Advertisement

ಪ್ರತ್ಯೇಕ ರಾಜ್ಯ ಬೇಡ; ಅಭಿವೃದ್ಧಿ ಬೇಕು!

03:09 PM Aug 02, 2018 | Team Udayavani |

ರಾಯಚೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆ.2ರಂದು ಬಂದ್‌ಗೆ ಕರೆ ನೀಡಿರುವುದಕ್ಕೆ ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳಿಂದಲೇ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ನಮಗೆ ಪ್ರತ್ಯೇಕ ರಾಜ್ಯ ಬೇಡ, ಅಭಿವೃದ್ಧಿ ಬೇಕು ಎಂಬ ಘೋಷವಾಕ್ಯದಡಿ ಸಂಘಟನೆಗಳು ಹೋರಾಟ ಹಮ್ಮಿಕೊಂಡಿವೆ.

Advertisement

ರಾಜಕೀಯ ಪ್ರಲೋಭೆಗೆ ಸಿಲುಕಿ ನಮ್ಮನ್ನು ಹತ್ತಿಕ್ಕುವ ಹುನ್ನಾರ ನಡೆದಿದ್ದು, ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದು ಎಚ್ಚರಿಸಿರುವ ಸಂಘಟನೆಗಳು, ಆ.2ರಂದು ನಡೆಯಲಿರುವ ಉ-ಕ ಬಂದ್‌ಗೆ ಬೆಂಬಲಿಸದಿರಲು ನಿರ್ಧರಿಸಿವೆ. ಅದಕ್ಕೆ ಪರ್ಯಾಯವಾಗಿ, 371 (ಜೆ) ಕಲಂ ಸಮರ್ಪಕ ಅನುಷ್ಠಾನ ಮೂಲಕ ಈ ಭಾಗದ ಪ್ರಗತಿಗೆ ಸರ್ಕಾರ ಮುಂದಾಗಲಿ ಎಂದು ಆಗ್ರಹಿಸಿ ಹೋರಾಟ ನಡೆಸಲು ನಿರ್ಧರಿಸಿವೆ.

ನಗರದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಸಿರುವ 20ಕ್ಕೂ ಅಧಿಕ ಸಂಘಟನೆಗಳ ಮುಖಂಡರು, ಸರ್ಕಾರ ಈ ಭಾಗವನ್ನು ನಿರ್ಲಕ್ಷಿಸಿರುವುದರಲ್ಲಿ ಸಂದೇಹವಿಲ್ಲ. ಆದರೆ, ಅದಕ್ಕೆ ಪ್ರತ್ಯೇಕ ರಾಜ್ಯ ಪರಿಹಾರವಲ್ಲ. ಈ ಭಾಗದ ಜನಪ್ರತಿನಿಧಿ ಗಳ ನ್ಯೂನತೆ ಅಡಗಿದೆ. ಅಲ್ಲದೇ, ಮುಂಬಯಿ ಕರ್ನಾಟಕ ಭಾಗದ ಜನ ನಮ್ಮ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ನಾವು ಬಲಿಪಶು ಆಗಲಾರೆವು ಎಂದು ಮುಖಂಡರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡ ಸಭೆ ನಡೆಸಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡದಂಥ ಆಯ್ದ ಜಿಲ್ಲೆಗಳ ನಾಯಕರೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಆದರೆ, ಉತ್ತರ ಕರ್ನಾಟಕ ಎಂದರೆ ಹೈ-ಕ ಭಾಗವೂ ಸೇರಿದೆ ಎಂಬ ಕಲ್ಪನೆ ಅವರಿಗಿಲ್ಲದಿರುವುದು ವಿಷಾದನೀಯ. ಹೀಗಾಗಿ ಪ್ರತ್ಯೇಕ ರಾಜ್ಯಕ್ಕಿಂತ ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡಲಿ ಎಂದು ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಗಳ
ಮುಖಂಡರು ತಿಳಿಸಿದ್ದಾರೆ, 

ಒಕ್ಕೊರಲ ಧ್ವನಿ 
ಸಂಘಟನೆಗಳ ರಾಜ್ಯಾಧ್ಯಕ್ಷರು ಕರೆ ನೀಡಿದ್ದಾರೆ ಎಂಬ ಕಾರಣಕ್ಕೆ ಈ ಭಾಗಕ್ಕೆ ಸಂಭಂಧಿಸಿರದಿದ್ದರೂ ಅನೇಕ
ಹೋರಾಟಗಳಿಗೆ ಸಂಘಟನೆಗಳು ಬೆಂಬಲಿಸಿ ಪ್ರತಿಭಟಿಸಿವೆ. ಅಖಂಡ ಕರ್ನಾಟಕದ ಕಲ್ಪನೆಯಲ್ಲಿಯೇ ಕಾವೇರಿ ನದಿ ನೀರು ಹಂಚಿಕೆ, ಮಹದಾಯಿ, ಕಳಸಾ ಬಂಡೂರಿಯಂಥ ಹೋರಾಟಗಳಿಗೆ ಬೆಂಬಲ ನೀಡಿವೆ. ಆದರೆ, ಪ್ರಾದೇಶಿಕತೆ
ವಿಚಾರಕ್ಕೆ ಬಂದಾಗ ಸಂಘಟನೆಗಿಂತ ವೈಯಕ್ತಿಕ ಹಿತಾಸಕ್ತಿ ಮುಖ್ಯ ಎನ್ನುವುದು ಸಂಘಟನೆಗಳ ಅನಿಸಿಕೆ. ಹೀಗಾಗಿ ರಾಜ್ಯಾಧ್ಯಕ್ಷರು ಸೂಚನೆ ನೀಡದಿದ್ದರೂ ನಾವು ಪ್ರತ್ಯೇಕತೆ ವಿರೋ ಧಿಸಿ ಹೋರಾಟ ಮಾಡುವುದಾಗಿ ಎಲ್ಲ ಸಂಘಟನೆಗಳ ಮುಖಂಡರು ಒಕ್ಕೊರಲ ಧ್ವನಿ ಎತ್ತಿದ್ದಾರೆ.

Advertisement

ದಕ್ಷಿಣ ಕರ್ನಾಟಕ ಎಂದರೆ ಬೆಂಗಳೂರು, ಉತ್ತರ ಕರ್ನಾಟಕ ಎಂದರೆ ಬೆಳಗಾವಿ, ಹೈ-ಕ ಎಂದರೆ ಕಲಬುರಗಿ ಎಂಬ ತಪ್ಪು ಕಲ್ಪನೆ ನಿವಾರಣೆಯಾಗಬೇಕು. ಎಲ್ಲ ಜಿಲ್ಲೆಗಳಿಗೂ ಸಮಾನ ಪ್ರಾತಿನಿಧ್ಯ ಸಿಗಬೇಕು. ಈ ಭಾಗದ ಹಿಂದುಳಿಯುವಿಕೆಗೆ ಪ್ರತ್ಯೇಕ ರಾಜ್ಯ ಪರಿಹಾರವಲ್ಲ. ಎಲ್ಲರನ್ನು ಗಣನೆಗೆ ತೆಗೆದುಕೊಂಡು ಅಭಿವೃದ್ಧಿಗೆ ಮುಂದಾಗಬೇಕು. ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಾನ ಪ್ರಾತಿನಿಧ್ಯ ನೀಡಬೇಕು. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ನೀಡಿದ ಬಂದ್‌ಗೆ ನಮ್ಮ ವಿರೋಧವಿದೆ. 371 (ಜೆ) ಸಮರ್ಪಕ ಅನುಷ್ಠಾನಕ್ಕಾಗಿ ನಾವು ಹೋರಾಟ ಹಮ್ಮಿಕೊಂಡಿದ್ದೇವೆ.  ಡಾ| ರಜಾಕ್‌ ಉಸ್ತಾದ್‌, ಹೈ-ಕ ಹೋರಾಟ ಸಮಿತಿ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next