ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾಧಿಕಾರಿಗೆ ಅರ್ಜಿ ಹಾಕಿಕೊಂಡು ಮುಸಲ್ಮಾನ ಅಥವಾ ಕ್ರಿಶ್ಚಿಯನ್ ಆಗಿ ಮತಾಂತರವಾದರೆ ರಗಳೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಮುಜರಾಯಿ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು,ಸರಕಾರದ ನಿರ್ಧಾರಕ್ಕೆ ಡಿಕೆಶಿ ವಿರೋಧ ಮಾಡುತ್ತಿದ್ದು, ಅವರು ದೇವಸ್ಥಾನಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಡುತ್ತಾರೆ ಎಂದು ಹೇಳುವ ಮೊದಲು.ಜಿಲ್ಲಾಧಿಕಾರಿಗೆ ಅರ್ಜಿ ಹಾಕಿಕೊಂಡು ಮುಸಲ್ಮಾನ ಅಥವಾ ಕ್ರಿಶ್ಚಿಯನ್ ಆಗಿ ಮತಾಂತರವಾದರೆ ರಗಳೆ ಇಲ್ಲ ಎಂದರು.
ದೇವಸ್ಥಾನಗಳಿಗೆ ಸ್ವತಂತ್ರ ಕೊಟ್ಟರೆ ಇವರಿಗೆ ಏಕೆ ಉರಿ..? ಇಲ್ಲಿಯವರೆಗೆ ಚರ್ಚ್ ಗಳಿಗೆ, ಮಸೀದಿಗಳಿಗೆ ಸ್ವಾತಂತ್ರ್ಯ ಇದೆ. ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ಟ ತಕ್ಷಣ ಡಿಕೆಶಿ ಏಕೆ ಬೇಸರ ಮಾಡಿಕೊಂಡರು ನನಗೆ ಗೊತ್ತಿಲ್ಲ. ಗೋಹತ್ಯೆ ನಿಷೇಧ, ಮತಾಂತರ ವಿಷಯ ಬಂದಾಗ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಡಿಕೆಶಿ ಅವರು ಕೇವಲ ಮುಸಲ್ಮಾನರನ್ನು, ಕ್ರಿಶ್ಚಿಯನ್ನರನ್ನ ತೃಪ್ತಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳಿಗೆ ತೊಂದರೆ ಆದರೂ ಪರವಾಗಿಲ್ಲ ಎಂದು ಯೋಚನೆ ಮಾಡುತ್ತಿದ್ದಾರೆ. ಗೋ ಹತ್ಯೆ ಮಾಡುವ ವ್ಯಕ್ತಿಗಳ ಬಗ್ಗೆ ಕ್ರಮ ಕೈಗೊಳ್ಳಿ ಅಂದರೂ ಕೈಗೊಳ್ಳಲಿಲ್ಲ. ಗೋಹತ್ಯೆ ನಿಲ್ಲಿಸುವವರನ್ನು ಜೈಲಿಗೆ ಕಳುಹಿಸಿದರು. ಡಿಕೆಶಿ ಅವರು ಇಲ್ಲಿಯೂ ರಾಜಕಾರಣ ತಂದರೆ ನಾನು ಏನೂ ಮಾಡಲು ಆಗುವುದಿಲ್ಲ ಎಂದರು.
ಡಿಕೆಶಿ ಅವರಿಗೆ ದೇವಸ್ಥಾನ ಅಭಿವೃದ್ಧಿ ಆಗುವುದು ಬೇಕಿಲ್ಲ. ಗೋಹತ್ಯೆ ಮಾಡಿದರೆ, ನಮ್ಮ ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಅವರಿಗೆ ನೋವು ಇಲ್ಲ.ಡಿಕೆಶಿ ಮುಸಲ್ಮಾನ್ ಇಲ್ಲವೇ ಕ್ರಿಶ್ಚಿಯನ್ ಆಗುವುದು ಒಳ್ಳೆಯದು ಎಂದರು.
ದೇವಸ್ಥಾನಕ್ಕೆ ಕೈ ಹಾಕಿದರೇ ಸರಕಾರ ಭಸ್ಮ ಆಗುತ್ತದೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇಶದಲ್ಲಿ ಕಾಂಗ್ರೆಸ್ ಭಸ್ಮ ಆಗಿದೆಯಾ, ಬಿಜೆಪಿ ಭಸ್ಮ ಆಗಿದೆಯಾ..? ಗೋಹತ್ಯೆ ಮಾಡಿದ್ದಕೋಸ್ಕರ ಕಾಂಗ್ರೆಸ್ ಭಸ್ಮ ಆಗಿದ್ದು.ಮತಾಂತರ ನಿಷೇಧ ಕಾಯ್ದೆ ವಿರೋಧ ಮಾಡ್ತಿದ್ದಾರೆ. ಅದಕ್ಕೆ ಭಸ್ಮ ಆಗುತ್ತಿದೆ. ದೇಶ ಭಕ್ತರು, ಧರ್ಮ ಭಕ್ತರು ಬಿಜೆಪಿಯಲ್ಲಿ ಇರುತ್ತಾರೆ.ರಾಷ್ಟ್ರ ಭಕ್ತಿ, ಧರ್ಮ ಭಕ್ತಿಯನ್ನು ನಮಗೆ ಆರ್ ಎಸ್ ಎಸ್ ಹೇಳಿಕೊಟ್ಟಿದೆ. ನಾವೆಲ್ಲರೂ ಆರ್ ಎಸ್ ಎಸ್ ಬೆಂಬಲಿಗರು ಎಂದರು.
ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ಅಂದ ಮೇಲೆ ಕಾಂಗ್ರೆಸ್ ನವರು ಬದುಕಿರಬೇಕಲ್ಲ. ನಮಗೆ ವಿರೋಧ ಪಕ್ಷವೇ ಇಲ್ಲ ಅಂತಾದರೆ ಕಥೆ ಏನು. ಡೆಮಾಕ್ರಸಿಯಲ್ಲಿ ವಿರೋಧ ಪಕ್ಷ ಇರಬೇಕು. ಹಾಗಾಗಿ ಕಾಂಗ್ರೆಸ್ ಸ್ವಲ್ಪ ಸ್ಥಾನ ತೆಗೆದುಕೊಳ್ಳುವುದಕ್ಕೆ ಜನ ಬಿಟ್ಟಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಎಲ್ಲಿ ನಾವು ಎಡವಿದ್ದೇನೆ ಎಂದು ಗಮನಿಸಿ, ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.