Advertisement

ನಾಯಕತ್ವ ಬಿಡುವ ಪ್ರಶ್ನೆಯೇ ಇಲ್ಲ: ತರಂಗ

07:20 AM Sep 05, 2017 | Team Udayavani |

ಕೊಲಂಬೊ: ಭಾರತದೆದುರು ಏಕದಿನ ಸರಣಿಯಲ್ಲಿ ಅನುಭವಿಸಿದ 5-0 ಸರಣಿ ಸೋಲಿನ ಬಳಿಕ ಮಾಧ್ಯಮಗಳ ಜತೆ ಮಾತಾಡಿದ ಶ್ರೀಲಂಕಾ ತಂಡದ ನಾಯಕ ಉಪುಲ್‌ ತರಂಗ, ನಾಯಕತ್ವ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Advertisement

“ನಾಯಕತ್ವ ಬಿಡಲು ಕಾರಣಗಳೇ ಇಲ್ಲ. ತಂಡ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ಮುಂದಿನ ಆಯ್ಕೆ ಸಮಿತಿ ಸೂಕ್ತ ನಿರ್ಣಯವೊಂದನ್ನು ತೆಗೆದುಕೊಳ್ಳಲಿದೆ. ನಾವು ಚೆನ್ನಾಗಿ ಆಡಲಿಲ್ಲ. ಕಳೆದ 2 ವರ್ಷಗಳಿಂದಲೂ ಕಳಪೆ ಪ್ರದರ್ಶನವೇ ಪುನರಾವರ್ತನೆಯಾಗುತ್ತಿದೆ. ಆಟಗಾರರು ಮೊದಲು ಸೋಲಿನ ಮನಸ್ಥಿತಿಯಿಂದ ಹೊರಬೇಕಿದೆ. ಹೇಗೆ ಚೆನ್ನಾಗಿ ಆಡಬಹುದು, ಯಾವ ವಿಭಾಗದಲ್ಲೆಲ್ಲ ಎಡವಿದ್ದೇವೆ ಎಂಬುದನ್ನು ಅವಲೋಕಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ…’ ಎಂದು ತರಂಗ ಅಭಿಪ್ರಾಯಪಟ್ಟರು.

“ಸ್ಥಿರ ಪ್ರದರ್ಶನ ನೀಡುವಲ್ಲಿ ನಾವು ವಿಫ‌ಲರಾಗಿದ್ದೇವೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌… ಮೂರೂ ಕಳಪೆಯಾಗಿದೆ. ಈ ಸರಣಿಯಲ್ಲಂತೂ ನಮ್ಮದು ತೀರಾ ಕೆಳಮಟ್ಟದ ಪ್ರದರ್ಶನವಾಗಿತ್ತು. ನಮ್ಮ ಬ್ಯಾಟಿಂಗ್‌ ಸ್ಥಿತಿಯನ್ನು ನೋಡಿ ಬಹಳ ಬೇಸರವಾಗಿದೆ. ಭಾರತ ಸರಣಿಯುದ್ದಕ್ಕೂ ಸ್ಥಿರವಾದ ಆಟವಾಡಿತು. ಅವರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬಹಳಷ್ಟು ರನ್‌ ಪೇರಿಸಿದರು. ನಾವು ದೊಡ್ಡ ಮೊತ್ತ ದಾಖಲಿಸುವಲ್ಲಿ ಸಂಪೂರ್ಣವಾಗಿ ವಿಫ‌ಲರಾದೆವು. ಒಮ್ಮೆಯೂ 250ರ ಗಡಿ ದಾಟಲಿಲ್ಲ…’ ಎಂದು ವಿಷಾದಿಸಿದರು.

“ವಿರಾಟ್‌ ಕೊಹ್ಲಿ ಓರ್ವ ಆನುಭವಿ ಆಟಗಾರ. ಅವರಿಂದ ನಾವು ಸಾಕಷ್ಟು ಕಲಿಯಬೇಕಿದೆ. ಕೊಹ್ಲಿಯ ಬ್ಯಾಟಿಂಗ್‌ ನಮ್ಮವರಿಗೊಂದು ಪಾಠ…’ ಎಂದೂ ತರಂಗ ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next