ಧುಲೆ(ಮಹಾರಾಷ್ಟ್ರ): ತಮ್ಮ ನಾಲ್ಕನೇ ತಲೆಮಾರು ಬಂದರೂ ಮುಸ್ಲಿಮರಿಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡಲಾಗುವ ಮೀಸಲು ಸಿಗುವುದಿಲ್ಲ ಎಂಬುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆನಪಿಟ್ಟುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ(ನ13) ಕಿಡಿ ಕಾರಿದ್ದಾರೆ.
ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾ “ಮುಸ್ಲಿಮರಿಗೆ ಮೀಸಲಾತಿ ನೀಡಬೇಕಾದರೆ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಕಡಿತಗೊಳಿಸಬೇಕಾಗುತ್ತದೆ. ರಾಹುಲ್ ಬಾಬಾ, ನೀವು ಮಾತ್ರವಲ್ಲ, ನಿಮ್ಮ ನಾಲ್ಕು ತಲೆಮಾರುಗಳು ಬಂದರೂ, ಅವರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾದ ಕೋಟಾವನ್ನು ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲು ಸಾಧ್ಯವಿಲ್ಲ ಎಂದರು.
”ಏನೇ ಬಂದರೂ 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿದರೂ, 370 ನೇ ವಿಧಿಯನ್ನು ಮರುಸ್ಥಾಪಿಸಲಾಗುವುದಿಲ್ಲ” ಎಂದು ಶಾ ಹೇಳಿದರು.
ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮಹಾ ವಿಕಾಸ್ ಅಘಾಡಿ(MVA) ಔರಂಗಜೇಬ್ ಅಭಿಮಾನಿಗಳ ಕ್ಲಬ್ ಎಂದ ಶಾ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ(NDA) ಶಿವಾಜಿ ಮಹಾರಾಜ್ ಮತ್ತು ವೀರ್ ಸಾವರ್ಕರ್ ಅವರ ಆದರ್ಶಗಳಿಗೆ ಬದ್ಧವಾಗಿದೆ ಎಂದರು.
“ಕೆಲವು ದಿನಗಳ ಹಿಂದೆ ಶಾ ಅವರು ‘ಉಲೇಮಾಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದರು ಮತ್ತು ಮುಸ್ಲಿಮರಿಗೆ ಮೀಸಲಾತಿ ನೀಡಬೇಕು ಎಂದು ಹೇಳಿದ್ದು, ಅದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.