ಬೆಂಗಳೂರು: ಐದು ಕ್ಷೇತ್ರಗಳ ಉಪ ಚುನಾವಣೆ ಕಣ ಸ್ಪಷ್ಟಗೊಂಡಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಶಿವಮೊಗ್ಗ, ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭೆ ಕ್ಷೇತ್ರಗಳಲ್ಲಿ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಮಧು ಬಂಗಾರಪ್ಪ, ಬಳ್ಳಾರಿ ಕ್ಷೇತ್ರದಿಂದ ವಿ.ಎಸ್.ಉಗ್ರಪ್ಪ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತಾ, ಜಮಖಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಶ್ರೀಕಾಂತ್ ಕುಲಕರ್ಣಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದ್ ನ್ಯಾಮಗೌಡ ನಾಮಪತ್ರ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ನಾಮ ಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಸಚಿವ ಆರ್.ವಿ.ದೇಶಪಾಂಡೆ ಸಾಥ್ ನೀಡಿದರೆ, ಬಳ್ಳಾರಿಯಲ್ಲಿ ಉಗ್ರಪ್ಪ ನಾಮಪತ್ರ ಸಲ್ಲಿಕೆಗೆ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಾಥ್ ನೀಡಿದರು. ಜಮಖಂಡಿಯಲ್ಲಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ನಾಮಪತ್ರ ಸಲ್ಲಿಕೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್ ಜತೆಗೂಡಿ ದ್ದರು. ಬಳ್ಳಾರಿಯಲ್ಲಿ ಜೆ.ಶಾಂತಾ ನಾಮಪತ್ರ ಸಲ್ಲಿಕೆಗೆ ಶ್ರೀರಾಮುಲು ಸಹಿತ ಬಿಜೆಪಿ ನಾಯಕರು ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ಅನಂತರ ಬಳ್ಳಾರಿ, ಶಿವಮೊಗ್ಗ, ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಪ್ರಚಾರಕ್ಕೂ ಚಾಲನೆ ನೀಡಿದರು. ಆರೋಪ- ಪ್ರತ್ಯಾರೋಪಗಳ ಸುರಿಮಳೆಯೂ ಆಯಿತು.
ಈ ಮಧ್ಯೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಬಳಿಕ ಪಕ್ಷೇತರರಾಗಿ ಕಣಕ್ಕಿಳಿದು ಸೋಲು ಅನುಭವಿಸಿದ್ದ ತಿಪ್ಪೇಸ್ವಾಮಿ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ತಂತ್ರ ವಾಗಿ ಬಿಜೆಪಿ ಮತ ಚದುರಿಸಲು ತಿಪ್ಪೇಸ್ವಾಮಿ ನಾಮ ಪತ್ರ ಸಲ್ಲಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.
ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ, ಬಿಜೆಪಿಯಿಂದ ಚಂದ್ರಶೇಖರ್ ಸೋಮವಾರ ನಾಮಪತ್ರ ಸಲ್ಲಿಸಿದ್ದರು. ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿ ಯಾಗಿ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯಿಂದ ಡಾ| ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದ್ದರು. ಒಟ್ಟಾರೆ, ನ.3ರಂದು ಉಪ ಚುನಾವಣೆ ನಡೆಯಲಿದ್ದು, ಐದೂ ಕ್ಷೇತ್ರಗಳ ಕಣ ಸ್ಪಷ್ಟಗೊಂಡಿದೆ.
ಶಿವಮೊಗ್ಗದಲ್ಲಿ ಜೆಡಿಯುನಿಂದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಸಹ ನಾಮಪತ್ರ ಸಲ್ಲಿಸಿರುವುದರಿಂದ ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಹೋರಾಟ ಎಂಬಂತಾಗಿದೆ.