ ಜಿಪಂ ಕಚೇರಿ ಸ್ಥಳಾಂತರಗೊಂಡಿದೆ. ಆದರೆ, ಸಭಾಂಗಣ, ಅಧ್ಯಕ್ಷ ಕೊಠಡಿ, ಮುಂತಾದ ಸಣ್ಣಪುಟ್ಟ ಒಳ ವಿನ್ಯಾಸ ಕಾಮಗಾರಿಗಳು ನಡೆಯುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಕಾರ್ಯ ಆರಂಭಿಸಲು ತೊಂದರೆಯಾಗಿದೆ. ಇನ್ನೂ ಕಚೇರಿ ಸಿಬ್ಬಂದಿ ಹಾಗೂ ಸಮಸ್ಯೆ ಹೊತ್ತು ಬರುವ ಜನರಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಬೇಕಿದೆ. 

ಘಟಕವಿದ್ರೂ ನೀರಿಲ್ಲ: ದಿನನಿತ್ಯ ಕಚೇರಿ ಕೆಲಸಕ್ಕೆ ಅಧಿಕಾರಿಗಳು, ಸಿಬ್ಬಂದಿ ಬರುತ್ತಾರೆ, ಜಿಲ್ಲೆಯ ನಾಲ್ಕು ತಾಲೂಕಿನ ಜನರು ಬರುವುದರಿಂದ ಕುಡಿಯುವ ನೀರು, ಶೌಚಾಲಯ ಬಳಕೆಗೆ ನೀರಿಲ್ಲದೆ, ಪರದಾಡುವಂತಾಗಿದೆ. ಎಲ್ಲಾ ಕಚೇರಿಗಳೂ ಅನುಕೂಲವಾಗಲಿ ಎಂದು ಸಾರ್ವಜನಿಕವಾಗಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅದರಲ್ಲಿ ನೀರು ಬರುತ್ತಿಲ್ಲ. ಕಾರಣ, ಜಿಲ್ಲಾ ಸಂಕೀರ್ಣದ ಮೇಲಿನ ಟ್ಯಾಂಕ್‌ಗಳಲ್ಲಿ ನೀರು ಇಲ್ಲದಿರುವುದು.

ಕಾಲಹರಣ: ಜಿಪಂ ಸಭಾಂಗಣದ ಒಳ ವಿನ್ಯಾಸ ಇನ್ನೂ ಕಾಮಗಾರಿ ಹಂತದಲ್ಲೇ ಇದ್ದು, ವಾರ ಬೇಕಾಗುತ್ತದೆ ಎಂದು ಸಿಇಒ ಹೇಳುತ್ತಿದ್ದಾರೆ. ಆದರೆ, ಅಧ್ಯಕ್ಷರ ಕೊಠಡಿ ವಿನ್ಯಾಸ ಕಾರ್ಯ ನಡೆಯುತ್ತಿದೆ, ಅಧಿಕಾರಿಗಳ ಕ್ಯಾಬಿನ್‌, ಇತರೆ ಸಣ್ಣಪುಟ್ಟ ಕಾಮಗಾರಿ ನಡೆಯುತ್ತಿದೆ. ಇದೆಲ್ಲವನ್ನು ನೋಡಿದರೆ ಜಿಪಂ ಸಮರ್ಪಕ ಕಾರ್ಯ ನಿರ್ವಹಣೆಗೆ ಇನ್ನೂ ಒಂದು ತಿಂಗಳ ಬೇಕಾಗಬಹುದು ಎನ್ನಲಾಗುತ್ತದೆ. 

Advertisement

ಜಿಪಂಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಕಚೇರಿಗೆ ಬಂದರೆ ಅಧಿಕಾರಿಗಳು ಸಿಗುವುದೇ ಇಲ್ಲ. ದೂರವಾಣಿ ಸಂಖ್ಯೆಗೆ ಕರೆ ಮಾಡಿದರೂ ಉತ್ತರ ಇಲ್ಲ. ಬೆಂಗಳೂರಿನಂತೆ ಇಲ್ಲಿಗೂ ಅಲೆಯುವಂತಾಗಿದೆ. ಶೌಚಾಲಯ ಬಳಕೆಗೆ ಸಿಗದ ಕಾರಣ ಮಹಿಳೆಯರು, ಇಲ್ಲಿನ ಸಿಬ್ಬಂದಿ ದೇವನಹಳ್ಳಿ ಪಟ್ಟಣಕ್ಕೆ ಹೋಗಬೇಕಿದೆ. ಆಡಳಿತ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಸಿಬ್ಬಂದಿಗೂ ಹೆಚ್ಚು ಸಮಸ್ಯೆಯಾಗುತ್ತಿದೆ ಎಂದು ನಾಗರಿಕ ಬೈರೇಗೌಡ ಹೇಳಿದರು. 

ಕೂಡಲೇ ಜಿಲ್ಲಾ ಕಚೇರಿ ಸಂಕೀರ್ಣಕ್ಕೆ ಜನ ಬರಲು ಬಸ್‌ ವ್ಯವಸ್ಥೆ ಮಾಡಬೇಕು. ಬಸ್‌ ನಿಲ್ದಾಣ ನಿರ್ಮಿಸಿ ಅಲ್ಲಿ ಸೂಕ್ತ ತಂಗುದಾಣ ಕಟ್ಟಿಸಬೇಕು. ಬಹುಮುಖ್ಯವಾಗಿ ಮೊಬೈಲ್‌ ನೆಟ್‌ವರ್ಕ್‌ ಸಿಗುವಂತೆ ಮಾಡಬೇಕು ಎಂದು ಸ್ಥಳೀಯರಾದ ಮುನಿರಾಜು ಒತ್ತಾಯ.

ಜಿಲ್ಲಾ ಸಂಕೀರ್ಣದಲ್ಲಿ ಇನ್ನೂ ಅವ್ಯವಸ್ಥೆಗಳು ಇವೆ. ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲಾ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಜಿಪಂ ಅಧ್ಯಕ್ಷರಾದ ನನ್ನನ್ನು ಅಧಿಕಾರಿಗಳು ಲೆಕ್ಕಕ್ಕೆ ಇಟ್ಟುಕೊಳ್ಳುತ್ತಿಲ್ಲ. ಕಚೇರಿಗಳಿಗೆ ಮೂಲ ಸೌಲಭ್ಯ ಒದಗಿಸಿಲ್ಲ, ಜಿಪಂ ಸಭಾಂಗಣದ ಒಳ ವಿನ್ಯಾಸ ಕಾರ್ಯ ಇನ್ನೂ ನಡೆಯುತ್ತಲೇ ಇದೆ. ಅಧ್ಯಕ್ಷರ ಕೊಠಡಿ ಮೂರು ದಿನಗಳಲ್ಲಿ ಕೆಲಸ ಮುಗಿಯುತ್ತದೆ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಕಚೇರಿಗೆ ಬರುತ್ತಿದ್ದರೂ  ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಆಡಳಿತ ಸರಿಯಾಗಿ ಇಲ್ಲದ ಕಾರಣ ಸಿಬ್ಬಂದಿ ಗೊಂದಲಕ್ಕೆ ಸಿಲುಕಿದ್ದಾರೆ.
-ಜಯಮ್ಮ, ಜಿಪಂ ಅಧ್ಯಕ್ಷೆ.

ಜಿಪಂ ಸಭಾಂಗಣದ ಒಳ ವಿನ್ಯಾಸ ಕಾಮಗಾರಿ ವಾರದಲ್ಲಿ ಮುಗಿಯಲಿದೆ. ಈಗಾಗಲೇ ಸಂಕೀರ್ಣದಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ. ಶೇ.80 ಇಲಾಖೆಗಳು ಸ್ಥಳಾಂತರಗೊಂಡು ಕಾರ್ಯಾರಂಭ ಮಾಡಿವೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ.
-ಆರ್‌.ಲತಾ, ಜಿಪಂ ಸಿಇಒ.

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next