ಲಕ್ನೋ: ಜ್ಞಾನವಾಪಿ ಮಸೀದಿ ಆವರಣದೊಳಗಿನ ನೆಲಮಾಳಿಗೆಯಲ್ಲಿರುವ ಮುಚ್ಚಿದ ಕೋಣೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿರುವ ವಾರಾಣಸಿ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅಂಜುಮಾನ್ ಇಂತೆಝಾಮಿಯಾ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಲು ನಿರಾಕರಿಸಿದ್ದು, ನೆಲಮಾಳಿಗೆಯಲ್ಲಿನ ಪೂಜೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:Uttara Kannada;ಕೋಣೆಮನೆಯಿಂದ ಭಟ್ಕಳದಲ್ಲಿ ಕೋಮುಗಲಭೆ ಸೃಷ್ಟಿಸುವ ಹುನ್ನಾರ: ಆರ್.ಎಚ್.ನಾಯ್ಕ
ಜ್ಞಾನವಾಪಿ ಮಸೀದಿ ಆವರಣದ ಹೊರಗೆ ಮತ್ತು ಒಳಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ನ ಏಕ ಸದಸ್ಯ ಪೀಠದ ಜಸ್ಟೀಸ್ ರೋಹಿತ್ ರಂಜನ್ ಅಗರ್ವಾಲ್ ಆದೇಶ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಫೆ.6ರಂದು ನಡೆಸುವುದಾಗಿ ತಿಳಿಸಿದ್ದಾರೆ.
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯ ಸೆಲ್ಲರ್ ನಲ್ಲಿ ಹಿಂದೂಗಳಿಗೆ ಪೂಜೆ ಅವಕಾಶ ನೀಡಿರುವ ವಾರಾಣಸಿ ಜಿಲ್ಲಾ ನ್ಯಾಯಾಧೀಶರ ತೀರ್ಪನ್ನು ಪ್ರಶ್ನಿಸಿ ಮಸೀದಿ ಸಮಿತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸುಪ್ರೀಂಕೋರ್ಟ್ ಅಲಹಾಬಾದ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿತ್ತು.
ವಾರಾಣಸಿ ಜಿಲ್ಲಾ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಯಾವುದೇ ಆದೇಶ ಹೊರಡಿಸಲು ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿದ್ದು, ಮಸೀದಿ ಸಮಿತಿ ಜನವರಿ 17ರ ಆದೇಶವನ್ನ ಪ್ರಶ್ನಿಸಿಲ್ಲ. ಈ ನಿಟ್ಟಿನಲ್ಲಿ ಜ್ಞಾನವಾಪಿ ಮಸೀದಿ ನೆಲಮಾಳಿಗೆಯ ಸೆಲ್ಲರ್ ನಲ್ಲಿ ಪೂಜೆಗೆ ಅವಕಾಶ ನೀಡಿರುವ ಜಿಲ್ಲಾ ಕೋರ್ಟ್ ನ ನಿರ್ಧಾರವನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.