ಹೈದರಾಬಾದ್ : ”2014ರ ಲೋಕಸಭಾ ಚುನಾವಣೆಯಲ್ಲಿ ಇದ್ದ ಹಾಗೆ ಈ ಬಾರಿಯ 2019ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಎಲ್ಲಿಯೂ ಮೋದಿ ಅಲೆ ಇಲ್ಲ” ಎಂದು ಹೈದರಾಬಾದ್‌ನ ಮೂರು ಬಾರಿಯ ಸಂಸದ, ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
”ಈ ಬಾರಿಯ ಲೋಕಸಭಾ ಚುನಾವಣೆಯ ಬಳಿಕ ಪ್ರಾದೇಶಿಕ ನಾಯಕನೊಬ್ಬ ಪ್ರಧಾನಿ ಯಾಗಲಿದ್ದು ಕೇಂದ್ರದಲ್ಲಿ ಬಿಜೆಪಿ ಯೇತರ, ಕಾಂಗ್ರೆಸ್‌ಯೇತರ ರಂಗವೊಂದು ಅಧಿಕಾರಕ್ಕೆ ಬರಲಿದೆ” ಎಂದು ಓವೈಸಿ ಭವಿಷ್ಯ ನುಡಿದಿದ್ದಾರೆ.
”ಈ ಬಾರಿಯ ಲೋಕಸಭಾ ಚುನಾವಣೆಯು ಮುಕ್ತ ಸ್ಪರ್ಧೆಯ ಚುನಾವಣೆಯಾಗಿರುತ್ತದೆ ಮತ್ತು ಎಲ್ಲ 543 ಕ್ಷೇತ್ರಗಳಲ್ಲಿಯೂ ಅತ್ಯಂಕ ನಿಕಟ ಮತ್ತು ಕತ್ತುಕತ್ತಿನ ಸ್ಪರ್ಧೆ ಇರಲಿದೆ” ಎಂದು ಓವೈಸಿ ಹೇಳಿದರು.
”ಕೇಂದ್ರದಲ್ಲಿ ಈ ಬಾರಿ ಅಧಿಕಾರಕ್ಕೆ ಬರಲಿರುವ ಬಿಜೆಪಿಯೇತರ, ಕಾಂಗ್ರೆಸ್‌ಯೇತರ ರಂಗದ ಸರಕಾರದಲ್ಲಿ ನಮ್ಮ ಎಐಎಂಐಎಂ ಪಕ್ಷ ಕೂಡ ನಿಶ್ಚಿತವಾಗಿಯೂ ಮುಖ್ಯ ಪಾತ್ರ ವಹಿಸಲಿದೆ” ಎಂದಿರುವ ಓವೈಸಿ, ”ಬಿಜೆಪಿಯೇತರ, ಕಾಂಗ್ರೆಸ್‌ಯೇತರ ರಂಗದ ನೇತೃತ್ವವನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್0 ಸ್ಥಾಪಕ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ವಹಿಸಲಿದ್ದಾರೆ” ಎಂದು ಹೇಳಿದರು.
”ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತಲೂ ಹೆಚ್ಚು ಸಮರ್ಥರಿರುವ ಅನೇಕ ಪ್ರಾದೇಶಿಕ ನಾಯಕರಿದ್ದಾರೆ. ಆದುದರಿಂದ ಬಿಜೆಪಿಯೇತರ ಕಾಂಗ್ರೆಸ್‌ಯೇತರ ರಂಗವು ಭಾರತದ ರಾಜಕೀಯ ವೈವಿಧ್ಯತೆಯನ್ನು ಪ್ರತಿನಿಧಿಸಲಿದೆ” ಎಂದು ಓವೈಸಿ ಹೇಳಿದರು.
”ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿ ಹಾಕುವ ಹತಾಶೆಯಲ್ಲಿ ರಾಷ್ಟ್ರೀಯ ಭದ್ರತೆ ವಿಷಯವನ್ನು ಮೇಲಕ್ಕೆತ್ತುತ್ತಿದೆ. ಆದರೆ ಜನರು ಈ ಬಾರಿ ಮೋದಿ ಅವರ ಜುಮ್ಲಾಗಳಿಗೆ (ಸುಳ್ಳು ಆಶ್ವಾಸನೆಗಳಿಗೆ) ಬಲಿ ಬೀಳದಿರುವಷ್ಟು ಜಾಣರಾಗಿದ್ದಾರೆ ಮತ್ತು ಅತೀ ಹೆಚ್ಚಿನ ಜವಾಬ್ದಾರಿಯಿಂದ ಮತ ಚಲಾಯಿಸಲಿದ್ದಾರೆ” ಎಂದು ಓವೈಸಿ ಹೇಳಿದರು.
”ಮೊದಲು ಸರ್ಜಿಕಲ್ ಸ್ಟ್ರೈಕ್ ಆಯಿತು; ಅನಂತರ ಬಾಲಾಕೋಟ್ ವಾಯು ದಾಳಿ ಆಯಿತು; ಈಗ ಸೆಟಲೈಟ್ ನಿಗ್ರಹ ಮಿಶನ್ ಶಕ್ತಿ ಯನ್ನು ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ದಿನನಿತ್ಯ ಎಂಬಂತೆ ಹೊಸ ಹೊಸ ರಾಷ್ಟ್ರೀಯ ಭದ್ರತಾ ವಿಷಯವನ್ನು ಬಿಜೆಪಿ ಮೇಲಕ್ಕೆ ತರುತ್ತಿದೆ; ಇವೆಲ್ಲವೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣುವ ಅದರ ಹತಾಶೆಯ ಪ್ರತೀಕವಾಗಿವೆ” ಎಂದು ಓವೈಸಿ ಹೇಳಿದರು.