ಎಚ್.ಡಿ.ಕೋಟೆ: ಪ್ರತಿ ತಿಂಗಳ ಪಡಿತರ ಪಡೆದುಕೊಳ್ಳಲು 15 ದಿನ ಮುಂಚಿತವಾಗಿ ಬಯೋಮೆಟ್ರಿಕ್‌ಗೆ ಹೆಬ್ಬೆರಳು ನೀಡಬೇಕು. ಬಳಿಕ ನ್ಯಾಯಬೆಲೆ ಅಂಗಡಿ ಮಾಲೀಕರು ಹೇಳುವ ತಿಂಗಳಲ್ಲಿ ಒಂದೇ ದಿನ 3 ತಾಸಿನೊಳಗೆ ಪಡಿತರ ಪಡೆಯದಿದ್ದರೆ ಆ ತಿಂಗಳ ಆಹಾರ ಪದಾರ್ಥ ಇಲ್ಲ. ಬಯೋಮೆಟ್ರಿಕ್‌ಗೆ ಮೊದಲೇ ಹೆಬ್ಬೆರಳು ನೀಡಿರುವುದರಿಂದ ಪಡಿತರದಾರರ ಆಹಾರ ಮಾತ್ರ ಸರ್ಕಾರದಿಂದ ವಿತರಣೆಯಾಗಿರುವುದಾಗಿ ದಾಖಲಾಗಿರುತ್ತದೆ.
ಇದು ಎಚ್.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ದೇವಲಾಪುರ ಗ್ರಾಮದ ಪಡಿತರದಾರರ ಅಳಲು. ಗ್ರಾಮದಲ್ಲಿ ಬಹುಸಂಖ್ಯೆಯಲ್ಲಿ ಬಡಜನರು ವಾಸಿಸುತ್ತಿದ್ದು, ಜೀವನೋಪಾಯಕ್ಕಾಗಿ ನಿತ್ಯ ಕೂಲಿಗಾಗಿ ತೆರಳುತ್ತಾರೆ. ಪ್ರತಿಯೊಬ್ಬರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.
ಪಡಿತರ ದುರುಪಯೋಗ: ಸರ್ಕಾರ ಬಿಪಿಎಲ್ ಪಡಿತರದಾರರಿಗೆ ಪ್ರತಿ ತಿಂಗಳು ಇಂತಿಷ್ಟು ಪ್ರಮಾಣದ ಪಡಿತರ ವಿತರಿಸುತ್ತದೆ. ಪ್ರತಿ ತಿಂಗಳು ಕಾರ್ಡ್‌ದಾರರಿಂದ ಬಯೋಮೆಟ್ರಿಕ್ ಪಡೆದುಕೊಳ್ಳುತ್ತಿದ್ದಂತೆಯೇ ಅವರ ಪಡಿತರ ವಿತರಿಸಬೇಕು ಎಂಬ ನಿಯಮ ಇದೆ. ಆದರೆ, ದೇವಲಾಪುರದಲ್ಲಿ ನ್ಯಾಯಬೆಲೆ ಪಡಿತರ ವಿತರಕ ಗುರುಸ್ವಾಮಿ ಇದನ್ನು ಪಾಲಿಸದೇ ಪಡಿತರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಡಿತರ ವಿತರಣೆಗೂ 15 ದಿನ ಮುಂಚೆ ಬಯೋಮೆಟ್ರಿಕ್ ದಾಖಲಿಸಿಕೊಳ್ಳುವ ವಿತರಕ ಗುರುಸ್ವಾಮಿ, ವಾರ ಇಲ್ಲವೇ 15 ದಿನಗಳಲ್ಲಿ ಪಡಿತರ ನೀಡುವುದಾಗಿ ಹೇಳುತ್ತಾರೆ. ಹೆಬ್ಬೆರಳು ಗುರುತು ನೀಡುತ್ತಿದ್ದಂತೆಯೇ ದಾಖಲೆಯಲ್ಲಿ ಪಡಿತರ ವಿತರಣೆಯಾಗಿರುತ್ತದೆ. ಆದರೆ, ಕಾರ್ಡ್‌ದಾರರಿಗೆ ಮಾತ್ರ ಆಹರ ದೊರೆತಿರುವುದಿಲ್ಲ.
ಪಡಿತರದಾರರಿಗೆ ಅನ್ಯಾಯ: ನ್ಯಾಯಬೆಲೆ ಅಂಗಡಿ ಮಾಲೀಕ ಗುರುಸ್ವಾಮಿ ತಿಂಗಳಲ್ಲಿ ಯಾವುದೋ ಒಂದು ದಿನ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ತನಕ ಅಂದರೆ ತಿಂಗಳಲ್ಲಿ ಕೇವಲ 3 ತಾಸು ಮಾತ್ರ ಪಡಿತರ ವಿತರಿಸುತ್ತಿದ್ದಾರೆ. ನಂಬರ್ ಬರುವ ಮಂದಿಗೆ ಪಡಿತರ ನೀಡದೆ ನಾವು ವಿತರಿಸುವ ದಿನವೇ ಬರಬೇಕಿತ್ತು, ಈಗ ನಿಮ್ಮ ಪಡಿತರ ಸರ್ಕಾರಕ್ಕೆ ವಾಪಸ್ಸಾಗಿದೆ. ಮುಂದಿನ ತಿಂಗಳು ಪಡೆದುಕೊಳ್ಳುವಂತೆ ಸಬೂಬು ಹೇಳಿ ಕಳುಹಿಸುತ್ತಾರೆ ಎಂದು ಅನ್ಯಾಯಕ್ಕೊಳಗಾದ ಜನರು ಅವಲತ್ತುಕೊಂಡಿದ್ದಾರೆ.
ವಿಷಯ ತಿಳಿದು ಆಹಾರ ಇಲಾಖೆ ಅಧಿಕಾರಿ ವೇದಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರನ್ನು ಸರದಿಯಲ್ಲಿ ನಿಲ್ಲಿಸಿ ಪಡಿತರ ವಿತರಿಸದೇ ಬಯೋಮೆಟ್ರಿಕ್ ಸಹಿ ಸಂಗ್ರಹಿಸುತ್ತಿದ್ದ ದೃಶ್ಯ ಕಂಡು ಬಂತು. ಈ ವೇಳೆ, ಪಡಿತರದಾರರು ತಮ್ಮ ಅಳಲು ತೋಡಿಕೊಂಡು ಆಹಾರ ಪದಾರ್ಥ ವಂಚನೆಯ ಸುದ್ದಿ ಎಳೆಎಳೆಯಾಗಿ ಬಿಡಿಸಿದರು 3-4 ತಿಂಗಳಿಂದ ಸೀಮೆಎಣ್ಣೆ ವಿತರಿಸುತ್ತಿಲ್ಲ, ತಿಂಗಳಲ್ಲಿ ಒಂದು ದಿನ ಕೇವಲ 3 ಗಂಟೆ ಅವಧಿಯಲ್ಲಿ ಆಹಾರ ಪದಾರ್ಥ ಪಡೆದುಕೊಳ್ಳಬೇಕು. ಕೂಲಿ ಮಾಡುವ ಮಂದಿ ನಾವು ಹೇಳಿದ ದಿನವೇ ಬರಲು ಸಾಧ್ಯವೇ?, ಆ ವೇಳೆ ಮೀರಿದರೆ ನಮ್ಮ ತಿಂಗಳ ಪಡಿತರ ಸಿಗುವುದಿಲ್ಲ ಎಂದು ಅವಲತ್ತುಕೊಂಡರು.
ಹೋರಾಟದ ಎಚ್ಚರಿಕೆ: ಸರ್ಕಾರದ ನಿಯಮಾವಳಿಯಂತೆ ಪ್ರತಿ ತಿಂಗಳು 10 ದಿನದ ತನಕ ಪಡಿತರ ವಿತರಿಸಬೇಕು. ಬಯೋಮೆಟ್ರಿಕ್ ಪಡೆದುಕೊಳ್ಳುತ್ತಿದ್ದಂತೆಯೇ ಪಡಿತರ ವಿತರಿಸಬೇಕು ಎಂಬ ನಿಯಮ ಇಲ್ಲಿ ಪಾಲನೆಯಾಗುತ್ತಿಲ್ಲ. ಈ ಅವ್ಯವಸ್ಥೆ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷ ಸೋಮೇಶ್, ನಂಜುಂಡಸ್ವಾಮಿ, ನಾಗೇಗೌಡ, ಚಂದ್ರಮ್ಮ, ಮಂಜು, ಕೆಂಡಗಣ್ಣಸ್ವಾಮಿ, ಜಯಮ್ಮ, ನಾಗಮ್ಮ ಮತ್ತಿತರರು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.