Advertisement

ಮಂಗಳೂರಿಗೆ ಇಲ್ಲ ನೀರು ರೇಶನಿಂಗ್‌ ಆತಂಕ

11:46 PM May 11, 2020 | Sriram |

ಮಂಗಳೂರು: ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಮೂಲ ವಾಗಿರುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಸದ್ಯ 4.87 ಮೀಟರ್‌ (ಮೇ 11)ನೀರು ಸಂಗ್ರಹವಿದ್ದು, ನಗರಕ್ಕೆ ಈ ಬಾರಿಯ ಬೇಸಗೆಯಲ್ಲಿ ನೀರಿನ ಕೊರತೆಯ ಆತಂಕ ಸದ್ಯಕ್ಕೆ ದೂರವಾಗುವ ಲಕ್ಷಣ ಗೋಚರಿಸಿದ್ದು, ಈ ಬಾರಿ ರೇಶನಿಂಗ್‌ ಮಾಡಬೇಕಾದ ಅಗತ್ಯ ಎದುರಾಗದು.

Advertisement

ನೇತ್ರಾವತಿ ನದಿ ಜಲಾನಯನ ಪ್ರದೇಶ ಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣವೂ ಹಂತ ಹಂತವಾಗಿ ಏರಿಕೆ ಕಾಣುತ್ತಿದೆ. ಎಎಂಆರ್‌ ಡ್ಯಾಂನಲ್ಲಿ ನೀರು ಸಂಗ್ರಹ ಉತ್ತಮ ವಾಗಿರುವ ಕಾರಣದಿಂದ ಸೋಮವಾರ ಮುಂಜಾನೆಯಿಂದ ಅಲ್ಲಿಂದ ನೀರು ಹೊರಗೆ ಬಿಡಲಾಗುತ್ತಿದೆ. ಹೀಗಾಗಿ ಮಂಗಳವಾರ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಮತ್ತೆ ಏರಿಕೆಯಾಗಲಿದೆ.
2019ರ ಮೇ 11ರಂದು ತುಂಬೆ ಡ್ಯಾಂನಲ್ಲಿ 4.05 ಮೀಟರ್‌, 2018ರ ಮೇ 11ರಂದು 6 ಮೀಟರ್‌ ನೀರು ಸಂಗ್ರಹವಿತ್ತು. ಈ ವರ್ಷ 4.87 ಮೀಟರ್‌ ನೀರು ಸಂಗ್ರಹವಿದೆ. ಎಎಂಆರ್‌ನಲ್ಲಿ ಸದ್ಯ 17.96 ಮೀಟರ್‌ ನೀರು ಸಂಗ್ರಹವಿದೆ.

ಕಳೆದ ವರ್ಷ ಮಾರ್ಚ್‌ ತಿಂಗಳ ಮಧ್ಯಭಾಗದಿಂದಲೇ ತುಂಬೆ ವೆಂಟೆಡ್‌ ಡ್ಯಾಂನ ನೀರು ಸಂಗ್ರಹದಲ್ಲಿ ಕುಸಿತ ಕಂಡುಬಂದಿತ್ತು. ಹಾಗಾಗಿ ಕಳೆದ ವರ್ಷ ಎಪ್ರಿಲ್‌ ಮಧ್ಯಭಾಗದಿಂದಲೇ ನೀರು ರೇಶನಿಂಗ್‌ ಜಾರಿ ಮಾಡಲಾಗಿತ್ತು. ನೀರಿನ ಪ್ರಮಾಣವನ್ನು ಈ ಬಾರಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಪ್ರಿಲ್‌ 15ರಂದು ಎಎಂಆರ್‌ ಡ್ಯಾಂನಿಂದ ನೀರು ಹರಿಸಿ 6 ಮೀಟರ್‌ಗೆರಿಸಲಾಗಿದೆ. ಇದೀಗ ಸೋಮವಾರ 2ನೇ ಬಾರಿ ನೀರು ಹೊರಗೆ ಬಿಡಲಾಗುತ್ತಿದೆ.

ಸಮಸ್ಯೆಯಿಲ್ಲ
ನೇತ್ರಾವತಿ ನದಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ತುಂಬೆ ಡ್ಯಾಂನಲ್ಲಿಯೂ ನೀರಿನ ಪ್ರಮಾಣ ಏರಿಕೆ ಹಂತದಲ್ಲಿದೆ. ಈಗಿನ ಸ್ಥಿತಿಯನ್ನು ಗಮನಿಸುವಾಗ ಈ ಬಾರಿ ಮಂಗಳೂರಿಗೆ ನೀರು ರೇಶನಿಂಗ್‌ ಮಾಡುವ ಪ್ರಮೇಯ ಎದುರಾಗಲಾರದು.
 -ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತ, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next