ಮೈಸೂರು: ನಗರದಲ್ಲಿ ಎಲ್ಲವೂ ಕಾಂಕ್ರೀಟ್ ಮಯ. ಅಲ್ಲಿ ಮಳೆ ನೀರು ಇಂಗುವುದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿದೆ. ನೀರು ಹೋಗುವ ದಾರಿ ಮುಚ್ಚಿರುವ ಕಾರಣ ಅನಾಹುತವಾಗುತ್ತಿದೆ. ಆದ್ದರಿಂದ ಸಾರ್ವಜನಿಕರಿಗೆ, ಸರ್ಕಾರಕ್ಕೆ ಮನವಿ ಮಾಡುತ್ತೇನೆ, ನೀರು ಹರಿಯುವ ಸ್ಥಳವನ್ನು ಯಾರೂ ಬಂದ್ ಮಾಡಬೇಡಿ. ಇದರಿಂದ ಕೆಟ್ಟ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ರಾಜಕಾಲುವೆ ಮುಚ್ಚಲಾಗಿದೆ. ಇದರ ಪರಿಣಾಮ ಅನಾಹುತಗಳು ಜರುಗುತ್ತಿವೆ. ನೀರಿಗೆ ಇರುವ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಜನ ಬಹಳ ಸಂತೋಷವಾಗಿದ್ದಾರೆ. ಕಳೆದ ಬಾರಿ ಕೆಲವು ಕಡೆ ಮಾತ್ರ ಮಳೆ ಆಗುತ್ತಿತ್ತು. ಆದರೆ ಈ ಬಾರಿ ರಾಜ್ಯಾದ್ಯಂತ ಮಳೆ ಸುರಿಯುತ್ತಿದೆ. ಮಳೆ ಬಂದಾಗ ಕೆಲವು ತೊಂದರೆಯಾಗುವುದು ಸಹಜ. ಅದೆಲ್ಲವನ್ನೂ ಎದುರಿಸಲು ಸರ್ಕಾರವಿದೆ. ಅವರ ಪರವಾಗಿ ಸರ್ಕಾರ ಕೆಲಸ ಮಾಡುತ್ತದೆ ಎಂದರು.
ಮೈಸೂರು- ಬೆಂಗಳೂರು ಹೆದ್ದಾರಿ ಅವಾಂತರದ ಬಗ್ಗೆ ಮಾತನಾಡಿದ ಸಚಿವರು, ರಾಮನಗರದಲ್ಲಿ ಮಳೆ ನೀರು ನಿಂತ ಪರಿಣಾಮ ಅಂಡರ್ ಪಾಸ್ ನಲ್ಲಿ ನೀರು ಹರಿಯುವ ಬಂಡ್ ತೆಗೆದಿದ್ದಾರೆ. ಆ ಕಾರಣಕ್ಕೆ ನೀರು ನುಗ್ಗಿ ಅನಾಹುತ ಸಂಭವಿಸಿದೆ. ಆದರೆ, ಯಾವುದೇ ಅವ್ಯವಹಾರ ನಡೆದಿಲ್ಲ. 40 ಕುಟುಂಬಗಳನ್ನು ಸ್ಥಳಾಂತರಕ್ಕೆ ಶಿಫಾರಸ್ಸು ಮಾಡಲಾಗಿದೆ. ಹಳ್ಳದಲ್ಲಿ ನಿರ್ಮಿಸಿರುವ 40 ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿದ್ದೇವೆ ಎಂದರು.
ಇದನ್ನೂ ಓದಿ:ಸಿಇಟಿ ರ‍್ಯಾಂಕಿಂಗ್ ಗೊಂದಲ: ಮತ್ತೆ ಕೋರ್ಟ್ ಮೊರೆ ಹೋಗಲು ಸರ್ಕಾರದ ನಿರ್ಧಾರ
ಮುರುಘಾ ಶ್ರೀ ಪ್ರಕರಣ ವಿಚಾರಕ್ಕೆ ಮಾತನಾಡಿದ ಮಾಧುಸ್ವಾಮಿ, ತನಿಖೆ ನಡೆಯುವಾಗ ಕಾನೂನು ಸಚಿವ, ಗೃಹ ಸಚಿವರು ಮಾತನಾಡಬಾರದು. ರಾಜ್ಯದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ. ಅವರ ಕಾರ್ಯ ವೈಖರಿಯಲ್ಲಿ ಸರ್ಕಾರ ತಲೆ ಹಾಕುವುದಿಲ್ಲ. ಪೊಲೀಸ್, ನ್ಯಾಯಾಂಗ ಅದರ ಕುರಿತು ಕ್ರಮಕೈಗೊಳ್ಳುತ್ತದೆ. ರಾಜಕಾರಣಿಗಳು ಈ ವಿಚಾರದಲ್ಲಿ ಕಾಮೆಂಟ್ ಮಾಡುವುದು ತಪ್ಪು ಎಂದರು.