Advertisement

ನೊಗ್‌ರಾಜನ ತಂತ್ರ-ಕುತಂತ್ರ

03:57 PM Jan 12, 2018 | Team Udayavani |

ಮುಂಜಾನೆ ಆತನಿಗೊಂದು ಕನಸು ಬೀಳುತ್ತದೆ. ದಾನ ಶೂರ ಕರ್ಣನಂತೆ ಕಷ್ಟವೆಂದು ಬಂದವರಿಗೆ ಕೈ ಎತ್ತಿ ಹಣ ಕೊಡುವ, ಮಗಳ ಮದುವೆಗೆ ಸಹಾಯ ಮಾಡಿ ಎಂದವರಿಗೆ ತನ್ನ ಹೆಂಡತಿಯ ತಾಳಿಯನ್ನೇ ಕೊಟ್ಟು ಕಳುಹಿಸುವಂತಹ “ಉದಾತ್ತ’ ಕನಸು. ನೊಗ್‌ರಾಜ್‌ ತಟ್ಟನೆ ಎದ್ದು ಕೂರುತ್ತಾನೆ. ಪಕ್ಕದಲ್ಲಿ ನಿಂತಿದ್ದ ಹೆಂಡತಿಯ ಕತ್ತು ನೋಡಿ, ತಾಳಿ ಇರೋದು ಕಾತರಿಪಡಿಸಿಕೊಳ್ಳುತ್ತಾನೆ. ಏಕೆಂದರೆ, ನೊಗ್‌ರಾಜ್‌ನ ಕನಸಿಗೂ, ಆತನ ವ್ಯಕ್ತಿತ್ವಕ್ಕೂ ಸಂಪೂರ್ಣ ವ್ಯತ್ಯಾಸವಿದೆ.

Advertisement

ಆತ ಮತ್ತೂಬ್ಬರಿಗೆ ಸಹಾಯ ಮಾಡುವ ರಾಜಕಾರಣಿಯಲ್ಲ, ಭ್ರಷ್ಟ ರಾಜಕಾರಣಿ. ತನ್ನ ಇಮೇಜ್‌ ಹೆಚ್ಚಿಸಿಕೊಳ್ಳಲು ಆತ ಏನು ಬೇಕಾದರೂ ಮಾಡುತ್ತಾನೆ. ನೊಗ್‌ರಾಜನ ಆ ಅವಾಂತರಗಳನ್ನು ನೋಡಬೇಕಾದರೆ ನೀವು ಸಿನಿಮಾಕ್ಕೆ ಹೋಗಿ. “ಹಂಬಲ್‌ ಪೊಲಿಟಿಷಿಯನ್‌ ನೊಗ್‌ರಾಜ್‌’ ಚಿತ್ರ ಹೆಸರಿಗೆ ತಕ್ಕಂತೆ ರಾಜಕೀಯ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿದೆ. ರಾಜಕೀಯ, ರಾಜಕಾರಣಿಗಳನ್ನು ವಿಡಂಬಣೆ ಮಾಡುತ್ತಾ ಸಾಗುವ ಈ ಸಿನಿಮಾದಲ್ಲಿ ನಿಮಗೆ ಮನರಂಜನೆಗೇನೂ ಕೊರತೆಯಿಲ್ಲ.

ಇಡೀ ಸಿನಿಮಾವನ್ನು ಕಾಮಿಡಿ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಮೂಲಕ ಸಿಕ್ಕಾಪಟ್ಟೆ ಸೀರಿಯಸ್‌ ಸಿನಿಮಾ ಎಂಬ ಮಾತಿನಿಂದ ನೊಗ್‌ರಾಜ್‌ನನ್ನು ಮುಕ್ತವಾಗಿಸಿದ್ದಾರೆ. ಈಗಾಗಲೇ ರಾಜಕೀಯ, ಭ್ರಷ್ಟ ರಾಜಕಾರಣಿಗಳನ್ನು ವಿಡಂಬಣೆ ಮಾಡುವ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಆದರೆ, “ನೊಗ್‌ರಾಜ್‌’ನ ಕಥೆಯಲ್ಲಿ ರಾಜಕೀಯ ವಿಡಂಬಣೆ ಇದ್ದರೂ ನಿರ್ದೇಶಕರು ಅದನ್ನು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆ ಮಟ್ಟಿಗೆ ಇದು ಹೊಸ ಪ್ರಯತ್ನ ಎನ್ನಬಹುದು. 

ಕಾಲೇಜು ದಿನಗಳಿಂದಲೇ ಪಕ್ಕಾ ಲೆಕ್ಕಾಚಾರದೊಂದಿಗೆ ತನ್ನ ಆಸೆ ಈಡೇರಿಸಿಕೊಳ್ಳುತ್ತಾ ಬಂದು ಕಾರ್ಪೋರೇಟರ್‌ ಆದ ನೊಗ್‌ರಾಜ್‌ ಮುಂದೆ ಶಾಸಕನಾಗಲು ಏನೆಲ್ಲಾ ಕಸರತ್ತು ಮಾಡುತ್ತಾನೆ ಮತ್ತು ಆತ ಏನೇನು ತಂತ್ರಗಳನ್ನು ಅನುಸರಿಸುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಮುಖ್ಯವಾಗಿ ಈ ಸಿನಿಮಾದಲ್ಲಿ ರಾಜಕಾರಣಿಯೊಬ್ಬ ತನ್ನ ಹಣಬಲದಿಂದ ಇಡೀ ವ್ಯವಸ್ಥೆಯನ್ನು ತನಗೆ ಬೇಕಾದಂತೆ ಹೇಗೆ ಬದಲಿಸಬಲ್ಲ ಎಂಬುದನ್ನು ವಿಧವಿಧವಾಗಿ ಇಲ್ಲಿ ತೋರಿಸಲಾಗಿದೆ. 

ಚಿತ್ರದ ಮೊದಲರ್ಧ ನಿಮಗೆ ಭ್ರಷ್ಟ ಕಾರ್ಪೋರೇಟರ್‌ ಒಬ್ಬನ ಪಯಣದಲ್ಲಿ ಮುಗಿದು ಹೋಗುತ್ತದೆ. ಇಲ್ಲಿ ಆತನ “ತಂತ್ರ’ಗಳನ್ನು ಡಿಸೈನ್‌ ಡಿಸೈನ್‌ ಆಗಿ ಹೇಳಲಾಗಿದೆ. ಚಿತ್ರದ ನಿಜವಾದ ಕಥೆ ಹಾಗೂ ಕುತೂಹಲ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ನೊಗ್‌ರಾಜ್‌ಗೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಳ್ಳುವ ಮೂಲಕ ಸಿನಿಮಾದ ಟ್ವಿಸ್ಟ್‌ ತೆರೆದುಕೊಳ್ಳುತ್ತದೆ. ಇಲ್ಲಿ ಸಿನಿಮಾ ಕೂಡಾ ಒಂದಷ್ಟು ಗಂಭೀರವಾಗುತ್ತಾ ಸಾಗುತ್ತದೆ.

Advertisement

ಆದರೆ, ನೊಗ್‌ರಾಜ್‌ನ ಎಂಟ್ರಿಯಾದಾಗ ಸಿನಿಮಾಗೆ ಕಾಮಿಡಿ ಸ್ಪರ್ಶ ಸಿಗುತ್ತದೆ. ಈ ಸಿನಿಮಾ ಹೇಗೆ ಕಾಮಿಡಿಯಾಗಿ ಸಾಗುತ್ತದೋ ಅದರ ಜೊತೆಗೆ ಒಂದಷ್ಟು ಸೂಕ್ಷ್ಮಸಂದೇಶಗಳನ್ನು ಕೂಡಾ ನೀಡಿದೆ. ರಾಜಕೀಯದ ನೈಜ ಸ್ಥಿತಿ, ಒಳಗೊಳಗೆ ನಡೆಯುವ ಮಾಫಿಯಾಗಳು, ಪ್ರಾಮಾಣಿಕ ವ್ಯಕ್ತಿಗಳ ಅನುಭವಿಸಬೇಕಾದ ಅವಮಾನ ಸೇರಿದಂತೆ ಹಲವು ಅಂಶಗಳನ್ನು ಹೇಳುವ ಮೂಲಕ ರಾಜಕೀಯ ವಿಡಂಬಣೆ ಮಾಡಲಾಗಿದೆ.

ಚಿತ್ರದಲ್ಲಿ ಒಂದಷ್ಟು ದೃಶ್ಯಗಳಿಗೆ ಕತ್ತರಿ, ಹಾಕಿ ಟ್ರಿಮ್‌ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರದ ಸಂಭಾಷಣೆ ಚುರುಕಾಗಿದೆ. ನೊಗ್‌ರಾಜ್‌ ಮ್ಯಾನರಿಸಂಗೆ ಆ ಸಂಭಾಷಣೆ ಹೊಂದಿಕೊಂಡಿದೆ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರೋದು ನಟ ದಾನಿಶ್‌ ಸೇಠ್. ಅವರಿಗಿದು ನಾಯಕರಾಗಿ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲೇ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನೊಗ್‌ರಾಜ್‌ ಪಾತ್ರವನ್ನು ಅವರು ಅಕ್ಷರಶಃ ಜೀವಿಸಿದ್ದಾರೆ. ಅವರ ಮಾತಿನ ಶೈಲಿ, ಮ್ಯಾನರಿಸಂ ಎಲ್ಲವೂ ಪಾತ್ರಕ್ಕೆ ಹೊಂದಿಕೊಂಡಿದೆ. ಉಳಿದಂತೆ ಚಿತ್ರದಲ್ಲಿ ರೋಜರ್‌ ನಾರಾಯಣ್‌, ಸುಮುಖೀ ಸುರೇಶ್‌,ಶೃತಿ ಹರಿಹರನ್‌, ವಿಜಯ್‌ ಚೆಂಡೂರು ಸೇರಿದಂತೆ ಅನೇಕರು ನಟಿಸಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ, ಫ್ರೇಮ್‌ ಟು ಫ್ರೇಮ್‌ ದಾನಿಶ್‌ ಆವರಿಸಿಕೊಂಡಿದ್ದರಿಂದ ಅವರ್ಯಾರು ಹೆಚ್ಚು ಗಮನ ಸೆಳೆಯೋದಿಲ್ಲ. ಚಿತ್ರದ “ಪ್ರಾಬ್ಲಿಂ’ ಹಾಡು ಇಷ್ಟವಾಗುತ್ತದೆ.

ಚಿತ್ರ: ಹಂಬಲ್‌ ಪೊಲಿಟಿಷಿಯನ್‌ ನೊಗ್‌ರಾಜ್‌
ನಿರ್ಮಾಣ: ಪುಷ್ಕರ್‌, ರಕ್ಷಿತ್‌ ಶೆಟ್ಟಿ, ಹೇಮಂತ್‌ ರಾವ್‌
ನಿರ್ದೇಶನ: ಸಾದ್‌ ಖಾನ್‌
ತಾರಾಬಳಗ: ದಾನಿಶ್‌ ಸೇಠ್, ರೋಜರ್‌ ನಾರಾಯಣ್‌, ಸುಮುಖೀ ಸುರೇಶ್‌,ಶೃತಿ ಹರಿಹರನ್‌, ವಿಜಯ್‌ ಚೆಂಡೂರು ಮುಂತಾದವರು

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next