ಮುಂಡಗೋಡ: ತಾಲೂಕಿನಲ್ಲಿ ರೈತ ಸಮುದಾಯದ ಮಳೆರಾಯನ ಭರವಸೆಯೊಂದಿಗೆ ಗೋವಿನಜೋಳ ಹಾಗೂ ಭತ್ತ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡಿದ ಗದ್ದೆಗಳಿಗೆ ಬೋರವೆಲ್‌ಗಳಿಂದ ಜಟ್ ಮೂಲಕ ನೀರು ಹಾಯಿಸಿದರೆ ನೀರಿನ ಸೌಕರ್ಯ ಇಲ್ಲದ ರೈತನು ಮಳೆಗಾಗಿ ಹಾತೊರೆಯುತ್ತಿದ್ದಾನೆ.
ಕಳೆದ ಹತ್ತು ದಿನಗಳ ಹಿಂದೆ ತಾಲೂಕಿನಲ್ಲಿ ಉತ್ತಮ ಹದ ಮಳೆಯಾಗಿತ್ತು. ಇದರಿಂದಾಗಿ ತಾಲೂಕಿನ ಬಹುತೇಕ ರೈತರು ತಮ್ಮ ಹೊಲ ಗದ್ದೆಗಳನ್ನು ಸ್ವತ್ಛಗೊಳಿಸಿ ಗೋವಿನಜೋಳ ಹಾಗೂ ಭತ್ತ ಬೆಳೆಯುವ ರೈತರು ಒಣ ಬಿತ್ತನೆ ಮಾಡಿದ್ದರು. ಬಿತ್ತನೆಯಾದ ನಂತರ ಮಳೆಯಾಗುತ್ತದೆ. ಎಂಬ ಭರವಸೆಯೊಂದಿಗೆ ಶೇ.30 ರಿಂದ 35 ರಷ್ಟು ಗೋವಿನ ಜೋಳ ಹಾಗೂ ಭತ್ತ ಶೇ.10 ರಿಂದ 13 ರಷ್ಟು ರೈತರು ಒಣ ಭೂಮಿಯಲ್ಲಿ ಬೀಜ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿ ಒಂದು ವಾರ ಕಳೆದರು ಮಳೆಯಾಗದೆ ಬಿತ್ತನೆ ಮಾಡಿದ್ದ ಗದ್ದೆಗಳಿಗೆ ಬೋರ್‌ವೆಲ್ ಇದ್ದವರು ಜಟ್‌ಗಳ ಮೂಲಕ ನೀರು ಹಾಯಿಸುತ್ತಿದ್ದಾರೆ. ಮಳೆಗೆ ಅವಲಂಬಿಸಿ ಬಿತ್ತನೆ ಮಾಡಿದ ರೈತರು ಮಳೆಯಿಲ್ಲದೆ ಹಾಕಿದ ಬೀಜ ಗೊಬ್ಬರ ಮಣ್ಣು ಪಾಲಾಗುತ್ತದೆ ಎಂಬ ಆತಂಕದಲ್ಲಿ ರೈತರು ಇದ್ದಾರೆ. ಒಣ ಬಿತ್ತನೆ ಮಾಡಿದ ರೈತರು ತಮ್ಮ ಹೊಲದಲ್ಲಿ ತೇವಾಂಶದ ಕೊರತೆಯಿಂದಾಗಿ ರೈತರು ಆಕಾಶದತ್ತ ಮುಖಮಾಡಿ ಮಳೆಯ ಬರುವಿಕೆಯನ್ನು ನೋಡುತ್ತಿದ್ದಾರೆ.
ಬಿತ್ತನೆಗೆ ಹಿನ್ನೆಡೆ: ಜೂನ್ ಮೊದಲವಾರ ಮಳೆಯಾಗುತ್ತದೆ ಎಂಬ ಭಾವನೆಯಿಂದ ಕೆಲವು ರೈತರು ಹೊಲಗಳ ಸ್ವತ್ಛತೆ ಮಾಡಿಕೊಂಡು ಬಿತ್ತನೆಗೆ ತಯಾರಿ ಇಟ್ಟುಕೊಂಡಿದ್ದರು. ಆದರೆ ಮಳೆಯಾಗದ ಕಾರಣ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದುದ್ದರಿಂದ ಬೋರವೆಲ್ ಮೂಲಕ ಜಟ್ ಅಳವಡಿಸಿ ಭೂಮಿ ತೇವಾಂಶಗೊಳಿಸಿ ಕೆಲವು ಕಡೆ ಬಿತ್ತನೆ ಮಾಡಲಾಗಿದೆ.
ಕಳೆದ ಒಂದು ವಾರದ ಹಿಂದೆ ಗೋವಿನ ಜೋಳ ಹಾಗೂ ಭತ್ತ ಬಿತ್ತನೆ ಮಾಡಿದ್ದೇವೆ. ಆದರೆ ಮಳೆಯಿಲ್ಲದ ಭೂಮಿಗೆ ತೇವಾಂಶ ಕಡಿಮೆಯಾದ ಕಾರಣ ಬಿತ್ತದ ಬೀಜ ಗೊಬ್ಬರ ಮಣ್ಣು ಪಾಲಾಗಿದೆ. ಇನ್ನೆರಡು ದಿನಗಳಲ್ಲಿ ಮಳೆ ಬಾರದೆ ಇದ್ದರೆ ರೈತರಿಗೆ ಮತ್ತೆ ತೊಂದರೆ ಕಟ್ಟಿಟ್ಟಬುತ್ತಿ. –
ಮಂಜು ಕೋಣನಕೇರಿ, ಸನವಳ್ಳಿ ರೈತ
ತಾಲೂಕಿನಲ್ಲಿ ಶೇ.30 ರಿಂದ 35 ರಷ್ಟು ಗೋವಿನ ಜೋಳ ಹಾಗೂ ಶೇ.12 ರಷ್ಟು ಭತ್ತವನ್ನು ರೈತರು ಒಣ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೊರತೆಯಿಂದ ರೈತರಿಗೆ ತೊಂದರೆ ಉಂಟಾಗಿದೆ. ಈ ದಿನದಲ್ಲಿ ಗದ್ದೆಗಳಿಗೆ ಮಳೆ ನೀರಿನ ಅವಶ್ಯಕತೆ ಇದೆ. –
ಎಂ.ಎಸ್. ಕುಲಕರ್ಣಿ, ಕೃಷಿ ಸಹಾಯಕ ನಿರ್ದೇಶಕ