Advertisement

ಕಾರವಾರ-ಯಶವಂತಪುರ ರೈಲುಮಾರ್ಗ ಬದಲಾವಣೆ ಕಣ್ಣೊರೆಸುವ ತಂತ್ರ

11:10 AM May 17, 2017 | Karthik A |

ಮಂಗಳೂರು: ನೈಋತ್ಯ ರೈಲ್ವೇ ವಲಯ ಕಾರವಾರ -ಯಶವಂತಪುರ ಎಕ್ಸ್‌ಪ್ರಸ್‌ ಹಗಲು ರೈಲಿನ (ನಂ. 16515/516) ಸಂಚಾರ ಮಾರ್ಗ ಬದಲಾವಣೆ ಮಾಡುವ ಮೂಲಕ ಕರಾವಳಿ ಜನರ ಕಣ್ಣಿಗೆ ಮಣ್ಣೆರಚಿಸುವ ಪ್ರಯತ್ನ ಮಾಡಿದೆ. ಏಕೆಂದರೆ, ಕಾರವಾರ-ಯಶವಂತಪುರ ಹಗಲು ರೈಲುಮಾರ್ಗ ಬದಲಾವಣೆ ಮಾಡುವ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂಬುದು ಕರಾವಳಿ ಜನರ ಪ್ರಮುಖ ಬೇಡಿಕೆಯಾಗಿತ್ತು. ಅಂದರೆ, ತುಮಕೂರು ಮಾರ್ಗವಾಗಿ ಸಂಚರಿಸುವ ಈ ರೈಲು ಅನ್ನು ಕುಣಿಗಲ್‌ – ಚನ್ನರಾಯಪಟ್ಟಣ ಮಾರ್ಗವಾಗಿ ಬದಲಿಸಿ ಪ್ರಯಾಣದ ಅವಧಿಯನ್ನು ಸುಮಾರು 3ರಿಂದ 4 ತಾಸು ಉಳಿಸಬೇಕೆಂಬುದು ಕರಾವಳಿ ಭಾಗದವರ ಕೋರಿಕೆಯಾಗಿತ್ತು. ಅದರಂತೆ, ನೈಋತ್ಯ ರೈಲ್ವೇಯೂ ಜೂ. 2ರಿಂದ ಕಾರವಾರ – ಯಶವಂತಪುರ ರೈಲಿನ ಮಾರ್ಗ ಬದಲಾವಣೆಗೆ ತೀರ್ಮಾನಿಸಿ ಈಗಾಗಲೇ ಆದೇಶ ಕೂಡ ಹೊರಡಿಸಿದೆ. ವಿಪರ್ಯಾಸವೆಂದರೆ, ಕೇವಲ ಮಾರ್ಗದಲ್ಲಿ ಮಾತ್ರ ಬದಲಾವಣೆ ಮಾಡಿದ್ದು, ಪ್ರಯಾಣದ ಅವಧಿಯಲ್ಲಿ ಯಾವುದೇ ಕಡಿತ ಮಾಡಿಲ್ಲ. ಹೀಗಾಗಿ, ಈ ರೈಲಿನ ಮಾರ್ಗ ಬದಲಾವಣೆ ಮಾಡಿದರೂ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂಬುದು ವಾಸ್ತವ.ಈಗ ಈ ರೈಲು ಸಂಚರಿಸುತ್ತಿರುವ ಮಾರ್ಗದಲ್ಲಿ ಕಾರವಾರದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಕಾರವಾರಕ್ಕೆ ಪ್ರಯಾಣಿಸಬೇಕಾದರೆ, ಬರೋಬ್ಬರಿ 15ರಿಂದ 16 ತಾಸು ತೆಗೆದುಕೊಳ್ಳಲಿದೆ. ಮಾರ್ಗ ಬದಲಾವಣೆ ಬಳಿಕವೂ ಪ್ರಯಾಣಕ್ಕೆ ಅಷ್ಟೇ ಅವಧಿ ತೆಗೆದುಕೊಳ್ಳಲಿದೆ. 

Advertisement

ಪ್ರಯಾಣಿಕರಿಗೆ ಪ್ರಯೋಜನವಿಲ್ಲ 
ರೈಲು ಸಂಖ್ಯೆ 16516 ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್‌ ಈಗ ಕಾರವಾರದಿಂದ ಮುಂಜಾನೆ 5 ಗಂಟೆಗೆ ಹೊರಟು ಮಂಗಳೂರು ಜಂಕ್ಷನ್‌ಗೆ ಬೆಳಗ್ಗೆ 10.55ಕ್ಕೆ ಬರುತ್ತದೆ. 11.10ಕ್ಕೆ ನಿರ್ಗಮಿಸಿ ರಾತ್ರಿ 9ಕ್ಕೆ ಯಶವಂತಪುರ ತಲುಪುತ್ತದೆ. ಹೊಸ ವೇಳಾಪಟ್ಟಿಯಂತೆ ಕಾರವಾರದಿಂದ ಮುಂಜಾನೆ 5 ಗಂಟೆಗೆ ಹೊರಟು ಮಂಗಳೂರು ಜಂಕ್ಷನ್‌ಗೆ ಬೆಳಗ್ಗೆ 10.55ಕ್ಕೆ ಬರುತ್ತದೆ. ರಾತ್ರಿ 8.30ಕ್ಕೆ ಯಶವಂತಪುರ ತಲುಪುತ್ತದೆ. ಯಶವಂತಪುರದಿಂದ (ನಂ. 16515) ಬೆಳಗ್ಗೆ 7 ಹೊರಟು ಸಂಜೆ 5.40ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸುತ್ತದೆ. 6 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು ರಾತ್ರಿ 11 ಗಂಟೆಗೆ ಕಾರವಾರ ತಲುಪುತ್ತದೆ. ಹೊಸ ವೇಳಾಪಟ್ಟಿಯಂತೆ ಯಶವಂತಪುರದಿಂದ ಬೆಳಗ್ಗೆ 7.10ಕ್ಕೆ ಹೊರಟು ನೆಲಮಂಗಲ – ಕುಣಿಗಲ್‌ ಮಾರ್ಗವಾಗಿ ಮಂಗಳೂರಿಗೆ ಸಂಜೆ 5.40ಕ್ಕೆ ಆಗಮಿಸಲಿದೆ. ರಾತ್ರಿ 11 ಗಂಟೆಗೆ ಕಾರವಾರ ತಲುಪುತ್ತದೆ. ಕಾರವಾರದಿಂದ ಯಶವಂತಪುರಕ್ಕೆ ಹೋಗುವ ರೈಲು ಈ ಮೊದಲು ಯಶವಂತ ಪುರವನ್ನು 9 ಗಂಟೆಗೆ ತಲುಪುವ ಬದಲು ರಾತ್ರಿ 8.30ಕ್ಕೆ ತಲುಪುತ್ತದೆ. ಯಶವಂತಪುರದಿಂದ ಬೆಳಗ್ಗೆ 7 ಗಂಟೆ ಬದಲಿಗೆ 10 ನಿಮಿಷ ತಡವಾಗಿ ಹೊರಡುತ್ತದೆ. ಅದುಬಿಟ್ಟರೆ, ಈ ಮಾರ್ಗ ಬದಲಾವಣೆಯಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ರೈಲು ತಜ್ಞರ ಅಭಿಪ್ರಾಯ.

ನಿರೀಕ್ಷೆ  ಏನಿತ್ತು?
ಕಾರವಾರ- ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್‌ ರೈಲು ತುಮಕೂರು ಬದಲಿಗೆ ನೆಲಮಂಗಲ – ಶ್ರವಣಬೆಳಗೂಳ ಮೂಲಕ ಸಂಚಾರ ನಡೆಸಿದರೆ ಪ್ರಯಾಣದ ಹಾದಿಯಲ್ಲಿ ಕನಿಷ್ಠ 3ರಿಂದ 4 ತಾಸು ಉಳಿತಾಯವಾಗಧಿಬಹುದು. ಯಶವಂತಪುರಕ್ಕೆ ರಾತ್ರಿ 9 ಗಂಟೆಯ ಬದಲು ಸಂಜೆ 5 ಅಥವಾ 6 ಗಂಟೆಗೆ ತಲುಪಬಹುದು. ಇದೇ ರೀತಿ ಯಶವಂತಪುರಿಂದ ಮಂಗಳೂರಿಗೆ ಅಪರಾಹ್ನ 3 ಗಂಟೆಗೆ ಬರಬಹುದು ಹಾಗೂ ಕಾರವಾರಕ್ಕೆ ಸಂಜೆ 7 ಅಥವಾ ರಾತ್ರಿ 8 ಗಂಟೆಗೆ ತಲುಪಬಹುದು ಎಂಬುದು ಪ್ರಯಾಣಿಕರ ನಿರೀಕ್ಷೆಯಾಗಿತ್ತು. ಆದರೆ ಇದೀಗ ಈ ಎಲ್ಲ ನಿರೀಕ್ಷೆ ಹುಸಿಯಾಗಿದೆ.

ರದ್ದು ಮಾಡುವ ಹುನ್ನಾರ?
ಕಾರವಾರ- ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್‌ ರೈಲು ಪ್ರಸ್ತುತ ಕಾರವಾರದಿಂದ ಮಂಗಳೂರು ಜಂಕ್ಷನ್‌ ಮಧ್ಯೆ ಬಹುತೇಕ ಖಾಲಿಯಾಗಿಯೇ ಓಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಅನುಕೂಲವಲ್ಲದ ವೇಳಾಪಟ್ಟಿ ಹಾಗೂ ನಗರಕ್ಕೆ ಬಾರದೆ ಕಂಕನಾಡಿ ಸ್ಟೇಷನ್‌ನಲ್ಲಿ ರೈಲು ನಿಲುಗಡೆಯಾಗುತ್ತಿರುವುದು. ಆದರೆ, ನೈಋತ್ಯ ರೈಲ್ವೇ ವಲಯ ಪ್ರಯಾಣಿಕರಿಂದ‌ ನೀರಸ ಸ್ಪಂದನೆ ನೆಪವೊಡ್ಡಿ ನಿಧಾನಕ್ಕೆ ಈ ರೈಲಿನ ಸಂಚಾರವನ್ನೇ ರದ್ದುಪಡಿಸುವುದೇ ಎಂಬ ಅನುಮಾನ ಮೂಡತೊಡಗಿದೆ. ಏಕೆಂದರೆ, ಇದೇ ಕಾರಣ ನೀಡಿ ಈಗಾಗಲೇ ಮಂಗಳೂರಿನಿಂದ ಎರಡು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆೆ.

ನಿರೀಕ್ಷೆ  ಹುಸಿಯಾಗಿದೆ
ಕಾರವಾರ-ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲುಮಾರ್ಗ ಬದಲಾವಣೆಯಿಂದ ಪ್ರಯಾಣಿಕರಿಗೆ ಪ್ರಯೋಜನವಾಗಿರುವುದು ಕಂಡುಬರುತ್ತಿಲ್ಲ. ಪ್ರಯಾಣದ ಅವಧಿ ಹಾಗೆಯೇ ಉಳಿದುಕೊಂಡಿದೆ. ಅಸಮರ್ಪಕ ವೇಳಾಪಟ್ಟಿಯಿಂದ ಈಗಾಗಲೇ ಬಳಲುತ್ತಿರುವ ಈ ರೈಲಿಗೆ ಮಾರ್ಗ ಬದಲಾವಣೆ ಪುನಶ್ಚೇತನ ಲಭಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.ಒಟ್ಟು ರೈಲಿನ ವೇಳಾಪಟ್ಟಿ ಹಾಗೂ ಸಂಚಾರ ಸ್ವರೂಪದಲ್ಲಿ ಬದಲಾವಣೆಯಾಗಬೇಕು.
– ಅನಿಲ್‌ ಹೆಗ್ಡೆ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ 

Advertisement

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next