ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಆಯುಕ್ತರು ಇಲ್ಲದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವಾ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಆಯುಕ್ತರು ಜೂನ್ 1ರಂದು ಎಸಿಬಿ ಬಲೆಗೆ ಬಿದ್ದಿದ್ದರಿಂದ ಈಗ ಪಾಲಿಕೆಗೆ ಯಾರೂ ಆಯುಕ್ತರಿಲ್ಲದಂತಾಗಿದೆ. ಹೀಗಾಗಿ ಉಳಿದ ಎಲ್ಲ ಅಧಿಕಾರಿಗಳು ಸಹ ಪಾಲಿಕೆಗೆ ಸರಿಯಾಗಿ ಬರುತ್ತಿಲ್ಲ. ಪ್ರಮುಖವಾಗಿ ಸಾರ್ವಜನಿಕ ಕೆಲಸ ಕಾರ್ಯಗಳಿಗೂ ಹೊಡೆತ ಬಿದ್ದಿದೆ. ಮಹಾನಗರದಲ್ಲಿ ಪ್ರಮುಖವಾಗಿ ಕಸ ವಿಲೇವಾರಿ ಸಹ ಸಮರ್ಪಕವಾಗಿಲ್ಲ ಎಂಬುದಾಗಿ ಸಾರ್ವಜನಿಕರಿಂದ ವ್ಯಾಪಕ ಆರೋಪಗಳು ಕೇಳಿ ಬಂದಿವೆ.
ಪಾಲಿಕೆಗೆ ಪ್ರಾದೇಶಿಕ ಆಯುಕ್ತರು ಆಡಳಿತಾಧಿಕಾರಿಯಾಗಿದ್ದು, ಇವರೂ ಸಹ ನಾಲ್ಕು ದಿನಗಳಲ್ಲಿ ಪಾಲಿಕೆಗೆ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಕಲಬುರಗಿ ಕಡೆ ಕಾಲಿಡುತ್ತಿಲ್ಲ. ದೂರದ ಬೆಂಗಳೂರಿನಲ್ಲಿದ್ದರೂ ಕೂಡಾ ದೂರವಾಣಿ ಮೂಲಕವಾದರೂ ಸಮಸ್ಯೆ ಆಲಿಸುತ್ತಿಲ್ಲ ಎನ್ನುವುದು ಬಿಜೆಪಿ ಮುಖಂಡರುಗಳ ಆರೋಪವಾಗಿದೆ. ಇನ್ನೂ ಶಾಸಕರಂತು ತಮ್ಮದೇಯಾದ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ಪಾಲಿಕೆಗೆ ಯಾರೂ ದಿಕ್ಕು ಇಲ್ಲ ಎನ್ನುವಂತಾಗಿದೆ.
ಪ್ರಥಮ ಪ್ರಜೆ ಭಾಗ್ಯ ಯಾವಾಗ? ಪಾಲಿಕೆಗೆ ಚುನಾವಣೆ ನಡೆದ 9 ತಿಂಗಳಾದರೂ ಇನ್ನೂ ಪ್ರಥಮ ಪ್ರಜೆ ಭಾಗ್ಯ ಇಲ್ಲ. ಹೀಗಾಗಿ ಅಧಿಕಾರಿಗಳ ಕಾರ್ಯಭಾರ ಎನ್ನುವಂತಾಗಿದ್ದು, ಅಂತಹುದರಲ್ಲಿ ಪಾಲಿಕೆ ಆಯುಕ್ತರೇ ಲಂಚದ ಆರೋಪದ ಮೇರೆಗೆ ಎಸಿಬಿ ಬಲೆಗೆ ಬಿದ್ದಿರುವುದು ನಿಜಕ್ಕೂ ಕಲಬುರಗಿ ಮಹಾಜನತೆಯ ದೌರ್ಭಾಗ್ಯವೆಂದೇ ಹೇಳಬಹುದು.
ಈ ಹಿಂದೆ ಇದ್ದ ಪಾಲಿಕೆ ಸದಸ್ಯರು ಮಾಜಿಯಾಗಿದ್ದಾರೆ. ಆಯ್ಕೆಯಾದವರು ಇನ್ನೂ ಅಧಿಕೃತವಾಗಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಹೀಗಾಗಿ ಪಾಲಿಕೆಗೆ ಯಾರು ಕೇಳಬೇಕೆನ್ನುವಂತಿದೆ. ಅತ್ತ ಅಧಿಕಾರಿಗಳ ಕಾರ್ಯಭಾರವೂ ಇಲ್ಲ. ಮತ್ತೂಂದೆಡೆ ಜನಪ್ರತಿನಿಧಿಗಳ ಆಡಳಿತವೂ ಇಲ್ಲ ಎನ್ನುವಂತಾಗಿದೆ.