Advertisement
ಹಾಸನ ನಗರಸಭೆಯೂ ಸೇರಿ ಜಿಲ್ಲೆಯ 5 ಪೌರಾಡಳಿತ ಸಂಸ್ಥೆಗಳಿಗೆ ಆಗಸ್ಟ್‌ನಲ್ಲಿ ಚುನಾವಣೆ ನಡೆದಿತ್ತು. ಆದರೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿರಲಿಲ್ಲ. ಅಷ್ಟರಲ್ಲಿ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಚುನಾಯಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಂಡು ಅಧಿಕಾರ ನಡೆಸಲು ಸಾಧ್ಯವಾಗಲೇ ಇಲ್ಲ.
Related Articles
Advertisement
ಸದಸ್ಯರ ಬೇಸರ: ಚುನಾಯಿತ ಸದಸ್ಯರ ಅಧಿಕಾರವಧಿ ಐದು ವರ್ಷ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ದಿನದಿಂದ ಚುನಾಯಿತ ಸದಸ್ಯರ ಅಧಿಕಾರಾವಧಿ ನಿಗದಿಯಾಗಲಿದೆ. ಹಾಗಾಗಿ ಚುನಾಯಿತರಾಗಿರುವ ಸದಸ್ಯರಿಗೆ ತಮ್ಮ ಅವಧಿ ಕಡಿಮೆಯಾಗುವ ಆತಂಕವೇನೂ ಇಲ್ಲ. ಆದರೆ ಈಗಾಗಲೇ ಚುನಾವಣೆ ನಡೆದು ಒಂದು ವರ್ಷವಾಗುತ್ತಿದ್ದರೂ ನಾವು ಜನರ ಕೆಲಸ ಮಾಡಿಸಲಾಗುತಿಲ್ಲ, ಅಧಿಕಾರ ಚಲಾಯಿಸಬೇಕಾದ ಅಧಿಕಾರಿಗಳು, ಸಿಬ್ಬಂದಿಯ ಬಳಿ ಮನವಿ ಮಾಡಿಕೊಂಡು ಕೆಲಸ ಮಾಡಿಸಬೇಕಾಗಿದೆಯಲ್ಲಾ ಎಂಬ ಬೇಸರ ಚುನಾಯಿತ ಸದಸ್ಯರದ್ದು.
ಕಳೆದ ಆಗಸ್ಟ್‌ನಲ್ಲಿ ಹಾಸನ ಜಿಲ್ಲೆಯ ಹಾಸನ ಮತ್ತು ಅರಸೀಕೆರೆ ನಗರಸಭೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ಪುರಸಭೆಗೆ ಚುನಾವಣೆ ನಡೆದಿತ್ತು. ಕಳೆದ ಮೇ.29 ರಂದು ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ನಡೆದಿದೆ. ಇನ್ನು ಬೇಲೂರು ಪುರಸಭೆ ಚುನಾವಣೆ ನಡೆಯಬೇಕಾಗಿದೆ. ಈಗಾಗಲೇ ಜಿಲ್ಲೆಯ 7 ಪೌರಾಡಳತ ಸಂಸ್ಥೆಗಳಿಗೆ ಚುನಾವಣೆ ನಡೆದರೂ ಸದ್ಯಕ್ಕೆ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವ ಸೂಚನೆಗಳಂತೂ ಕಾಣುತ್ತಿಲ್ಲ.
ಎಂಪಿ, ಎಮ್ಮೆಲ್ಲೆಗಳು ಸುಮ್ಮನಿರುತ್ತಿದ್ದರಾ?: ದೇಶದ ಎಲ್ಲ ಚುನಾಯಿತ ಸದಸ್ಯರಿಗೂ ಒಂದೇ ರೀತಿಯ ಕಾನೂನು ಅನ್ವಯವಾಗಬೇಕು. ಲೋಕಸಭೆ, ವಿಧಾನಸಭೆ ಸದಸ್ಯರ ಆಯ್ಕೆಯ ಹೊಣೆಯನ್ನು ಕೇಂದ್ರ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ. ಹಾಗೆಯೇ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರ ಆಯ್ಕೆ ಹೊಣೆಯನ್ನು ರಾಜ್ಯ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ. ಚುನಾವಣೆ ಮುಗಿದ ಒಂದು ವಾರದೊಳಗೆ ಸಚಿವ ಸಂಪುಟ ಅಧಿಕಾರಕ್ಕೆ ಬರುತ್ತದೆ. ವಿಳಂಬವಾದರೆ ಲೋಕಸಭೆ, ವಿಧಾನಸಭಾ ಸದಸ್ಯರು ಸುಮ್ಮನಿರುತ್ತಿರಲಿಲ್ಲ.
ಆದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರು ಚುನಾಯಿತರಾಗಿ ಒಂದು ವರ್ಷವಾಗುತ್ತಾ ಬಂದಿದರೂ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಾರದಿರುವುದು ಬೇಸರದ ಸಂಗತಿ. ಜನರಿಗೆ ಭರವಸೆ ನೀಡಿ ಗೆದ್ದು ಬಂದ ನಾವು ಸ್ಥಳೀಯ ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿಲ್ಲ. ಜನರಿಗೆ ಉತ್ತರ ಹೇಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈಗಲಾದರೂ ತಕ್ಷಣ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕ ನಿಗದಿಪಡಿಸಿ ಪೌಡಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬರುವಂತೆ ನೋಡಿಕೊಳ್ಳಲಿ ಎನ್ನುತ್ತಾರೆ ಹಾಸನ ನಗರಸಭೆ 13 ನೇ ವಾರ್ಡ್ ಸದಸ್ಯ ಎಚ್.ಸಿ.ಮಂಜುನಾಥ್ ಅವರು.
* ಎನ್. ನಂಜುಂಡೇಗೌಡ