ರಾಮನಗರ: ಕೋವಿಡ್- 19 ಕಾರಣ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಶಾಲಾ ಮಕ್ಕಳ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಪೊಲೀಸ್, ಅಗ್ನಿಶಾಮಕ, ಅರಣ್ಯ ಇಲಾಖೆಯಿಂದ ಪಥ ಸಂಚಲನ ಕಾರ್ಯಕ್ರಮ ಇರಲಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅಧ್ಯಕ್ಷತೆಯಲ್ಲಿ ಬುಧವಾರ ಪೂರ್ವ ಸಿದ್ಧತಾ ಸಭೆ ನಡೆಯಿತು. ಆಗಸ್ಟ್ 15ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲು ಸಭೆ ನಿರ್ಧರಿಸಿದೆ. ಕೋವಿಡ್ ಸೋಂಕು ನಿರ್ವಹಣೆಯಲ್ಲಿ
ತೊಡಗಿಸಿಕೊಂಡಿರುವ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯಿಂದ ತಲಾ ಒಬ್ಬರನ್ನು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನಿಸಿ ಗೌರವಿಸಲು ನಿರ್ಧರಿಸಲಾಗಿದೆ.
ಕೋವಿಡ್ ನಿಯಂತ್ರಣದಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಎಲ್ಲರನ್ನು ಸನ್ಮಾನಿಸಲು ಸಾಧ್ಯವಾಗದ ಕಾರಣ ಪ್ರಾತಿ ನಿಧಿಕವಾಗಿ ಎರಡೂ ಇಲಾಖೆಯಿಂದ ತಲಾ ಒಬ್ಬರನ್ನು ಆಯ್ಕೆ ಮಾಡಿ ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರನ್ನು ಆರೋಗ್ಯ ಇಲಾಖೆ ವತಿಯಿಂದ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುವುದು. ಸ್ಯಾನಿಟೈಸರ್ ವ್ಯವಸ್ಥೆ ಇರಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಆ.15ರಂದು ಬೆಳಗ್ಗೆ 9 ಗಂಟೆಗೆ ಉಪ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ತಲುಪಿಸು ವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ಉಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಅಧಿಕಾರಿಗಳು ಉಪಸ್ಥಿತರಿದ್ದರು.