ಹೊಸದಿಲ್ಲಿ : ಡಿಜಿಟಲ್ ಪಾವತಿಗಳ ವ್ಯಾಪಕ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ಸಾವಿರ ರೂ. ವರೆಗಿನ ಡೆಬಿಟ್ ಕಾರ್ಡ್ ವ್ಯವಹಾರಗಳಿಗೆ ಎಂಡಿಆರ್ (ಮರ್ಚಂಟ್ ಡಿಸ್‌ಕೌಂಟ್ ರೇಟ್) ಶುಲ್ಕ ಇರುವುದಿಲ್ಲ ಎಂದು ಸರಕಾರ ಇಂದು ಶುಕ್ರವಾರ ಹೇಳಿದೆ.
2018ರ ಜನವರಿ 1ರಿಂದ ಮುಂದಿನ ಎರಡು ವರ್ಷಗಳ ಕಾಲ ಡೆಬಿಟ್ ಕಾರ್ಡ್, ಭೀಮ್ ಯುಪಿಐ ಮತ್ತು ಎಇಪಿಎಸ್ ಮೂಲಕ ನಡೆಯುವ 2,000 ರೂ. ವರೆಗಿನ ವ್ಯವಹಾರಗಳ ಶುಲ್ಕ ವೆಚ್ಚವನ್ನು ಸರಕಾರವೇ ಭರಿಸಲಿದೆ ಮತ್ತು ಬ್ಯಾಂಕುಗಳಿಗೆ ಅದನ್ನು ಮರುಪಾವತಿಸಲಿದೆ. ಈ ಮಹತ್ವದ ನಿರ್ಧಾರವನ್ನು ಇಂದು ಕೇಂದ್ರ ಸಚಿವ ಸಂಪುಟ ಕೈಗೊಂಡಿತು.
ಎಂಡಿಆರ್ ಅಂದರೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸೇವೆ ನೀಡುವ ವ್ಯಾಪಾರಿಗಳಿಗೆ ಬ್ಯಾಂಕುಗಳು ವಿಧಿಸುವ ಶುಲ್ಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಪ್ರತ್ಯೇಕವಾದ ಪರಿಮಿತಿಗಳಿವೆ.
ಇನ್ನು ಮುಂದೆ ವರ್ಷಕ್ಕೆ 20 ಲಕ್ಷ ರೂ. ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಪಾಯಿಂಟ್ ಆಫ್ ಸೇಲ್ ಮಶೀನ್‌ನಲ್ಲಿ ನಡೆಸುವ ಹಣಕಾಸು ವ್ಯವಹಾರಕ್ಕೆ ಶೇ.0.40 ಎಂಡಿಆರ್ ಶುಲ್ಕವನ್ನು ವಿಧಿಸಲಾಗುವುದು ಮತ್ತು ಇದರ ಗರಿಷ್ಠ ಮಿತಿಯನ್ನು ತಲಾ ವ್ಯವಹಾರದ ಮೇಲೆ 200 ರೂ.ಗೆ ನಿಗದಿಸಲಾಗಿದೆ ಎಂದು ಹೊಸ ಅಧಿಸೂಚನೆ ತಿಳಿಸಿದೆ.
ವರ್ಷಕ್ಕೆ 20 ಲಕ್ಷ ಮೀರಿ ವಹಿವಾಟು ನಡೆಸುವ ಮಧ್ಯಮ ಮಟ್ಟದ ವ್ಯಾಪಾರಿಗಳಿಗೆ ತಲಾ 1,000 ರೂ. ವಹಿವಾಟಿನ ಮೇಲೆ ಶೇ.0.90 ಎಂಡಿಆರ್ ಶುಲ್ಕವಿದೆ. ಕ್ಯೂಆರ್ ಕೋಡ್ ಮೂಲಕ ವ್ಯವಹರಿಸಿದಲ್ಲಿ ಶೇ.0.80 ಎಂಡಿಆರ್ ಅನ್ವಯವಾಗುತ್ತದೆ.