Advertisement

ಬಿಜೆಪಿ ಮುಕ್ತ ಬಬಲೇಶ್ವರಕ್ಕೆ ನಾಂದಿ: ಶಾಸಕ ಎಂ.ಬಿ. ಪಾಟೀಲ

06:39 PM Sep 14, 2021 | Nagendra Trasi |

ವಿಜಯಪುರ:ಬಬಲೇಶ್ವರ ವಿಧಾನಸಭೆಯನ್ನು ಬಿಜೆಪಿ ಮುಕ್ತ ಕ್ಷೇತ್ರ ಮಾಡಲು ಕೊಪ್ಪದ ಸಹೋದರರು ನಾಂದಿ ಹಾಡಿದ್ದಾರೆ ಎಂದು ಬಬಲೇಶ್ವರ ಶಾಸಕರಾದ ಮಾಜಿ ಸಚಿವ ಶಾಸಕ ಎಂ.ಬಿ. ಪಾಟೀಲ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಚನ್ನಪ್ಪ ಕೊಪ್ಪದ ಅವರೊಂದಿಗೆ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

Advertisement

ಸಿದ್ದೇಶ್ವರ ಶ್ರೀಗಳ ಆಶಯದಂತೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿದ್ದ 5 ವರ್ಷಗಳಲ್ಲಿ ನಾನು ಅಧ್ಯಕ್ಷನಾಗಿರುವ ಬಿಎಲ್‌ ಡಿಇ ಸಂಸ್ಥೆಯ ಕೆಲಸಗಳನ್ನು, ಕೌಟುಂಬಿಕ ಕೆಲಸಗಳು, ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಬದಿಗೊತ್ತಿ, ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನೀರಾವರಿ ಮಾಡುವಲ್ಲಿ ನನ್ನ ಪರಿಶ್ರಮ ಮೆಚ್ಚಿಯೇ ಇಂದು ಜಿಲ್ಲೆಯ ಅನ್ಯ ಪಕ್ಷದ ನಾಯಕರು, ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದರು.

ಸಚಿವನಾಗಿ ಕೇವಲ ಅಧಿಕಾರ ಅನುಭವಿಸದೇ ಜಿಲ್ಲೆಯ ನೀರಾವರಿಗಾಗಿ ಸ್ವಂತ ಬುತ್ತಿ ಕಟ್ಟಿಕೊಂಡು, ಹಗಲು-ರಾತ್ರಿ ತಿರುಗಾಡಿ ಕೆಲಸ ಮಾಡಿದ್ದೇನೆ. ಜಿಲ್ಲೆಯ ನೀರಾವರಿಗಾಗಿ ಕಷ್ಟ ಸಾಧ್ಯವಾಗಿದ್ದ ನೀರಾವರಿ ಯೋಜನೆಗಳಿಗೆ ಸಂಪುಟದಲ್ಲಿ ಒಪ್ಪಿಗೆ ಕೊಡಿಸಿ, 56 ಸಾವಿರ ಕೋಟಿ ರೂ. ಅನುದಾನ ತಂದು ನೀರಾವರಿಗೆ ಮಾಡಲು ಕ್ಷೇತ್ರದ ಜನರ ಆಶೀರ್ವಾದವೇ ಕಾರಣ. ನಿಮ್ಮ ಆಶಯಕ್ಕೆ ತಕ್ಕಂತೆ ವಿಜಯಪುರ ಜಿಲ್ಲೆಯನ್ನು ರಾಜ್ಯ ಮತ್ತು ದೇಶದಲ್ಲಿ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೆ ತರಲು ಪ್ರಯತ್ನ ಮುಂದುವರಿಸುತ್ತೇನೆ. ಶಾಲೆಗಳ ನಿರ್ಮಾಣ, ಮೂಲ ಸೌಕರ್ಯಗಳು, ಹೈನುಗಾರಿಕೆ ಮತ್ತು ಉದ್ಯೋಗ ಸೃಷ್ಟಿಗೆ ಮುಂಬರುವ ದಿನಗಳಲ್ಲಿ ಆದ್ಯತೆ ನೀಡುವುದಾಗಿ ತಿಳಿಸಿದರು.

ಕಾಲುವೆ ಕೆಲಸ ಆರಂಭಿಸಿದಾಗ ಕೆಲವರು ಕಮಿಷನ್‌ ಆಸೆಗಾಗಿ ಕಾಮಗಾರಿ ರೂಪಿಸಿದ್ದು, ನೀರು ಹರಿಯುವುದಿಲ್ಲ ಎಂದು ನನ್ನ ವಿರುದ್ಧ ವ್ಯಂಗ್ಯವಾಡಿದ್ದರು. ಆದರೆ ಇಂದು ಅದೇ ಜನ ನಮ್ಮ ಕೆಲಸಗಳನ್ನು ಮೆಚ್ಚಿ ಆಶೀರ್ವದಿಸುತ್ತಿದ್ದಾರೆ.2013ರಲ್ಲಿ ಬಬಲೇಶ್ವರ ಮತಕ್ಷೇತ್ರದ ಜನ ಬೆಂಬಲಿಸಲಿದ್ದಿದ್ದರೆ ಇದರಿಂದ ನನಗಿಂತ ಹೆಚ್ಚಾಗಿ ಜಿಲ್ಲೆಯ ಜನಾಂಗದ ಭವಿಷ್ಯಕ್ಕೆ ಪೆಟ್ಟು ನೀಡಿದಂತಾಗುತ್ತಿತ್ತು. ಆದರೆ ನಾನು ಮಾಡಿರುವ ನೀರಾವರಿ ಕೆಲಸಗಳನ್ನು ಕೆಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಬಿಜೆಪಿ ಸರ್ಕಾರ ಮಾಡಿದ ಯೋಜನೆ, ಬಸವರಾಜ ಬೊಮ್ಮಾಯಿ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಒಪ್ಪಿಗೆ ಪಡೆದ ಯೋಜನೆ ಅಂತೆಲ್ಲ ಅಪಪ್ರಚಾರ ನಡೆಸಿದ್ದಾರೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ರೈತರ ಕೈಯಲ್ಲಿ ದುಡ್ಡು ಬಂದಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಜಾತಿ, ಉಪಜಾತಿ ಹೊಟ್ಟೆ ತುಂಬಿಸುವುದಿಲ್ಲ. ನೀರಿದ್ದರೆ ಉತ್ತಮ ಬದುಕು ಸಾಧ್ಯವಿದೆ. ಅಂದು ಮಾಡಿದ ನೀರಾವರಿ ಕೆಲಸದಿಂದಾಗಿ ಇಂದು ರೈತರು ತೋಟಗಾರಿಕೆ ಬೆಳೆಗಳಿಗೆ ನೀರುಣಿಸಲು ಪ್ರತಿ ವರ್ಷ ಮಾಡುತ್ತಿದ್ದ 4-5 ಸಾವಿರ ಕೋಟಿ ರೂ. ಉಳಿತಾಯವಾಗಿದೆ ಎಂದರು.

Advertisement

ಪಕ್ಷಕ್ಕೆ ಸೇರ್ಪಡೆಗೊಂಡ ಚನ್ನಪ್ಪ ಕೊಪ್ಪದ ಮಾತನಾಡಿ, ಎಂ.ಬಿ. ಪಾಟೀಲ ಅವರು ಜಲ ಸಂಪನ್ಮೂಲ ಸಚಿವರಾಗಿ ವಿಜಯಪುರ ಜಿಲ್ಲೆಯಲ್ಲಿ ಮಾಡಿದ ನೀರಾವರಿ ಕ್ಷೇತ್ರದ ಕ್ರಾಂತಿಯನ್ನು ಮೆಚ್ಚಿ ಬೆಂಬಲಿಗರೊಂದಿಗೆ ನನ್ನ ಕುಟುಂಬ ಸದಸ್ಯರು ಆತ್ಮಸಾಕ್ಷಿಯಾಗಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆಗಿದ್ದೇವೆ. ಹಿಂದೆ ನಾವು ಎಂ.ಬಿ. ಪಾಟೀಲ ಅವರ ವಿರುದ್ಧವೇ ಚುನಾವಣೆ ಮಾಡಿದ್ದೇವೆ. ಆದರೆ 2013ರ ಚುನಾವಣೆಯಲ್ಲಿ ಬಬಲೇಶ್ವರ ಮತದಾರರು ಎಂ.ಬಿ. ಪಾಟೀಲ ಅವರನ್ನು ಆಯ್ಕೆ ಮಾಡಿರದಿದ್ದರೆ ದೊಡ್ಡ ತಪ್ಪು ಮಾಡಿದಂತಾಗುತ್ತಿತ್ತು. ವಿಜಯಪುರ ಜಿಲ್ಲೆ ಶಾಶ್ವತವಾಗಿ ಬರಪೀಡಿತ ಜಿಲ್ಲೆಯಾಗಿರುತ್ತಿತ್ತು ಎಂದರು.

ಚುನಾವಣೆಯಲ್ಲಿ ನಾವು ಯಾರ ಪರ ಕೆಲಸ ಮಾಡಿದ್ದೇವೂ ಅವರೇ ನಮ್ಮ ಮನೆತನದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹೃದಯಕ್ಕೆ ಬಾಣ ಬಡಿದಾಗ, ತಲೆಗೆ ಬುದ್ಧಿ ಬರುತ್ತೆ. ಈ ಹಿನ್ನೆಲೆಯಲ್ಲಿ ನಮಗೆ ಜ್ಞಾನೋದಯವಾಗಲು 40 ವರ್ಷ ಬೇಕಾದವು. ಈಗ ನೀರಾವರಿ ಯೋಜನೆ ವಾಸ್ತವಿಕ ಅರಿವಾಗಿ ಮತ್ತು ಅದಕ್ಕೆ ಕಾರಣೀಕರ್ತರಾದ ಎಂ.ಬಿ. ಪಾಟೀಲ ಅವರ ಜನಪರ ಕಾಳಜಿ ಮೆಚ್ಚಿ ನೀರಿನ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದರು.

ಮೇಲ್ಮನೆ ಶಾಸಕ ಸುನೀಲಗೌಡ ಪಾಟೀಲ ಮಾತನಾಡಿ, ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತರು ಆಸ್ತಿ-ಪಾಸ್ತಿ ಮಾಡುತ್ತಾರೆ. ಅವರನ್ನು ನಂಬಿದವರು ಅಧೋಗತಿಗೆ ತಳ್ಳಲ್ಪಡುತ್ತಾರೆ. ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಕಷ್ಟ ಕಾಲದಲ್ಲಿ ನೆರವಾದವರಿಗೆ ಸಹಾಯ ಕೂಡ ಮಾಡದೇ ಅವರ ಬದುಕನ್ನು ಹಾಳು ಮಾಡುತ್ತಾರೆ. ನಮ್ಮನ್ನು ಬೆಂಬಲಿಸಿದವರು ಉದ್ಧಾರವಾಗಿದ್ದಾರೆ. ಅವರನ್ನು ಬೆಂಬಲಿಸಿದವರು ಹಾಳಾಗಿದ್ದಾರೆ. ನಾವು ಗ್ರಾಪಂ ಮಟ್ಟದ ರಾಜಕೀಯದಲ್ಲಿ ಕೈ ಹಾಕುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಸದಸ್ಯ ಸಂಗಮೇಶ್ವ ಬಬಲೇಶ್ವರ, ರೈತ ಮುಖಂಡ ಕಂಠೀರವ ಕುಲ್ಲೊಳ್ಳಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷರಾದ ಸೋಮನಾಥ ಬಾಗಲಕೋಟ, ವಿ.ಎಸ್‌.ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಟಿ.ಕೆ. ಹಂಗರಗಿ, ಬಬಲೇಶ್ವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಗೊಂಡ ಬಿರಾದಾರ, ತಿಕೋಟಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದು ಗೌಡನ್ನವರ, ವಿಜಯಪುರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಸಿದ್ದಣ್ಣ ಸಕ್ರಿ, ವಿ.ಎನ್‌ .ಬಿರಾದಾರ, ಮುತ್ತಪ್ಪ ಶಿವಣ್ಣನವರ, ಸೋಮನಾಥ ಕಳ್ಳಿಮನಿ, ಉಮೇಶ ಮಲ್ಲಣ್ಣವರ, ಬಾಬುಗೌಡ ಪಾಟೀಲ ಯಕ್ಕುಂಡಿ, ಡಿ.ಎಲ್‌. ಚವ್ಹಾಣ, ಎಸ್‌. ಎಚ್‌. ಮುಂಬಾರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next