ಬೆಂಗಳೂರು: ಕೋವಿಡ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಡಿಸೆಂಬರ್ ಅಂತ್ಯದವರೆಗೂ ಯಾವುದೇ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳು ಆರಂಭಿಸುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಶಾಲಾರಂಭಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಮ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ವರೆಗೆ ಶಾಲೆ ಆರಂಭ ಮಾಡದಿರುವ ಬಗ್ಗೆ ಅಭಿಪ್ರಾಯ ಕೇಳಿಬಂದಿದೆ. ಒಂದರಿಂದ 8ನೇ ತರಗತಿವರೆಗೆ ಈ ವರ್ಷ ಶಾಲೆ ಆರಂಭಿಸುವ ಯೋಚನೆಯೇ ಮಾಡಿಲ್ಲ ಎಂದು ಹೇಳಿದರು.
ಪಿಯುಸಿ ಹಾಗೂ ಪ್ರೌಢ ಶಾಲಾ ಆರಂಭಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. 1 ರಿಂದ 8ನೇ ತರಗತಿ ಮಕ್ಕಳಿಗೆ ವಿವಿಧ ಮಾರ್ಗದಲ್ಲಿ ಕಲಿಕೆ ನಡೆಯುತ್ತಿದೆ. ಈ ಮಕ್ಕಳಿಗೆ ಶಾಲಾ ತರಗತಿ ನಡೆಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಇಡೀ ವರ್ಷ ಆ ಮಕ್ಕಳಿಗೆ ಶಾಲಾರಂಭಕ್ಕಿಂತ ಪ್ರೌಢಶಾಲೆ ಹಾಗೂ ಪಿಯು ತರಗತಿ ಆದಷ್ಟು ಬೇಗ ತೆರೆಯಬೇಕಿದೆ. ಡಿಸೆಂಬರ್ ನಲ್ಲಿ ನಿರ್ಧಾರ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ:ಡಿಸೆಂಬರ್ ನಲ್ಲಿ ಶಾಲೆ ತೆರೆಯುವುದು ಸರಿಯಲ್ಲ: ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಶಿಫಾರಸು
ಕಳೆದ ವರ್ಷ 1 ರಿಂದ 9ರ ವರೆಗೆ ಪರೀಕ್ಷೆ ಮಾಡದೇ ತೇರ್ಗಡೆ ಮಾಡಿದ್ದೇವೆ. ಅದೇ ಮಾದರಿಯನ್ನು ಈ ಬಾರಿಯೂ ಅನುಷ್ಠಾನ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದರು.