ಕಾಸರಗೋಡು: ಮಲೆನಾಡು ಪ್ರದೇಶದ ನಾಗರಿಕರಿಗೆ ಪ್ರಮುಖ ಆಶ್ರಯ ಕೇಂದ್ರವಾಗಿರುವ ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಕಾಲದಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲದೆ ಇತರ ದೂರದ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾಮೂಹಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಭಡ್ತಿಗೊಳಿಸಿದರೂ ಚಿಕಿತ್ಸಾ ಸೌಲಭ್ಯದಿಂದ ಸ್ಥಳೀಯರು ವಂಚಿತರಾಗಿದ್ದಾರೆ. ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಕಾಲದಲ್ಲಿ ವೈದ್ಯರ ಸೇವೆ ಲಭಿಸುವುದಿಲ್ಲ. ಮಲೆನಾಡು ಪ್ರದೇಶದ ಜನರು ಸಾಕಷ್ಟು ನಿರೀಕ್ಷೆಯಿರಿಸಿದ್ದ ರಾತ್ರಿ ವೈದ್ಯರ ಸೇವೆ ಯೋಜನೆಗಾಗಿ ಐದು ತಿಂಗಳಿಂದ ಎದುರು ನೋಡುತ್ತಿದ್ದರೂ, ಈ ವರೆಗೂ ಅಂತಹ ಸೌಲಭ್ಯ ಲಭಿಸಿಲ್ಲ. ಈ ಕಾರಣದಿಂದ ಮಲೆನಾಡು ಪ್ರದೇಶದ ಜನರ ಸಂಕಷ್ಟ ಇನ್ನೂ ಪರಿಹಾರವಾಗಿಲ್ಲ.
ಈ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಕಾಲದಲ್ಲಿ ವೈದ್ಯರ ಸೇವೆ ಲಭಿಸದಿರುವುದರಿಂದ ರಾತ್ರಿ ಚಿಕಿತ್ಸೆಗಾಗಿ 45 ಕಿ.ಮೀ. ದೂರದ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆ ಅಥವಾ ಕಾಂಞಂಗಾಡ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯನ್ನು ಆಶ್ರಯಿಸಬೇಕಾದ ದುಸ್ಥಿತಿಯಿದೆ. ತುರ್ತು ಚಿಕಿತ್ಸೆಗಾಗಿ ರಾತ್ರಿ ಬೇಡಡ್ಕ ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರ ಸೇವೆ ಲಭಿಸದಿರುವುದರಿಂದ ಅಲ್ಲಿನ ಸಿಬಂದಿಗಳೊಂದಿಗೆ ಮಾತಿನ ಚಕಮಕಿ ಸಾಮಾನ್ಯವಾಗಿದೆ.
2018 ಜುಲೈ ತಿಂಗಳಲ್ಲಿ ಬೇಡಡ್ಕ ಸಾಮೂಹಿಕ ಆರೋಗ್ಯ ಕೇಂದ್ರ ವನ್ನು ತಾಲೂಕು ಆಸ್ಪತ್ರೆಯಾಗಿ ಭಡ್ತಿಗೊಳಿಸಲಾಗಿತ್ತು. ಈ ಹಿಂದೆ ಇದು ಕಾರಡ್ಕ ಬ್ಲಾಕ್‌ನ ಕುತ್ತಿಕ್ಕೋಲ್, ಬೇಡಡ್ಕ ಪಂಚಾ ಯತ್‌ಗಳಿಗೆ ಏಕ ಸಾಮಾಹಿಕ ಆರೋಗ್ಯ ಕೇಂದ್ರವಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದ ಈ ಕೇಂದ್ರವನ್ನು 2008ರಲ್ಲಿ ಸಾಮೂಹಿಕ ಆರೋಗ್ಯ ಕೇಂದ್ರವನ್ನಾಗಿ ಭಡ್ತಿಗೊಳಿಸಲಾಗಿತ್ತು. ಕುತ್ತಿ ಕ್ಕೋಲ್, ಬೇಡಡ್ಕ, ದೇಲಂಪಾಡಿ, ಕೋಡೋಂ-ಬೇಳೂರು, ಕಳ್ಳಾರ್, ಪನತ್ತಡಿ ಗ್ರಾ.ಪಂ.ಗಳ ಜನರು ಹೆಚ್ಚಾಗಿ ಈ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದಾರೆ. ಆದರೆ ರಾತ್ರಿ ಕಾಲದಲ್ಲಿ ವೈದ್ಯರ ಸೇವೆ ಅಲಭ್ಯದಿಂದಾಗಿ ಇಲ್ಲಿನ ಜನರು ತೀರಾ ಸಂಕಷ್ಟವನ್ನು ಅನುಭವಿಸುವಂತಾಗಿದೆ.
ಪೊಯಿನಾಚಿ-ಬಂದಡ್ಕ ರಸ್ತೆಯ ಕಾಂಞಿರತ್ತಿಂಗಾಲ್‌ನಲ್ಲಿ ಕಾರ್ಯಚರಿಸುವ ಈ ತಾಲೂಕು ಆಸ್ಪತ್ರೆಗೆ ಯಾವುದೇ ಪ್ರದೇಶದಿಂದಲೂ ತಲುಪಲು ರಸ್ತೆ ಸೌಕರ್ಯವಿರುವುದರಿಂದ ನೂರಾರು ಮಂದಿ ರಾತ್ರಿ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಆದರೆ ವೈದ್ಯರ ಸೇವೆ ಲಭಿಸದೆ ನಿರಾಸೆಯಿಂದ ದೂರದ ಇತರ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿಯುಂಟಾಗಿದೆ.
ಅಗತ್ಯಕ್ಕೆ ಅನುಸರಿಸಿ ತಾಲೂಕು ಆಸ್ಪತ್ರೆಗೆ ಸಾಕಷ್ಟು ಕಟ್ಟಡ ಸೌಕರ್ಯವಿದೆ. ಈ ಹಿನ್ನೆಲೆಯಲ್ಲಿ 24 ಗಂಟೆ ಕಾರ್ಯಾಚರಿಸಲು ಎಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಈ ಬಗ್ಗೆ ಸಂಬಂಧ ಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ. ಇಚ್ಛಾಶಕ್ತಿಯನ್ನು ತೋರಿದ್ದಲ್ಲಿ ಈ ತಾಲೂಕು ಆಸ್ಪತ್ರೆ ಗ್ರಾಮೀಣ ಪ್ರದೇಶದ ಹಾಗೂ ಮಲೆನಾಡು ಪ್ರದೇಶದ ಜನರ ಪ್ರಮುಖ ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ.
ತಾಲೂಕು ಆಸ್ಪತ್ರೆಯಲ್ಲಿ ನಿರೀಕ್ಷಿಸುವ ಸೌಲಭ್ಯ
– ಈ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲು ಸರಕಾರದಿಂದ ಹೆಚ್ಚಿನ ಅನುದಾನ
– ದಾಖಲಿಸಿ ಚಿಕಿತ್ಸಾ ಸೌಲಭ್ಯ. 60 ಕ್ಕೂ ಹೆಚ್ಚು ಬೆಡ್ ಅಳವಡಿಸಬೇಕು
– 12 ಕ್ಕೂ ಅಧಿಕ ಖಾಯಂ ವೈದ್ಯರ ನೇಮಕ
– ಅತ್ಯುತ್ತಮ ಕ್ಯಾಶ್ವಾಲಿಟಿ ಸೌಕರ್ಯ
– ಎಕ್ಸ್-ರೇ ಸೌಕರ್ಯ, ಸ್ಟಾಫ್ ನರ್ಸ್‌ಗಳ ಸಂಖ್ಯೆ ಹೆಚ್ಚಳ
– ಲ್ಯಾಬ್ ಟೆಕ್ನೀಶಿಯನ್, ಫಾರ್ಮಸಿಸ್ಟ್ ಹುದ್ದೆ ಸಂಖ್ಯೆಯಲ್ಲಿ ಹೆಚ್ಚಳ
– ಕನಿಷ್ಠ ನಾಲ್ಕು ಮಂದಿ ಕ್ಲಾರ್ಕ್‌ಗಳ ನೇಮಕ
ಅಭಿವೃದ್ಧಿಪಡಿಸಿ
ಭಡ್ತಿ ಪಡೆದು ತಾಲೂಕು ಆಸ್ಪತ್ರೆಯಾಗಿದ್ದರೂ ಇಲ್ಲಿ ಸಾಕಷ್ಟು ಸೌಕರ್ಯಗಳಿಲ್ಲದಿರುವುದರಿಂದ ರೋಗಿಗಳು ಇತರ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗಿದೆ. ಬೇರೆ ಆಸ್ಪತ್ರೆಗೆ ಹೋಗಬೇಕಾದರೆ ಅಧಿಕ ವೆಚ್ಚ ವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಜನರಿಗೆ ಇಲ್ಲಿ ಹೆಚ್ಚಿನ ಸೌಕರ್ಯವನ್ನು ಕಲ್ಪಿಸಬೇಕು. ರಾತ್ರಿ ಕಾಲದಲ್ಲೂ ವೈದ್ಯರ ಸೇವೆ ಲಭಿಸಬೇಕು. ಕಟ್ಟಡ ಸೌಕರ್ಯಗಳಿರುವುದರಿಂದ ಅಭಿವೃದ್ಧಿಪಡಿಸಲು ಉತ್ತಮ ಅವಕಾಶವಿದೆ.
– ರಾಮಚಂದ್ರನ್, ಸ್ಥಳೀಯ ನಿವಾಸಿ
ಸೌಲಭ್ಯ ಒದಗಿಸಿ
ತಾಲೂಕು ಆಸ್ಪತ್ರೆಯಾಗಿ ಭಡ್ತಿ ಲಭಿಸಿದ ಬಗ್ಗೆ ಸಂತೋಷವಿದೆ. ಆದರೆ ತಾಲೂಕು ಆಸ್ಪತ್ರೆಯಲ್ಲಿ ಇರಬೇಕಾದ ಎಲ್ಲ ಸೌಕರ್ಯಗಳಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿ ಅಗತ್ಯದ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ರೋಗಿಗಳಿಗೆ ಈ ಪ್ರದೇಶದಲ್ಲೇ ಚಿಕಿತ್ಸೆ ಲಭಿಸುವಂತಾಗಬೇಕು.
– ರೋಬಿನ್, ಸಮಾಜ ಸೇವಾ ಕಾರ್ಯಕರ್ತ