ಬೆಂಗಳೂರು: “ರಾಜ್ಯ ಕಾಂಗ್ರೆಸ್ ಉಸ್ತುವಾರಿ ನನಗೆ ದೂರವಾಣಿ ಕರೆಯನ್ನೂ ಮಾಡಿಲ್ಲ, ತರಾಟೆಗೂ ತೆಗೆದುಕೊಂಡಿಲ್ಲ. ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಯನ್ನೂ ನಡೆಸಿಲ್ಲ’ ಎಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದು ಹೌದು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಪಕ್ಷದ ನಾಯಕರಿಗೆ ತಿಳಿಸಿಯೇ ಸಭೆ ಕರೆದಿದ್ದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ. ರದ್ದಾಗಿಲ್ಲ, ಸಭೆ ರದ್ದು ಮಾಡುವಂತೆ ಯಾರೂ ಸೂಚಿಸಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, “ಕೆ.ಸಿ.ವೇಣುಗೋಪಾಲ್ ಅವರು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬುದು ಸರಿಯಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಶಾಸಕರು ಹಾಗೂ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾವು ಸಭೆ ಕರೆದಿದ್ದೆವು.
ಗೊಂದಲ ಉಂಟಾಗಬಾರದು ಎಂದು ತಕ್ಷಣಕ್ಕೆ ಮುಂದೂಡಲಾಗಿದೆ. ಬಿಡಿಎಯಲ್ಲಿ ನಡೆಯುತ್ತಿರುವ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದೇನೆ. ಅಲ್ಲಿನ ಅಕ್ರಮಗಳ ಬಗ್ಗೆ ಮಾತನಾಡುವುದು ತಪ್ಪೇ. ನಾನು ಬಿಡಿಎ ಅಧ್ಯಕ್ಷ, ನನ್ನ ಕಾರ್ಯವ್ಯಾಪ್ತಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಡಲ ತೀರದಲ್ಲಿ ಆರಾಮಾಗಿದ್ದಾರೆ ಎಂದು ನಾನು ಹೇಳಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಕಡೆ ಸಮಸ್ಯೆಯಿದ್ದು ಆ ಬಗ್ಗೆ ನೀವು ಸುದ್ದಿ ಮಾಡಿ. ಅದನ್ನು ಬಿಟ್ಟು ಸಚಿವ ಸಾ.ರಾ.ಮಹೇಶ್ ಅವರು ಸಮುದ್ರ ತೀರದಲ್ಲಿ ವಾಕಿಂಗ್ ಮಾಡಿದ್ದನ್ನು,
ವಿಧಾನಪರಿಷತ್ ಸದಸ್ಯ ಬೋಜೇಗೌಡ ಅವರ ಮೇಲೆ ಮರಳು ತುಂಬುತ್ತಿರುವ ಸುದ್ದಿ ಹಾಕುತ್ತೀರಿ. ಗ್ರಾಮೀಣ ಭಾಗದ ಜನರ ಸಮಸ್ಯೆ ಬಗ್ಗೆಯೂ ಕಾಳಜಿ ಇರಲಿ ಎಂದು ವಿದ್ಯುನ್ಮಾನ ಮಾಧ್ಯಮಗಳಿಗೆ ಮನವಿ ಮಾಡಿದ್ದೆ. ಆದರೆ, ಕುಮಾರಸ್ವಾಮಿಯವರ ಬಗ್ಗೆ ಮಾತನಾಡಿದಂತೆ ಬಿಂಬಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.