ಹೊಸದಿಲ್ಲಿ: ಭಾರತದ ಸರ್ವೋಚ್ಚ ಬ್ಯಾಂಕ್ ಆರ್‌ಬಿಐ, ಬ್ಯಾಂಕ್‌ಗಳಲ್ಲಿ ಪಡೆದ ಸಾಲದ ಮೇಲಿನ ಕಂತು ಪಾವತಿಯನ್ನು ಮುಂದೂಡಲು ಅವಕಾಶ ನೀಡಿದೆ. ಈ ರೀತಿಯ ಅವಕಾಶ ಪಡೆದ ಉದ್ದಿಮೆಗಳು, ವ್ಯಕ್ತಿಗಳಿಗೆ ಒಂದು ಬೇಸರದ ಸಂಗತಿಯೂ ಇದೆ. ಒಂದು ವೇಳೆ ನಿಮಗೆ ಹೊಸದಾಗಿ ಸಾಲ ಬೇಕೆಂದರೆ ಅರ್ಜಿ ಹಾಕಲು ಸಾಧ್ಯವಿಲ್ಲ! ಇದುವರೆಗೆ ಈ ರೀತಿಯ ಸೌಲಭ್ಯ ಪಡೆದವರ ಸಾಲದ ಅವಧಿ ಮತ್ತು ಬಡ್ಡಿ ಮಾತ್ರ ಜಾಸ್ತಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಇದೀಗ ಹೊಸ ಈ ಸಂಗತಿಯನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಆದರೆ ಹೀಗಂತ ಆರ್‌ಬಿಐ ನಿಯಮ ಮಾಡಿಲ್ಲ. ಬದಲಿಗೆ ಸಹಜವಾಗಿಯೇ ಬ್ಯಾಂಕ್‌ಗಳು, ಹಳೆಯ ಸಾಲ ತೀರದೇ ಹೊಸ ಸಾಲ ನೀಡಲು ಸಾಧ್ಯವಿಲ್ಲ ಎಂಬ ನಿಲುವಿಗೆ ಬಂದಿವೆ ಎನ್ನಲಾಗಿದೆ. ಮುಂದೂಡಿಕೆಯ ಅವಕಾಶ ಪಡೆದ ನಂತರ, ಈಗಾಗಲೇ ಕೊಡಲು ಒಪ್ಪಿಕೊಂಡಿದ್ದ ಸಾಲವನ್ನೂ ಬ್ಯಾಂಕ್‌ಗಳು ರದ್ದುಪಡಿಸಿರುವ ಉದಾಹರಣೆಯಿದೆ ಎಂದು ಮೂಲಗಳು ಹೇಳಿವೆ.
ಕಾರಣವೇನು?
ಬ್ಯಾಂಕ್‌ಗಳು ಸಾಲ ನೀಡುವಾಗ ಕ್ರೆಡಿಟ್ ಸ್ಕೋರ್ ಅನ್ನು ಪರಿಗಣಿಸುತ್ತವೆ. ಅಂದರೆ ಒಬ್ಬ ವ್ಯಕ್ತಿಗೆ ಮರುಪಾವತಿ ಮಾಡುವ ಸಾಮರ್ಥಯವಿದೆಯೇ ಎಂದು ಆತನ ಹಿಂದಿನ ವ್ಯವಹಾರಗಳು, ಖಾತೆಯಲ್ಲಿರುವ ಹಣ, ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ರೀತಿಯನ್ನು ನೋಡಿ ನಿರ್ಧರಿಸಲಾಗುತ್ತದೆ. ಯಾವ ವ್ಯಕ್ತಿ ಸಾಲದ ಕಂತು ಮುಂದೂಡಲು ಅವಕಾಶ ಕೇಳುತ್ತಾನೋ, ಆತನಲ್ಲಿ ಮರುಪಾವತಿ ಸಾಮರ್ಥಯವಿಲ್ಲವೆಂದು ಸಹಜವಾಗಿಯೇ ಒಪ್ಪಿಕೊಂಡಂತಾಗುತ್ತದೆ. ಈ ತರ್ಕ ಸದ್ಯ ಬ್ಯಾಂಕ್‌ಗಳಲ್ಲಿ ಚಾಲ್ತಿಯಲ್ಲಿದೆ ಎಂದು ತಜ್ಞರು ಹೇಳಿದ್ದಾರೆ.