ಓಸ್ಲೋ : ಅಣ್ವಸ್ತ್ರ ನಿರ್ಮೂಲನ ಅಂತಾರಾಷ್ಟ್ರೀಯ ಅಭಿಯಾನ (ಐಕ್ಯಾನ್) ಸಂಸ್ಥೆ ಈ ಬಾರಿಯ ನೊಬೆಲ್ ಶಾಂತಿ ಪಾರಿತೋಷಕವನ್ನು ಗೆದ್ದುಕೊಂಡಿದೆ.
ಇಂಟರ್‌ನ್ಯಾಶನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ (ಐಕ್ಯಾನ್) ಎನ್ನುವುದು ವಿಶ್ವಾದ್ಯಂತದ ನೂರಕ್ಕೂ ಹೆಚ್ಚು ದೇಶಗಳ ಹಲವಾರು ಸರಕಾರೇತರ ಸೇವಾ ಸಂಸ್ಥೆಗಳ ಮೈತ್ರಿಕೂಟವಾಗಿದೆ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಅಣ್ವಸ್ತ್ರಗಳನ್ನು ನಿಷೇಧಿಸುವ ವಿಶ್ವ ಪೌರ ಸಮಾಜದ ಪ್ರತಿನಿಧಿಯಾಗಿ ಐಕ್ಯಾನ್ ನಿರ್ಣಾಯಕ ಪಾತ್ರವನ್ನು ವಹಿಸಿದೆ.
ಅಣ್ವಸ್ತ್ರಗಳ ಬಳಕೆಯಿಂದ ಉಂಟಾಗುವ ಮನುಕುಲದ ನಾಶದತ್ತ ವಿಶ್ವ ಗಮನವನ್ನು ಸೆಳೆದು ಒಪ್ಪಂದದ ನೆಲೆಯಲ್ಲಿ ಅಂತಹ ಅಸ್ತ್ರಗಳನ್ನು ನಿಷೇಧಿಸುವ ಪ್ರಯತ್ನದಲ್ಲಿ ಐಕ್ಯಾನ್ ದೊಡ್ಡ ವಿಜಯವನ್ನೇ ಸಾಧಿಸಿದೆ ಎಂದು ನಾರ್ವೆಯ ನೊಬೆಲ್ ಸಮಿತಿಯು ಹೇಳಿದೆ.
ಇದೇ ವರ್ಷ ಡಿಸೆಂಬರ್ 10ರಂದು ಓಸ್ಲೋದಲ್ಲಿ 11 ಕೋಟಿ ಡಾಲರ್ ಅಥವಾ 90 ಲಕ್ಷ ಸ್ವೀಡಿಶ್ ಕ್ರೌನ್ ಬಹುಮಾನದ ನೊಬೆಲ್ ಶಾಂತಿ ಪಾರಿತೋಷಕವನ್ನು ಐಕ್ಯಾನ್ ಕೂಟಕ್ಕೆ ಪ್ರದಾನಿಸಲಾಗುವುದು ಎಂದು ಸಮಿತಿಯು ತಿಳಿಸಿದೆ.
ಪ್ರಕೃತ ವಿಶ್ವದಲ್ಲಿ 15,000 ಅಣ್ವಸ್ತ್ರಗಳಿದ್ದು ಇವುಗಳನ್ನು ಹಂತ ಹಂತವಾಗಿ ನಾಶಪಡಿಸಬೇಕೆಂದು 2017ರ ನೊಬೆಲ್ ಶಾಂತಿ ಪಾರಿತೋಷಕ ಕರೆ ನೀಡಿದೆ.