ನವದೆಹಲಿ: ತರಗತಿಗಳಲ್ಲಿ ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಶೇಷ ಮೇಲ್ಮನವಿಯ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ (ಮಾರ್ಚ್ 16) ತಿಳಿಸಿದೆ.
ಇದನ್ನೂ ಓದಿ:ಭಗತ್ ಸಿಂಗ್ ಹುಟ್ಟೂರಿನಲ್ಲಿ ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಮಾನ್ ಪ್ರಮಾಣವಚನ ಸ್ವೀಕಾರ
ಹಿಜಾಬ್ ಕುರಿತಂತೆ ಕರ್ನಾಟಕ ಹೈಕೋರ್ಟ್ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಯ ತುರ್ತು ವಿಚಾರಣೆಯ ದಿನಾಂಕ ನಿಗದಿಪಡಿಸಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದಾಗಿ ವರದಿ ತಿಳಿಸಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠದ ಮುಂದೆ ಅರ್ಜಿದಾರರ ಪರ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ತಮ್ಮ ಮನವಿಯನ್ನು ಪ್ರಸ್ತಾಪಿಸಿದ್ದು, ಹಲವಾರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು.
ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲೇ ಪರೀಕ್ಷೆ ಆರಂಭವಾಗಲಿದ್ದು, ಕೂಡಲೇ ಅರ್ಜಿಯ ವಿಚಾರಣೆ ನಡೆಸಬೇಕೆಂದು ವಕೀಲರು ಪುನರುಚ್ಚರಿಸಿದಾಗ, ಇದಕ್ಕೆ ಕಾಲಾವಕಾಶ ಬೇಕಾಗಿದ್ದು, ಹೋಳಿ ರಜೆಯ ನಂತರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿದ್ದ ಹಿಜಾಬ್ ಪ್ರಕರಣದ ಕುರಿತು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠ, ಶಾಲಾ-ಕಾಲೇಜಿನ ತರಗತಿಗಳಿಗೆ ಹಿಜಾಬ್ ಧರಿಸಿ ಹಾಜರಾಗುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ 2022ರ ಫೆ.5ರಂದು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದ್ದು, ಹಿಜಾಬ್ ಧಾರಣೆ ಇಸ್ಲಾಂನ ಅತ್ಯವಶ್ಯಕ ಭಾಗವಲ್ಲ ಎಂದು ವ್ಯಾಖ್ಯಾನಿಸಿ ತೀರ್ಪು ನೀಡಿತ್ತು.