ಕಮಲನಗರ: ಈ ಮೊದಲು ಅತಿವೃಷ್ಟಿ-ಅನಾವೃಷ್ಟಿ ಎರಡನ್ನೂ ರೈತ ಸಮುದಾಯ ಅಕ್ಷರಶಃ ನಲುಗಿತ್ತು. ಆದರೆ ಇದೀಗ ತಾಲೂಕಿನಾದ್ಯಂತ ಕಳೆದ ಮೂರ್‍ನಾಲ್ಕು ವಾರಗಳಿಂದ ಮಳೆ ಬಾರದಿರುವುದು ರೈತರನ್ನು ಚಿಂತೆಗೀಡು ಮಾಡಿದ್ದು, ಚೆನ್ನಾಗಿ ಬೆಳೆದಿದ್ದ ಬೆಳೆಗಳೆಲ್ಲ ಕಳೆ ಕಳೆದುಕೊಂಡು ಒಣಗುತ್ತಿವೆ. ಹೀಗಾಗಿ ರೈತರು ಮತ್ತೆ ಆಗಸದತ್ತ ಮುಖ ಮಾಡಿ ಮೇಘರಾಜನಿಗಾಗಿ ಕಾಯುತ್ತಿದ್ದಾರೆ.
ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಸುರಿದ ಕಾರಣ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಉತ್ತಮ ಮಳೆ ಬಿದ್ದಿರುವುದರಿಂದ ರೈತರು ಬಿತ್ತನೆ ಮಾಡಿ, ಬೆಳೆದ ಬೆಳೆಗೆ ಔಷಧ ಸಿಂಪಡಿಸಿ ಉತ್ತಮ ಇಳುವರಿ-ಉತ್ಪನ್ನದ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಮಳೆ ಕೈಕೊಟ್ಟಿದ್ದು, ಈ ಆಸೆಗೆ ತಣ್ಣೀರೆರಚಿದಂತಾಗಿದೆ.
ಮುಂಗಾರು ಹಂಗಾಮಿನ ಸೋಯಾ, ತೊಗರಿ, ಹೆಸರು, ಉದ್ದು ಸೇರಿದಂತೆ ಎಲ್ಲ ಬೆಳೆಗಳು ಚೆನ್ನಾಗಿ ಬೆಳೆದಿವೆ. ಈಗ ಬಹುತೇಕ ಬೆಳೆಗಳು ಹೂ ಬಿಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದು, ಮಳೆ ಅವಶ್ಯಕತೆ ಇದೆ. ಒಂದು ವೇಳೆ ಮಳೆ ಬಾರದೆ ಇದ್ದರೆ ಬೆಳೆಗಳು ಸಂಪೂರ್ಣ ಬಾಡುವ ಮೂಲಕ ನೆಲಕಚ್ಚುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಬಾಡಿವೆ ಬೆಳೆಗಳು: ಒಂದು ತಿಂಗಳಿಂದ ಬಾರದ ಮಳೆಗೆ ಸೋಯಾ, ತೊಗರಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳು ಬಾಡುತ್ತಿವೆ. ತಕ್ಷಣ ಮಳೆ ಸುರಿಯದಿದ್ದರೆ ಬೆಳೆಗಳು ಸಂಪೂರ್ಣ ಒಣಗಿ ಹೋಗುವ ಭಯ ರೈತರನ್ನು ಅಕ್ಷರಶಃ ಚಿಂತೆಯ ಕಡಲಲ್ಲಿ ಮುಳುಗಿಸಿದೆ.
ಈಗಾಗಲೇ ಬೀಜ, ಗೊಬ್ಬರ, ಔಷಧ, ಕೂಲಿ ಸೇರಿ ಪ್ರತಿ ಎಕರೆಗೆ ಅಂದಾಜು 15 ರಿಂದ 20 ಸಾವಿರ ರೂ. ಖರ್ಚು ಮಾಡಿದ್ದೇವೆ. ಆದರೆ ಮಳೆ ಅಭಾವದಿಂದ ರೈತರ ನಿರೀಕ್ಷೆಗಳೆಲ್ಲ ತಲೆ ಕೆಳಗಾಗಿವೆ. ನೀರಿನ ಕೊರೆತೆಯಿಂದ ಬೆಳೆಗಳು ಬಾಡುತ್ತಿದ್ದು, ಹೊಲದಲ್ಲಿನ ಬೆಳೆ ನೋಡಲು ಮನಸ್ಸೇ ಆಗುತ್ತಿಲ್ಲ ಎನ್ನುತ್ತಾರೆ ಖತಗಾಂವನ ರೈತ ಚನ್ನಬಸವಾ ಪಾಟೀಲ್. ಕೂಡಲೇ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ರೈತರ ನೆರವಿಗೆ ನಿಲ್ಲಬೇಕೆಂದು ಸೋನಾಳ ರೈತ ಅಂಕೋಶ ಹಣಮಶೆಟ್ಟೆ ಮನವಿ ಮಾಡಿದ್ದಾರೆ.
ತಾಲೂಕಿನಾದ್ಯಂತ ಕಳೆದ ಮೂರ್‍ನಾಲ್ಕು ವಾರಗಳಿಂದ ಮಳೆ ಬಾರದ ಹಿನ್ನೆಲೆಯಲ್ಲಿ ಹೊಲದಲ್ಲಿನ ಬೆಳೆ ಸಂಪೂರ್ಣ ಒಣಗುವ ಹಂತದಲ್ಲಿವೆ. ಕೂಡಲೇ ಅ ಧಿಕಾರಿಗಳು ಸರ್ವೇ ಮಾಡಿ ವಿಮೆ ಕಂಪನಿಯಿಂದ ರೈತರಿಗೆ ಪರಿಹಾರ ಕೊಡಿಸಬೇಕು.
ಶ್ರೀರಂಗ ಪರಿಹಾರ
ಜಿಲ್ಲಾ ಉಪಾಧ್ಯಕ್ಷ, ರೈತ ಮೋರ್ಚಾ
2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಿದ್ದೇವೆ. ಆದರೆ ಕೆಲವರಿಗೆ ವಿಮೆ ಹಣ ಬಂದಿದ್ದು, ಇನ್ನೂ ಕೆಲವರಿಗೆ ಬಂದಿಲ್ಲ. ಅಲ್ಲದೇ ತೊಗರಿ ಬೆಳೆ ವಿಮೆ ಮಾಡಿಸಿದವರಿಗೆ ಕೇವಲ 40-50 ರೂ. ಖಾತೆಗೆ ಜಮೆ ಆಗಿದೆ. ಇದರಿಂದ ವಿಮೆ ಕಂಪನಿ ಮೇಲೆ ನಂಬಿಕೆ ಇಲ್ಲದಂತಾಗಿದೆ. ಕೂಡಲೇ ವಿಮೆ ಕಂಪನಿಯವರು ಸಮೀಕ್ಷೆ ನಡೆಸಿ ರೈತರ ಖಾತೆಗೆ ಬೆಳೆ ಹಾನಿ ಹಣ ಜಮೆ ಮಾಡಬೇಕು.
ಚನ್ನಬಸವಾ ಪಾಟೀಲ್
ಖತಗಾಂವ, ರೈತ
*ಮಹಾದೇವ ಬಿರಾದಾರ್