Advertisement
ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದ 26 ಶಾಸಕರು ಬಿಜೆಪಿ ಸಂಪರ್ಕದಲಿದ್ದು, ಅವರಿಗೆ ಪ್ರಧಾನಿ ಮೋದಿ ನಾಯಕತ್ವದಲ್ಲಿ ನಂಬಿಕೆಯಿಟ್ಟು ಬರುವುದಾದರೆ ಸ್ವಾಗತವಿದೆ ಎಂಬ ಸಂದೇಶ ರವಾನಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
Related Articles
ಒಂದು ಹಂತದಲ್ಲಿ ಆಪರೇಷನ್ ಕಮಲ ನಡೆಸಲು ಸಿದ್ಧರಾಗಿದ್ದ ರಾಜ್ಯ ಮುಖಂಡರನ್ನು ಪಕ್ಷದ ಹೈಕಮಾಂಡ್ ತಟಸ್ಥಗೊಳಿಸಿತ್ತು. ಆದರೆ, ಇತ್ತೀಚೆಗೆ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಡಿ.ಕೆ. ಶಿವಕುಮಾರ್- ಜಾರಕಿಹೊಳಿ ಸಹೋದರರ “ಬೆಳಗಾವಿ ರಾಜಕೀಯ’, ಲಿಂಗಾಯತ ಮುಖಂಡ ಎಂ.ಬಿ. ಪಾಟೀಲ್ ನೇತೃತ್ವದ ತಂಡದ ಅತೃಪ್ತಿ, ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಗೂಢ ಹೇಳಿಕೆಗಳು, ಉತ್ತರ ಕರ್ನಾಟಕ ಕುರಿತ ಸಮ್ಮಿಶ್ರ ಸರ್ಕಾರದ ನಡೆ ಮತ್ತಿತರ ಘಟನೆಗಳು ಕುಮಾರಸ್ವಾಮಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಈ ಹಿನ್ನೆಲೆಯಲ್ಲಿ ಮತ್ತೆ ಸರ್ಕಾರ ಸ್ಥಾಪಿಸುವ ರಾಜ್ಯ ಬಿಜೆಪಿ ಕನಸಿಗೆ ಹೈಕಮಾಂಡ್ ಮರುಜೀವ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Advertisement
ಆದರೆ, ಸಮ್ಮಿಶ್ರ ಸರ್ಕಾರವನ್ನು “ಆಪರೇಷನ್ ಕಮಲ’ ಮೂಲಕ ಪತನಗೊಳಿಸುವುದನ್ನು ಹೈಕಮಾಂಡ್ ಒಪ್ಪಿಲ್ಲ ಎನ್ನಲಾಗಿದೆ. ಬದಲಿಗೆ ತನ್ನಷ್ಟಕ್ಕೆ ತಾನೇ ಪತನಗೊಳ್ಳುವ ಸರ್ಕಾರದ ಅತೃಪ್ತ ಶಾಸಕರು ಬಿಜೆಪಿ ಸೇರಿದರೆ, ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಮುಂದಾಗಿದೆ. ಜತೆಗೆ, ಅತೃಪ್ತ ಶಾಸಕರ ರಾಜೀನಾಮೆ ಬಳಿಕದ ಒಟ್ಟಾರೆ ಶಾಸಕರ ಸಂಖ್ಯೆಯಲ್ಲಿ ಸದ್ಯಕ್ಕೆ 104 ಶಾಸಕರನ್ನು ಹೊಂದಿರುವ ಬಿಜೆಪಿಗೆ ಬಹುಮತದ ಮ್ಯಾಜಿಕ್ ನಂಬರ್ ತಲುವುದು ಸಾಧ್ಯವಾಗುತ್ತದೆ. ಆಪರೇಷನ್ ಕಮಲದ ಬದಲಿಗೆ ಸಮ್ಮಿಶ್ರ ಸರ್ಕಾರದ ಕೆಸರೆರಚಾಟ ಮತ್ತು ಅಲ್ಲಿನ ದೋಸ್ತಿ ಪಕ್ಷಗಳ ಅಪನಂಬಿಕೆಯಿಂದ ಸರ್ಕಾರ ಪತನವಾಗಿದೆ ಎಂದು ಪ್ರತಿಪಾದಿಸಿ ಬಳಿಕ ಅಧಿಕಾರ ಸ್ಥಾಪನೆಗೆ ಹಕ್ಕು ಕೇಳುವುದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಂತ್ರವಾಗಿದೆ ಎನ್ನಲಾಗಿದೆ. ಈ ಷರತ್ತುಗಳನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಅವರಿಗೆ ವಯಕ್ತಿಕವಾಗಿ ಯಾವುದೇ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸದಂತೆಯೂ ಹೇಳಲಾಗಿದೆ.
ಕಾಂಗ್ರೆಸ್‌ನ ನೂತನ ಮತ್ತು ನಾಲ್ಕೈದು ಬಾರಿ ಗೆದ್ದರೂ ಸೂಕ್ತ ಸ್ಥಾನಮಾನ ಸಿಗದೆ ಅತೃಪ್ತರಾಗಿರುವ ಕೆಲವು ಶಾಸಕರಿಗೆ ಆ ಪಕ್ಷದ ರಾಷ್ಟ್ರ ನಾಯಕತ್ವದ ಮೇಲೆ ನಂಬಿಕೆ ಕಡಿಮೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸೋತದ್ದೇ ಆದರೆ, ತಮ್ಮ ರಾಜಕೀಯ ಭವಿಷ್ಯ ಡೋಲಾಯಮಾನವಾಗಬಹುದು ಎಂಬ ಚಿಂತೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಕನಿಷ್ಠ ಮುಂದಿನ ಐದು ವರ್ಷಗಳಲ್ಲಿ ಪ್ರಭಾವಿಯಾಗಿರುತ್ತಾರೆ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ರಾಷ್ಟ್ರ ನಾಯಕತ್ವವನ್ನು ಸ್ಥಾಪಿಸಲು ವಿಫಲರಾಗುತ್ತಿರುವುದು ಅಂತಹ ಶಾಸಕರಿಗೆ ಬಿಜೆಪಿಯತ್ತ ಒಲವಿಗೆ ಕಾರಣವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ವಿಶ್ಲೇಷಿಸಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಸರ್ಕಾರ ರಚಿಸುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗಿತ್ತು. ಆದರೆ, ತಕ್ಷಣ ಬಿಜೆಪಿ ಸರ್ಕಾರ ಬಂದಲ್ಲಿ ಪಕ್ಷಕ್ಕೆ ಇನ್ನಷ್ಟು ಬರಲಿದೆ. ತಮ್ಮ ತಮ್ಮ ವಿವಾದಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅವಕಾಶಗಳನ್ನು ಹಾಳುಮಾಡಿಕೊಂಡಿವೆ ಎಂದೂ ಆ ಮುಖಂಡ ಹೇಳಿದ್ದಾರೆ.
ಕಾಂಗ್ರೆಸ್‌ಗೂ ಸರ್ಕಾರ ಪತನ ಇಷ್ಟ?ಉನ್ನತ ಮೂಲಗಳ ಪ್ರಕಾರ, ಕಾಂಗ್ರೆಸ್ ರಾಷ್ಟ್ರ ನಾಯಕತ್ವಕ್ಕೆ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ಒಳ್ಳೆಯದು ಎಂಬ ಭಾವನೆಯಿದೆ. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಜತೆಗಿನ ಸಂಬಂಧದಿಂದ ಸಮಸ್ಯೆ ಉಂಟಾಗಿದೆ. ಅದಕ್ಕೆ ಉತ್ತರ ಕರ್ನಾಟಕ ಕುರಿತ ಜೆಡಿಎಸ್ ತಳೆದು ಕೊಂಡ ನಿರ್ಧಾರಗಳು, ಆ ಭಾಗದಲ್ಲಿ ಇನ್ನೂ ಭಧ್ರವಾಗಿರುವ ಕಾಂಗ್ರೆಸ್ ಅಡಿಪಾಯಕ್ಕೆ ಧಕ್ಕೆ ತಂದಿದೆ ಎನ್ನಲಾಗಿದೆ. ಜತೆಗೆ ತನ್ನ ಮತಬ್ಯಾಂಕ್ ಆಗಿರುವ ಅಹಿಂದ ವರ್ಗ, ಉತ್ತರ ಕರ್ನಾಟಕದಲ್ಲಿ ಕ್ಷೀಣವಾಗಿರುವ ಜೆಡಿಎಸ್‌ಗೆ ಬಲತಂದುಕೊಟ್ಟಿದ್ದೇ ಆದಲ್ಲಿ ಕಾಂಗ್ರೆಸ್‌ಗೆ ತೊಂದರೆ ಆಗಲಿದೆ. ಇವೆಲ್ಲಾ ಕಾರಣಗಳು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಶದಲ್ಲಿರುವ ಲೋಕಸಭಾ ಕ್ಷೇತ್ರಗಳನ್ನೇ ಉಳಿಸಿಕೊಳ್ಳಲು ಕಷ್ಟವಾಗಬಹುದು ಎಂಬ ಯೋಚನೆ ಪಕ್ಷ ಮುಖಂಡತ್ವಕ್ಕೆ ಬಂದಿದೆ ಎನ್ನಲಾಗಿದೆ. ಜೆಡಿಎಸ್ ನಾಯಕರ ಜತೆ ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವುಗಳು ಮತ್ತು ವಿಶ್ಲೇಷಣೆಗಳು ಪಕ್ಷಮುಖಂಡತ್ವಕ್ಕೆ ಮನವರಿಕೆ ಆಗಿದ್ದು, ಸರ್ಕಾರ ಪತನವಾದಲ್ಲಿ ಲಾಭ ಹೆಚ್ಚು ಎಂದುಕೊಂಡಿದೆ ಎಂದು ಮೂಲಗಳು ಹೇಳಿವೆ. – ನವೀನ್ ಅಮ್ಮೆಂಬಳ