ನೆಲಮಂಗಲ: ತುಮಕೂರಿನಲ್ಲಿ ಚಿಕಿತ್ಸೆ ಸಿಗದೆ ಬೆಂಗಳೂರಿನ ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಗೆ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ ಆಗಿದ್ದು, ಗಂಡು ಮಗು ಮೃತ ಪಟ್ಟಿದೆ. ತಾಯಿ ಸ್ಥಿತಿ ಚಿಂತಾಜನಕವಾಗಿದೆ.
ಹೆರಿಗೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆ, ತುಮಕೂರು ಜಿಲ್ಲಾಸ್ಪತ್ರೆ ಸೇರಿದಂತೆ ನಾಲ್ಕು ಆಸ್ಪತ್ರೆಗೆ ತೆರಳಿದರೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಈ ಅವ್ಯವಸ್ಥೆಯಿಂದ ಮಗುವನ್ನು ಕಳೆದುಕೊಂಡಿದ್ದೇವೆ. ಇನ್ನೂ ತಾಯಿ ಅರ್ಪಿತಾ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಸಂಬಂಧಿಕರಾದ ಚಿಕ್ಕಹನುಮಂತರಾಯಪ್ಪ ಅಳಲು ತೋಡಿಕೊಂಡಿದ್ದಾರೆ.
ಅಲೆದಾಟ: ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ನಿವಾಸಿಯಾಗಿರುವ ಅರ್ಪಿತಾ ಹೆರಿಗೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶುಕ್ರವಾರ ಬೆಳಗ್ಗೆ ತುಮಕೂರಿನ ಜಿಲ್ಲಾಸ್ಪ ತ್ರೆಗೆ ಕಳುಹಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಚಿಕಿತ್ಸೆ ನೀಡಿ ಶನಿವಾರ ಏಕಾಏಕಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿವಿಲಾಸ್ ಹೆರಿಗೆ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ತುಮಕೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲೇ ಅರ್ಪಿತಾ ಗಂಡು ಮಗುವಿಗೆ ಜನ್ಮನೀಡಿದ್ದು, ಮಗು ಮೃತವಾಗಿದೆ. ಅರ್ಪಿತ ಸ್ಥಿತಿ ಚಿಂತಾಜನಕವಾಗಿದ್ದು, ತಕ್ಷಣ ಆ್ಯಂಬುಲೆನ್ಸ್ ಚಾಲಕ ನೆಲಮಂಗಲ ಆಸ್ಪ ತ್ರೆಗೆ ಕರೆತಂದಿದ್ದಾರೆ.
ನೆಲಮಂಗಲ ವೈದ್ಯರು ತುರ್ತು ಚಿಕಿತ್ಸೆ ನೀಡಿ ಕಳುಹಿಸಿ ದ್ದಾರೆ. ತುಮಕೂರಿನಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆಗಾಗಿ ಅಲೆದಾಡಿದ್ದೇವೆ ಎಂದು ಅರ್ಪಿತಾ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ನಮ್ಮ ನೆಲಮಂಗಲ ಆಸ್ಪತ್ರೆಗೆ ಬಂದಾಗಲೇ ತಾಯಿ ಸ್ಥಿತಿ ಚಿಂತಾಜನಕವಾ ಗಿದ್ದು ತಾಯಿ ಬದುಕಿಸುವ ಎಲ್ಲಾ ಪ್ರಯತ್ನ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಹೇಮಲತಾ ತಿಳಿಸಿದರು.